ಅಂಕೋಲ ಗುಡ್ಡ ಕುಸಿತ ಪ್ರಕರಣ| ಬಿಜೆಪಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ: ಸಚಿವ ಮಾಂಕಾಳ ವೈದ್ಯ

Update: 2024-07-27 12:13 GMT

ಮಂಗಳೂರು: ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿ ಐಆರ್‌ಬಿ (ಐಡಿಯಲ್ ರೋಡ್ ಬಿಲ್ಡರ್ಸ್) ಕಂಪನಿ ಮೇಲೆ ಕೇಸು ದಾಖಲಿಸಲಾಗಿದೆ. ಅರಣ್ಯ ಇಲಾಖೆಯಿಂದಲೂ ಕೇಸು ದಾಖಲಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ತನಿಖೆಗೆ ಸರಕಾರವನ್ನು ಒತ್ತಾಯಿಸಲಾಗಿದೆ. ಆ ಕಂಪನಿ ಮೂಲ ಬಿಜೆಪಿಯಾಗಿದ್ದು, ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಮತ್ತು ಬಂದರು ಖಾತೆ ಸಚಿವ ಮಾಂಕಾಳ ವೈದ್ಯ ಹೇಳಿದ್ದಾರೆ.

ಮೀನುಗಾರಿಕಾ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಮಂಗಳೂರಿಗೆ ಆಗಮಿಸಿದ್ದ ಸಚಿವರು ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಅಂಕೋಲಾದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ ದುರಂತಕ್ಕೆ ಐಆರ್‌ಬಿ ಮತ್ತು ಕೇಂದ್ರ ಸರಕಾರ ನೇರ ಹೊಣೆ ಎಂದು ಆರೋಪಿಸಿದ ಅವರು, ಘಟನೆ ನಡೆದಾಗಿನಿಂದ ನಾನು ಹಾಗೂ ಶಾಸಕ ಸತೀಶ್ ಸೈಲ್ ಬೆಂಗಳೂರಿನ ಅಧಿವೇಶನವನ್ನು ಬಿಟ್ಟು ಅಲ್ಲೇ ಇದ್ದೆವು. ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ಕಳೆದ 11 ವರ್ಷದಿಂದ ಐಆರ್‌ಬಿ ಕಾಮಗಾರಿ ನಡೆಸುತ್ತಿದ್ದು, ಇನ್ನೂ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅವರ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರಂತ ಸಂಭವಿಸಿದೆ ಎಂದರು.

ಅವರಲ್ಲಿ ಒಂದು ಹಿಟಾಚಿ ಕೂಡ ಇಲ್ಲ. ಅದನ್ನು ಕೂಡ ನಾವು ಬೇರೆ ಕಡೆಯಿಂದ ತರಿಸಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕೇಂದ್ರ ತಂಡ ಇಂಥದ್ದೇ ಜಾಗದಲ್ಲಿ ಕುಸಿಯುತ್ತದೆ ಎಂದು ಹೇಳಿದ್ದರೂ ಏನೂ ಮಾಡಲಾಗಲಿಲ್ಲ. ಯಾರೂ ಯೋಚನೆ ಮಾಡದ ರೀತಿಯಲ್ಲಿ ಗುಡ್ಡ ಕುಸಿತವಾಗಿದೆ ಎಂದು ಅವರು ವಿಷಾದಿಸಿದರು.

ಕೇರಳದ ಲಾರಿ ಹೊಳೆಯಲ್ಲಿ ಇರುವುದು ಗೊತ್ತಾಗಿದೆ. ಅದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನೌಕಾಸೇನೆ, ಕೋಸ್ಟ್‌ಗಾರ್ಡ್ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು.

ಇಲ್ಲಿವರೆಗೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿ ಯಾರಿಗೂ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುವುದು ಸರಿಯಲ್ಲ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ 1.25 ಲಕ್ಷ ರು. ನೆರವು ನೀಡಿದ್ದೇವೆ. ಮನೆ ಶುಚಿ ಮಾಡಲು 5 ಸಾವಿರ ರು. ನೀಡಲಾಗಿದೆ. ಮಳೆ ಕಡಿಮೆಯಾದರೆ ತ್ವರಿತ ಕಾರ್ಯಾಚರಣೆ ನಡೆಸಲು ಅನುಕೂಲವಾಗಲಿದೆ. ಗುಡ್ಡದಿಂದ ನೀರು ಬಂದು ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಮುಖ್ಯಮಂತ್ರಿ, ಕಂದಾಯ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾವು ರಾಜಕಾರಣ ಮಾಡುವುದಿಲ್ಲ, ಬಡವರಿಗೆ ಸಹಾಯ ಮಾಡುತ್ತೇವೆ. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಮಾತನಾಡಲು ಸಾಕಷ್ಟಿದೆ. ಅದೇ ಕ್ಷೇತ್ರದಲ್ಲಿ 15 ವರ್ಷ ಶಾಸಕರಾಗಿ, ಮಂತ್ರಿಗಳೂ ಆಗಿದ್ದವರು, ಅವರಿಗೆ ಎನ್‌ಎಚ್‌ಎಐ, ಐಆರ್‌ಬಿ ಯಾರಿಗೆ ಬರುತ್ತದೆ ಎನ್ನುವುದು ಗೊತ್ತಿಲ್ಲವೇ? ಬಿಜೆಪಿಯವರು ಯಾರು ಸಾಯುತ್ತಾರೆ ಎಂದು ನೋಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಸಚಿವ ಮಾಂಕಾಳ ವೈದ್ಯ ಹೇಳಿದರು.

ಸುರತ್ಕಲ್ ಸಮುದ್ರ ಮಧ್ಯೆ ಲಂಗರು ಹಾಕಿರುವ ಸರಕು ನೌಕೆಯಿಂದ ಯಾವುದೇ ರೀತಿಯ ಅಪಾಯ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕೋಸ್ಟ್ ಗಾರ್ಡ್ ಪರಿಶೀಲನೆ ನಡೆಸುತ್ತಿದ್ದು, ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಈಗಾಗಲೇ ನೌಕೆಯಲ್ಲಿ ಕಾಣಿಸಿದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈ ಕುರಿತು ನಿಗಾ ಇರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News