ಯೇನೆಪೋಯ ಸಂಸ್ಥೆ ಉದ್ದೇಶಿತ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ: ಡಾ.ವಿಶ್ವಮೋಹನ್ ಕಟೋಚ್

Update: 2024-07-27 11:50 GMT

ಕೊಣಾಜೆ: ಯೇನೆಪೋಯ ಶಿಕ್ಷಣ ಸಂಸ್ಥೆಯು ಕಳೆದ 25 ವರ್ಷಗಳಲ್ಲಿ ಉದ್ದೇಶಿತ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾ ಗಿದೆ. ಅಲ್ಲದೆ ಶಿಕ್ಷಣದ ಪ್ರಮಾಣವನ್ನು ಗಣನೀಯವಾಗಿ ಉತ್ತಮಗೊಳಿಸಿದ್ದು, ಶೈಕ್ಷಣಿಕ ಉಪಕ್ರಮಗಳ ಮೂಲಕ ಬದಲಾವಣೆಯನ್ನು ತರುವಲ್ಲಿ ಯಶಸ್ಬಿಯಾಗಿದೆ. ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆಗಳ ಸ್ಥಾಪಿಸುವ ಜೊತೆಗೆ ಹಲವು ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ, ಅದು ರಾಷ್ಟ್ರೀಯ ಆರೋಗ್ಯ ನೀತಿಯಲ್ಲೂ ಪ್ರಭಾವಿತವಾಗಿರುವುದು ಶ್ಲಾಘನೀಯ ಎಂದು ಐಸಿಎಂಆರ್ ನ ಮಾಜಿ ಮುಖ್ಯ ನಿರ್ದೇಶಕರಾದ ಡಾ.ವಿಶ್ವಮೋಹನ್ ಕಟೋಚ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯಲ್ಲಿರುವ ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಧೀನದ ಯೇನೆಪೋಯ ವೈದ್ಯಕೀಯ ಕಾಲೇಜು ಇದರ ಬೆಳ್ಳಿ ಹಬ್ಬದ ಸಂಭ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾಲಯದ ವೈದ್ಯಕೀಯ ವ್ಯವಸ್ಥೆಗಳು ಪರಿಸರದ ಅವಿಭಾಜ್ಯ ಭಾಗವಾಗಿ ಹೊರಹೊಮ್ಮಿದ್ದು, ಯುನಾನಿ, ನ್ಯಾಚುರೋಪತಿ, ಆಯುರ್ವೇದ ಔಷಧೀಯ ಪದ್ಧತಿ ಮಾನವತೆಯನ್ನು ಉತ್ತಮವಾಗಿ ಪಸರಿಸಲು ವಿಸ್ತರಿಸಲಾಗಿದೆ. ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ನಿರ್ಧಾರಿತ ಯುಕ್ತಿಯ ಮಿತಿಗಳು ಇದ್ದರೂ, ಅಖಂಡ ವೈದ್ಯಕೀಯ ವ್ಯವಸ್ಥೆ ತತ್ವವು ಪ್ರಾಮುಖ್ಯತೆ ಪಡೆದುಕೊಂಡಿದೆ. ವಿಶ್ವವಿದ್ಯಾಲಯವು ಇವುಗಳನ್ನು ಅರಿತು, ಸುಧಾರಣೆಗಾಗಿ ಪ್ರಯತ್ನಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ವಿಶ್ವವಿದ್ಯಾಲಯವು ತನ್ನ ಅತ್ಯಂತ ಶಕ್ತಿಯನ್ನು ಬಳಸಿಕೊಂಡು ವಿಭಿನ್ನವಾಗಿ ಚಿಂತನೆಯೊಂದಿಗೆ ಆರೋಗ್ಯಕರ ಭಾರತವನ್ನು ಮತ್ತು ಆರೋಗ್ಯಕರ ಜಗತ್ತನ್ನು ನಿರ್ಮಿಸಲು ಸಜ್ಜಾಗಿದೆ ಎಂದರು.

ಐಸಿಎಂಆರ್ ನ ಮಾಜಿ ಮುಖ್ಯ ನಿರ್ದೇಶಕರಾದ ಪ್ರೊ.ನಿರ್ಮಲ್ ಕುಮಾರ್ ಗಂಗೂಲಿ ಮಾತನಾಡಿ, ದಕ್ಷಿಣ ಭಾರತದ ಎಲ್ಲೆಡೆಯೂ ಇಲ್ಲದಂತಹ ವೈದ್ಯಕೀಯ ಸೌಲಭ್ಯಗಳನ್ನು ಯೆನೆಪೋಯ ಒದಗಿಸುತ್ತಿದೆ. ದೈವಿಕ ಗುಣವು ದೇವರ ಆಶೀರ್ವಾದವಾಗಿದೆ. ಶಿಸ್ತಿನಿಂದ, ಪರಂಪರೆ ಹಾಗೂ ಭೂತಕಾಲವನ್ನು ಗೌರವಿಸುವುದು ಶ್ಲಾಘನೀಯ. ಇಂತಹ ಉಪ ಕ್ರಮಗಳಿಂದಾಗಿ ಸಂಸ್ಥೆ 25 ವರ್ಷಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಶಿಕ್ಷಕರನ್ನು ಮತ್ತು ಪೋಷಕರನ್ನು ಗೌರವಿಸುವುದು, ಸಮುದಾಯಕ್ಕೆ ಸೇವೆ ಸಲ್ಲಿಸುವುದು ಆರೋಗ್ಯ ʼಕ್ಷೇತ್ರಗಳ ಪ್ರಮುಖ ಉದ್ದೇಶವಾಗಿದ್ದು,. ಈ ವಿಶ್ವವಿದ್ಯಾಲಯವು ಆಧುನಿಕ ವಿಜ್ಞಾನದಲ್ಲಿ ಹೂಡಿಕೆ ಮಾಡಿ ಎಲ್ಲಾ ವರ್ಗದವರಿಗೂ ಸಮಾನ ರೀತಿಯ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಕಾರ್ಯ ಆರೋಗ್ಯಕರ ಸಮಾಜಕ್ಕೆ ಪೂರಕವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯೇನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯ ದ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು, ಹಳೇಯ ವಿದ್ಯಾರ್ಥಿಗಳ ಸಾಧನೆಯೇ ಸಂಸ್ಥೆಯ ಹೆಮ್ಮೆಯಾಗಿದೆ. ವೈದ್ಯಕೀಯ ಆರೈಕೆ ಮತ್ತು ಸಂಶೋಧನಾ ವರದಿಗಳಿಂದಾಗಿ , ಯೆನೆಪೋಯ ವಿ.ವಿ.ಯು ಯಶಸ್ಸಿನ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಮೂಲಕ ತಂದೆಯವರಾದ ಯೆನೆಪೋಯ ಮೊಯ್ದೀನ್‌ ಕುಂಞಿ ಅವರ ಉದ್ದೇಶಗಳು ಈಡೇರಿದೆ. ಸಮುದಾಯದೊಳಗೆ ಶೈಕ್ಷಣಿಕ ಕ್ರಾಂತಿ ಹಾಗೂ ಆರೋಗ್ಯ ಕ್ರಾಂತಿಯನ್ನು ಸಂಸ್ಥೆ ಸ್ಥಾಪಿಸಿದ್ದು, ಟ್ರಸ್ಟಿಗಳ ಸೇವೆ ಹಾಗೂ ನೌಕರರ ಬದ್ಧತೆಯು ಜಾಗತಿಕ ಮಟ್ಟದಲ್ಲಿ ಆಸ್ಪತ್ರೆಯನ್ನು ಗುರುತಿಸುವಂತೆಯೂ ಮಾಡಿದೆ.

ಅಕಾಡೆಮಿಕ್ ಡೀನ್ ಅಶ್ವಿನಿ ದತ್ತ್ ಆರ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಉಪಪ್ರಾಂಶುಪಾಲ ಡಾ.ಪ್ರಕಾಶ್ ಸಲ್ದಾನ, ಫ್ಯಾಕಲ್ಟಿ ಅಫ್ ಮೆಡಿಸಿನ್ ಡೀನ್ ಡಾ.ಆಭಯ್ ನಿರ್ಗುಡೆ ಮುಖ್ಯ ಅತಿಥಿಗಳಾಗಿದ್ದರು.

ಯೇನೆಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್ .ಮೂಸಬ್ಬ ಅವರು ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಪ್ರಕಾಶ್ ಸಲ್ದಾನ ವಂದಿಸಿದರು. ಕಾರ್ಯಕ್ರಮದಲ್ಲಿ ಕಳೆದ 25 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ನಡೆಸುವ, ನಡೆಸಿ ನಿವೃತ್ತರಾದ ಕುಲಪತಿ, ಉಪಕುಲಪತಿ ಹಾಗೂ ಸಾಧನೆಗೈದ ಹಳೇ ವೈದ್ಯರುಗಳನ್ನು ಅಭಿನಂದಿಸಲಾಯಿತು. ಬೆಳ್ಳಿಹಬ್ಬದ ಪ್ರಯುಕ್ತ ರಚಿಸಲಾದ ಸ್ಮರಣಿಕಾ ಪುಸ್ತಕದ ಬಿಡುಗಡೆಯನ್ನು ನಡೆಸಲಾಯಿತು.

ಸರಕಾರಿ ಶಾಲೆಗೆ ಆಸರೆ !

ಇತ್ತೀಚೆಗೆ ಯೋಗ ಶಿಕ್ಷಕ ಕುಶಾಲಪ್ಪ ಗೌಡ ಅವರು ನಿರಂತರವಾಗಿ ಹಲವು ಗಂಟೆಗಳ ಕಾಲ ಯೋಗ ತರಬೇತಿಯನ್ನು ನೀಡಿ ವಿಶ್ವ ದಾಖಲೆ ಸಾಧಿಸಿದ ಕಾರ್ಯಕ್ರಮದಲ್ಲಿ ದಾನಿಗಳಿಂದ ಸಂಗ್ರಹಿಸಿದ ರೂ. 2,25,225 ನಗದು ಚೆಕ್‌ ಅನ್ನು ಸಂಸ್ಥೆಯ ಚೇರ್‌ ಮೆನ್‌ ವೈ.ಅಬ್ದುಲ್ಲಾ ಕುಂಞಿ ಇವರು ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಸರಕಾರಿ ಶಾಲೆಯ ಅಭಿವೃದ್ಧಿಗೆ ಮೊಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್‌ ಸದಸ್ಯರಿಗೆ ವಿತರಿಸಿದರು.

ಈ ವೇಳೆ ಕುಶಾಲಪ್ಪ ಗೌಡ ಮಾತನಾಡಿ, ಮೊಗ್ರು ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ತಾನು, ಅಲ್ಲಿನ ಸದ್ಯದ ಸ್ಥಿತಿಯನ್ನು ಅರಿತು ಶಾಲೆ ಅಭಿವೃದ್ಧಿ ಹಾಗೂ ಉಳಿಸುವ ಉದ್ದೇಶದೊಂದಿಗೆ ವಿಶ್ವ ದಾಖಲೆಯ ಯೋಗ ನಡೆಸಲು ತೀರ್ಮಾನಿಸಿದೆ. ಅದಕ್ಕಾಗಿ ಯೇನೆಪೋಯ ಸಂಸ್ಥೆ ಸಹಕಾರವನ್ನು ನೀಡಿದೆ. ಅದರಲ್ಲಿ ಸಂಗ್ರಹಿಸಿದ ಹಣದಿಂದ ಇದೀಗ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಆಂಗ್ಲ ಮಾಧ್ಯಮವನ್ನು ಆರಂಭಿಸಿ ಮುಂಬರುವ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News