ತೌಡುಗೋಳಿ ಮೊಬೈಲ್ ಟವರ್ ಬಳಿ ಪಕ್ಷಿಗಳ ನಿಗೂಢ ಸಾವು: ಗ್ರಾಮಸ್ಥರಲ್ಲಿ ಆತಂಕ

Update: 2024-07-27 11:45 GMT

ಕೊಣಾಜೆ : ನರಿಂಗಾನ ಗ್ರಾಮದ ಮುಖ್ಯ ಜಂಕ್ಷನ್ ಬಳಿಯ ಮೊಬೈಲ್ ಟವರ್ ಬಳಿಯಲ್ಲಿ ಐದು ಕಾಗೆ, ಎರಡು ಗಿಡುಗ ಹಾಗೂ ಒಂದು ಕುಫುಲು ಪಕ್ಷಿ ಸಾವಿಗೀಡಾಗಿದ್ದು ಗ್ರಾಮಸ್ಥರಲ್ಲಿ ಸಂಶಯದ ಜೊತೆಗೆ ಆತಂಕ ಮೂಡಿಸಿದೆ.

ಸಾವಿಗೀಡಾಗಿರುವ ಸ್ಥಳದಲ್ಲಿಯೇ ಟವರ್ ಇದ್ದು ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದು ಟವರ್ ನಿರ್ಮಾಣಕ್ಕೆ ಗ್ರಾಮದ ಕೆಲವು ಮಂದಿಯ ವಿರೋಧವಿದ್ದರೂ ಅಧಿಕಾರಿಗಳು ಹಕ್ಕಿಗಳು ತೆಂಗಿನಮರಕ್ಕೆ ಯಾವುದೇ ಟವರ್ ನಿಂದ ಹಾನಿಯಾಗದು ಎಂದು ತಿಳಿಸಿದ್ದರಿಂದ ನಿರ್ಮಿಸಲು ಪಂಚಾಯಿತಿ ಅವಕಾಶ ನೀಡಿತ್ತು. ಇದೀಗ ಹಕ್ಕಿಗಳ ಸಾವು ನಿಗೂಢವಾಗಿದೆ.

ತೌಡುಗೋಳಿಯಲ್ಲಿ ಬೀದಿ ನಾಯಿ ಸಂಚಾರ ಹೆಚ್ಚಿದ್ದ ಕಾರಣ ಇತ್ತೀಚೆಗೆ ಬಾಲಕನೊಬ್ಬನ ಮೇಲೆ ನಾಯಿಗಳು ದಾಳಿ ಮಾಡಲು ಮುಂದಾದಾಗ ಆಟೋ ಚಾಲಕರು ಅಟ್ಟಾಡಿಸಿಕೊಂಡು ಹೋಗಿದ್ದರು. ನಾಯಿಗಳ ಮಾರಣ ಹೋಮಕ್ಕಾಗಿ ಯಾರಾದರೂ ವಿಷ ಪದಾರ್ಥ ಬಳಸಿದ್ದು ಅದನ್ನು ಹಕ್ಕಿಗಳು ಸೇವಿಸಿ ಸಾವಿಗೀಡಾಗಿರಬಹುದೇ ಎಂಬ ಸಂದೇಹ ಇದೆ. ಟವರ್ ನ ಬಳಿಯ ಟ್ರಾನ್ಸ್ ಫಾರ್ಮರ್ ಮೆಟ್ಟಿಲಲ್ಲೂ ಕಾಗೆಯೊಂದು ಸತ್ತು ಬಿದ್ದಿದೆ. ಹಾಗೆಯೇ ಹತ್ತು ಇಪ್ಪತ್ತು ಮೀ. ದೂರದಲ್ಲಿಯೂ ಕಳೇಬರವಿದೆ.

ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತಿ ಪಿಡಿಒ, ಸ್ಥಳೀಯ ಮುಖಂಡರು ಭೇಟಿ ನೀಡಿ ಪಂಚಾಯಿತಿ ಅಧ್ಯಕ್ಷರಿಗೆ ಆ ಬಗ್ಗೆ ಮೌಖಿಕ ದೂರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ ಹಕ್ಕಿಗಳು ಯಾವ ರೀತಿಯಲ್ಲಿ ಸಾವಿಗೀಡಾಗಿದೆ ಎಂಬುದನ್ನು ಹಕ್ಕಿಯ ಕಳೇಬರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು ಬಳಿಕ ಬಂದ ವರದಿಯಲ್ಲಿ ಉಲ್ಲೇಖಿತ ಫಲಿತಾಂಶದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.‌



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News