ಮಂಗಳೂರು| ಮನಪಾ ವ್ಯಾಪ್ತಿಯಲ್ಲಿ ಟಿಡಿಆರ್ ದಂಧೆ ಆರೋಪ: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ರಿಗೆ ಬಹಿರಂಗ ಪತ್ರ

Update: 2024-07-27 11:37 GMT

ಮಂಗಳೂರು, ಜು.27: ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತದಲ್ಲಿ ರಿಯಲ್ ಎಸ್ಟೇಟ್, ಬಿಲ್ಡರ್ ಲಾಬಿ ವಿಪರೀತವಾಗಿದ್ದು, ರಸ್ತೆ ನಿರ್ಮಾಣ, ಅಗಲೀಕರಣ, ಚರಂಡಿ, ಫುಟ್ ಪಾತ್ ಗಳಿಗೆ ಜಮೀನು ಸ್ವಾಧೀನಕ್ಕೆ ಬಳಕೆಯಾಗುತ್ತಿದ್ದ ಟಿಡಿಆರ್ ಯೋಜನೆ ಈ ಅವಧಿಯಲ್ಲಿ ಬಿಲ್ಡರ್, ರಿಯಲ್ ಎಸ್ಟೇಟ್ ಲಾಭಿಗಳ ಅನುಕೂಲಕ್ಕೆ ತಕ್ಕ ಹಾಗೆ ಬೇಕಾಬಿಟ್ಟಿ ಬಳಕೆಯಾಗುತ್ತಿದೆ ಎಂದು ಆರೋಪಿಸಿ ಡಿವೈಎಫ್‌ಐನ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳರವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ.

ರಿಯಲ್ ಎಸ್ಟೇಟ್ ಲಾಬಿಗಾಗಿ ಹತ್ತಾರು ಎಕರೆ ನಿರುಪಯೋಗಿ ಜಮೀನನ್ನು ಹಲವು ನೆಪಗಳನ್ನು ಮುಂದಿಟ್ಟು ನಿಯಮ ಗಳನ್ನು ಕಡೆಗಣಿಸಿ ಟಿಡಿಆರ್ ಅಡಿ ಖರೀದಿಸಲಾಗುತ್ತಿದೆ. ಇದರಿಂದ ನಗರ ಮಧ್ಯದಲ್ಲಿ ಬಿಲ್ಡರ್‌ಗಳ ಬಹು ಮಹಡಿ ವಸತಿ ಸಂಕೀರ್ಣಗಳು ಟಿಡಿಆರ್ ಸಲ್ಲಿಸಿ ನಿಯಮಗಳ ಪರಿವೆಯೇ ಇಲ್ಲದೆ ಆಕಾಶದೆತ್ತರಕ್ಕೆ ಏರುತ್ತಿದ್ದರೆ, ನಗರ ಪಾಲಿಕೆಯ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಆದಾಯ ನಷ್ಟವಾಗುತ್ತಿದೆ. ಪಾಲಿಕೆ ಪಾಪರ್ ಆಗುತ್ತಿದೆ. ಇತ್ತೀಚೆಗೆ ಬಿಜೆಪಿ ಮುಖಂಡ ಬಿಲ್ಡರ್ ಪಚ್ಚನಾಡಿ ಡಂಪಿಂಗ್ ಯಾರ್ಡ್ಗೆ ತಾಗಿಕೊಂಡ 10 ಎಕರೆ ನಿರುಪಯೋಗಿ ಜಮೀನು ಟಿಡಿಆರ್‌ನಡಿ ಖರೀದಿಗೆ ನಗರ ಪಾಲಿಕೆ (ನಿಯಮಗಳಲ್ಲಿ ಆ ರೀತಿ ಖರೀದಿಗೆ ಅವಕಾಶ ಇಲ್ಲ) ಒಪ್ಪಿಗೆ ಸೂಚಿಸಿದ್ದು, ನಿಯಮ ಬದ್ಧವಾಗಿರದ ಅದೇ ಕಡತ ವಿಲೇವಾರಿಗೆ ಸಹಿ ಹಾಕುವ ವಿಚಾರದಲ್ಲಿ ಪಿತೂರಿ ನಡೆದು ಮೂಡಾ ಕಮೀಷನರ್ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ಮೂಲಕ ಟಿಡಿಆರ್‌ನ ದಂಧೆ ಪಡೆದುಕೊಂಡಿರುವ ಕರಾಳ ಸ್ವರೂಪವೂ ಬಯಲಾಗಿತ್ತು.

ಇದೀಗ ಮತ್ತೊಂದು ಮೆಗಾ ಟಿಡಿಆರ್ ಡೀಲ್‌ಗೆ ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ಕೈ ಹಾಕಿದೆ. ನಗರದ ಹೊರ ವಲಯದಲ್ಲಿರುವ ಮರಕಡ ಗ್ರಾಮದ 9.15 ಎಕರೆ, ಪದವು ಗ್ರಾಮದ 3.45 ಎಕರೆ ಜಮೀನುಗಳನ್ನು ಟಿಡಿಆರ್ ಅಡಿ ಖರೀದಿಸಲು ನಗರ ಪಾಲಿಕೆ ಏಕಪಕ್ಷೀಯವಾಗಿ ತೀರ್ಮಾನಿಸಿದೆ. ಈ ಎರಡೂ ಜಮೀನು ನಗರದ ಅತಿ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸೇರಿರುವಂತದ್ದು. ವಸತಿ ಸಂಕೀರ್ಣ, ಅಪಾರ್ಟ್ ಮೆಂಟ್ ಮುಂತಾದ ಬಳಕೆಗೆ ತೀರಾ ನಿರುಪಯೋಗಿ ಜಮೀನು ಎಂದು ಗುರುತಿಸಲ್ಪಟ್ಟಂತಹದ್ದು. ಈ ಜಮೀನನ್ನು ಟಿಡಿಆರ್ ಅಡಿ ನಗರ ಪಾಲಿಕೆಯ ತಲೆಗೆ ಹಾಕಿ ಅಮೂಲ್ಯ ಮೌಲ್ಯದ ಟಿಡಿಆರ್ ಪಡೆಯಲು ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಲಾಬಿ ಪ್ರಯತ್ನಿಸುತ್ತಲೇ ಬಂದಿದೆ. (ಒಂದು ವೇಳೆ ಈ ಜಮೀನು ವಸತಿ ಸಂಕೀರ್ಣ, ಲೇ ಔಟ್ ಗಳಿಗೆ ಅನುಕೂಲಕರ ಆಗಿದ್ದಲ್ಲಿ ವರ್ಷಗಳ ಕಾಲ ಕಾದು ಬಡವರ ವಸತಿ ಯೋಜನೆಗಾಗಿ ಟಿಡಿಆರ್ ಅಡಿ ಬಿಟ್ಟುಕೊಡುವಂತಹ ಕರುಣಾಮಯಿ ಬಿಲ್ಡರ್ ಗಳು ಮಂಗಳೂರಿನಲ್ಲಂತೂ ನಾವು ಕಂಡಿಲ್ಲ) ಮೂರ್ನಾಲ್ಕು ವರ್ಷಗಳ ಹಿಂದೆ ಐಟಿ ಪಾರ್ಕ್ ನಿರ್ಮಾಣದ ಹೆಸರಿನಲ್ಲಿ ಇದೇ ನಿರುಪಯೋಗಿ ಜಮೀನು ಟಿಡಿಆರ್ ಅಡಿ ಖರೀದಿಸಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮೂಲಕ ಪ್ರಸ್ತಾಪ ನಗರ ಪಾಲಿಕೆ ಮುಂದೆ ತರಲಾಗಿತ್ತು. ಆಗ ನಗರದ ಜನಪರ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತ ಪಡಿಸಿದ್ದವು. ನಿಯಮಗಳ ಉಲ್ಲಂಘನೆಯನ್ನು ಎತ್ತಿತೋರಿಸಲಾಗಿತ್ತು. ವ್ಯಾಪಕ ಜನ ವಿರೋಧದಿಂದಾಗಿ ಸರಕಾರ ಆಗ ಈ ಜಮೀನು ಟಿಡಿಆರ್ ಅಡಿ ಖರೀದಿಸಲು ಒಪ್ಪಿಗೆ ಸೂಚಿಸಲಿಲ್ಲ. ಈಗ ಬಡವರಿಗೆ ವಸತಿ ಯೋಜನೆ ರೂಪಿಸಲು ಎಂಬ ಗುರಾಣಿಯನ್ನು ಮುಂದಿಟ್ಟು ಮತ್ತೆ ಅದೇ ಪಾಳು ಬಿದ್ದಿರುವ ನಿರುಪಯೋಗಿ ಜಮೀನನ್ನು ಟಿಡಿಆರ್ ಅಡಿ ಖರೀದಿಸಲು ನಗರ ಪಾಲಿಕೆ ತೀರ್ಮಾನಿಸಿದೆ. ನಗರದ ಮೇಯರ್ ಸುಧೀರ್ ಶೆಟ್ಟಿ ತೀರಾ ತುರ್ತಿನ ವಿಚಾರ ಎಂಬಂತೆ ಪೂರ್ವಾನ್ವಯ ಅನುಮತಿಯನ್ನು ನೀಡಿ ತರುವಾಯ ನಗರ ಪಾಲಿಕೆಯ ತಿಂಗಳ ಹಿಂದಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಮಂಡಿಸಿದ್ದರು. ಆ ಸಂದರ್ಭ ನಾಗರಿಕ ಸಂಘಟನೆಗಳು ಪ್ರಬಲ ವಿರೋಧ, ವಿಪಕ್ಷ ಕಾಂಗ್ರೆಸ್‌ನ ಹಲವು ಕಾರ್ಪೊರೇಟರ್‌ ಗಳು ಆಕ್ಷೇಪ ವ್ಯಕ್ತ ಪಡಿಸಲು ಮುಂದಾದ ಕಾರಣ ಮುಂದೂಡಲ್ಪಟ್ಟಿದ್ದ ಕಾರ್ಯಸೂಚಿ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಅನುಮೋದನೆಗೊಂಡಿದೆ. ಖೇದದ ಸಂಗತಿ ಏನೆಂದರೆ, ವಿರೋಧ ಪಕ್ಷವಾದ ಕಾಂಗ್ರೆಸ್ ನ ಪಾಲಿಕೆಯ ಸದಸ್ಯರಲ್ಲಿ ಅಬ್ದುಲ್ ರವೂಫ್ ಹಾಗೂ ಅಬ್ದುಲ್ ಲತೀಫ್ ಹೊರತು ಪಡಿಸಿ ಮೌನ ಸಮ್ಮತಿ ಸೂಚಿಸಿದ್ದಾರೆ. ಆಕ್ಷೇಪ ದಾಖಲಿಸುವಾಗ ಕಾಂಗ್ರೆಸ್ ಕಾರ್ಪೊರೇಟರ್ ಅಬ್ದುಲ್ ರವೂಫ್ ಅವರು ಈ ಜಮೀನು ನಾಲಕ್ಕು ದಿಕ್ಕಿನಲ್ಲೂ ಇಳಿಜಾರು ಆಗಿರುವುದು, ವಸತಿ ಯೋಜನೆಗೆ ಇದು ಯೋಗ್ಯವಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿರುವುದನ್ನು ಪ್ರಸ್ತಾಪಿಸಿದರು. ಈ ಸಂದರ್ಭ ಅಬ್ದುಲ್ ಲತೀಫ್ ಹೊರತು ಪಡಿಸಿ ಯಾವ ಪಾಲಿಕೆ ಸದಸ್ಯರೂ ರವೂಫ್ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಮುನೀರ್ ಕಾಟಿಪಳ್ಳ ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ತಮ್ಮ ಗಮನಕ್ಕೆ ತರಲು ಮಂಗಳೂರಿನ ಜನ ಸಾಮಾನ್ಯರ ಹಾಗೂ ಜಾಗೃತ ನಾಗರಿಕರ ಪರವಾಗಿ ಈ ಬಹಿರಂಗ ಪತ್ರವನ್ನು ತಮಗೆ ಬರೆದಿದ್ದೇವೆ. ತಾವು ವಿವಾದಿತ ಮರಕಡ ಟಿಡಿಆರ್ ಕಡತಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರಕಾರದಿಂದ ಅನುಮೋದನೆ ನೀಡಬಾರದು. ಸಚಿವರಾದ ತಮ್ಮ ಹೆಸರನ್ನೇ ಗುರಾಣಿಯಾಗಿಸಿ ಹಗರಣವನ್ನು ನ್ಯಾಯೀಕರಿಸುವ ಬಿಜೆಪಿ ನಗರ ಪಾಲಿಕೆಯ ಈ ಯತ್ನವನ್ನು ತಾವು ವಿಫಲಗೊಳಿಸಬೇಕು ಹಾಗೂ ತನಿಖೆಗೆ ಒಳಪಡಿಸಬೇಕು. ಮಂಗಳೂರು ಪಾಲಿಕೆಯಲ್ಲಿ ಟಿಡಿಆರ್ ಎಂಬುದು ದಂಧೆಯಾಗಿ ಪರಿವರ್ತನೆಗೊಂಡಿದೆ. ಮರಕಡ ಟಿಡಿಆರ್ ಫೈಲ್ ಮಾತ್ರ ಅಲ್ಲದೆ, ಪಚ್ಚನಾಡಿ ಟಿಡಿಆರ್ ಫೈಲ್ ಸಹ ನಿಯಮಗಳನ್ನು ಉಲ್ಲಂಘಿಸಿರುವುದು ಈಗಿನ ಮೂಡಾ ಆಯುಕ್ತರೇ ಗುರುತಿಸಿದ್ದಾರೆ. ಪಚ್ಚನಾಡಿ ಟಿಡಿಆರ್ ಫೈಲ್ ಈಗ ಬೆಂಗಳೂರಿನ ನಿಮ್ಮ ಕಚೇರಿಯಲ್ಲಿ ಪರಿಶೀಲನೆಯ ಹಂತದಲ್ಲಿದೆ ಎಂಬ ಮಾಹಿತಿ ಇದೆ. ಈ ಫೈಲ್ ಅನ್ನೂ ಸಚಿವರಾದ ತಾವು ತಿರಸ್ಕರಿಸಬೇಕು. ಒಟ್ಟಾರೆ ಬಿಜೆಪಿ ನಗರ ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯ ಎಲ್ಲಾ ಟಿಡಿಆರ್ ಡೀಲ್ ಗಳನ್ನೂ ತಾವು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ. ಈ ಎಲ್ಲಾ ಹಗರಣ, ಡೀಲ್‌ಗಳ ವಿರುದ್ಧ ಈಗಾಗಲೆ ಜನಪರ ಸಂಘಟನೆಗಳು ಪರಸ್ಪರ ಸಮಾಲೋಚನೆಯಲ್ಲಿ ತೊಡಗಿದ್ದು, ಬೃಹತ್ ಪಾದಯಾತ್ರೆ, ಹೋರಾಟ ಸಂಘಟಿಸುವ ಕುರಿತು ಚರ್ಚಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಉತ್ಸಾಹಿ ಸಚಿವರಾದ ತಾವು ಮಂಗಳೂರಿನ ನಾಗರಿಕರೊಂದಿಗೆ, ನಾಗರಿಕ ಸಂಘಟನೆಗಳ ಜೊತೆ ನಿಲ್ಲುತ್ತೀರಿ ಎಂದು ಭಾವಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಮುಖವಾಗಿ ನಿಮಗೆ ಪತ್ರ ಬರೆಯಲು ಕಾರಣವಾಗಿದ್ದು, ಬಿಜೆಪಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಡವರಿಗೆ ವಸತಿ ಯೋಜನೆಗೆ ಟಿಡಿಆರ್ ಅಡಿ ಖಾಸಗಿ ಜಮೀನು ಖರೀದಿಸುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ರವರು ಸೂಚಿಸಿದ್ದಾರೆ ಎಂದು ತಮ್ಮನ್ನು ಉಲ್ಲೇಖಿಸಿ ನಗರ ಪಾಲಿಕೆಯ ಆದಾಯಕ್ಕೆ ನೂರು ಕೋಟಿ ಕನ್ನ ಕೊರೆಯುವ ಹಗರಣವನ್ನು ನ್ಯಾಯೀಕರಿಸಲು ಯತ್ನಿಸಿದ್ದಾರೆ. ಅಬ್ದುಲ್ ರವೂಫ್ ಆಕ್ಷೇಪಕ್ಕೆ ಉತ್ತರಿಸುತ್ತಾ ಸಾಮಾನ್ಯ ಸಭೆಯಲ್ಲಿಯೇ ಇಡೀ ಟಿಡಿಆರ್ ಹಗರಣವನ್ನು ನಿಮ್ಮ ತಲೆಗೆ ಕಟ್ಟಲಾಗಿದೆ. ಆ ಮೂಲಕ ಆಕ್ಷೇಪ ಎತ್ತಿದ ಕಾಂಗ್ರೆಸ್ ಸದಸ್ಯರ ಬಾಯಿ ಮುಚ್ಚಿಸಲಾಗಿದೆ. ಇದೇ ಪಾಲಿಕೆಯ ಬಿಜೆಪಿ ಆಡಳಿತವು ಈ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಂಜೂರಾದ, ಇಡ್ಯಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಆರು ನೂರು ಮನೆಗಳಿರುವ ವಸತಿ ಯೋಜನೆಯನ್ನು ಈ ನಾಲ್ಕೂವರೆ ವರ್ಷಗಳ ದೀರ್ಘ ಅವಧಿಯಲ್ಲಿ ಪೂರ್ಣಗೊಳಿಸದೆ ಕಾಮಗಾರಿಯನ್ನು ಅರ್ಧದಲ್ಲೇ ಕೈಬಿಟ್ಟು ಬಡವರ ವಸತಿ ಯೋಜನೆಯ ಕುರಿತು ತನಗಿರುವ ತಾತ್ಸಾರ ನೀತಿಯನ್ನು ಅನಾವರಣಗೊಳಿಸಿದೆ. ಇಲ್ಲಿ ಬಲಾಢ್ಯ ರಿಯಲ್ ಎಸ್ಟೇಟ್ ಲಾಭಿಗಳಿಗೆ ಹತ್ತಾರು ಕೋಟಿ ಲಾಭ ಕೊಡಿಸುವ ಟಿಡಿಆರ್ ಡೀಲ್ ಕುದುರಿಸಲು ಬಡವರ ವಸತಿ ಯೋಜನೆ ಹಾಗೂ ನಗರಾಭಿವೃದ್ಧಿ ಸಚಿವರಾದ ತಮ್ಮ ಹೆಸರನ್ನು ಗುರಾಣಿಯಾಗಿ ಬಳಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


(ಮುನೀರ್ ಕಾಟಿಪಳ್ಳ)

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News