ನೇಮ ಕಟ್ಟುವ ಸಮುದಾಯದ ನಿಂದನೆ: ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಡಿಸಿ, ಪೊಲೀಸ್ ಆಯುಕ್ತರಿಗೆ ಮನವಿ

Update: 2024-09-24 14:28 GMT

ಮಂಗಳೂರು: ಸಾಮಾಜಿಕ ಜಾಲಾತಾಣಗಳಲ್ಲಿ ನೇಮ ಕಟ್ಟುವ ಸಮುದಾಯದ ಸಮುದಾಯದ ವಿರುದ್ಧ ತಪ್ಪು ಸಂದೇಶ ನೀಡುತ್ತಿರುವ ಮತ್ತು ಅಶ್ಲೀಲವಾಗಿ ನಿಂದಿಸುತ್ತಿರುವವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಪಂಬದರ ಯಾನೆ ದೈವಾದಿಗರ ಸಮಾಜ ಸಂಘ(ರಿ) ದ.ಕ.ಜಿಲ್ಲಾಧಿಕಾರಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಸಂಘದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ನೇತೃತ್ವದ ನಿಯೋಗವು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಆಗ್ರಹಿಸಿದೆ.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೋಳಿಪಲ್ಕೆ, ಕಾರ್ಯದರ್ಶಿ ಕಿರಣ್ ಕುಮಾರ್, ಮಾಜಿ ಅಧ್ಯಕ್ಷ ಕಮಲಾಕ್ಷ ಗಂಧಕಾಡು, ಸಂಘದ ಧುರೀಣರಾದ ಮುಖೇಶ್ ಗಂಧಕಾಡು, ಕುಮಾರ ಪಂಬದ ಮೈಲೊಟ್ಟು, ಲಕ್ಷ್ಮಣ್ ಸಾಲ್ಯಾನ್ ಮತ್ತು ನಿಕಿಲ್ ಸಾಲ್ಯಾನ್ ಇದ್ದರು.

ತುಳುನಾಡಿನಲ್ಲಿ ಶತ ಶತ ಮಾನ ಕಾಲದಿಂದಲೂ ದೈವಾರಾಧನೆಯನ್ನು ಪರಿಶಿಷ್ಟ ಜಾತಿಯ, ಪಂಬದ,ಪರವ, ನಲಿಕೆ ಸಮುದಾಯಗಳು ಸಾಂಪ್ರದಾಯ ಬದ್ಧವಾಗಿ ಆರಾಧನಾ ಪರಂಪರೆಯಾಗಿ ಸಾಂಪ್ರದಾಯಿಕ ಚೌಕಟ್ಟಿನೊಳಗೆ ನೇಮದ ಸೇವೆಯನ್ನು ಮಾಡಿಕೊಂಡು ಬರುತ್ತಾ ಇದ್ದು, ಅದನ್ನು ಯಾವುದೇ ಕಾರಣಕ್ಕೂ ಯಕ್ಷಗಾನ, ರಂಗ ಭೂಮಿ, ಚಲನ ಚಿತ್ರ, ಸಾರ್ವಜನಿಕ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸ ಕೂಡದೆಂದು ಈ ಹಿಂದಿನ ಜಿಲ್ಲಾಧಿಕಾರಿ ಅವರು ಆದೇಶಿಸಿರು ತ್ತಾರೆ. ಆದರೆ ಈಗ ಎಲ್ಲಾ ರಂಗಗಳಲ್ಲೂ ಈ ಆದೇಶವನ್ನು ಉಲ್ಲಂಘಿಸಿ ಪ್ರದರ್ಶಿಸಲಾಗುತ್ತಿದೆ. ಮಾತ್ರವಲ್ಲದೆ ನಮ್ಮ ಶೋಷಿತ ಸಮುದಾಯದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆಶ್ಲೀಲವಾಗಿ ನಿಂದನಾ ಬರಹವನ್ನು ಕಲ್ಜಿಗ ಎಂಬ ತುಳು ಸಿನೆಮಾ ತಂಡವರು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿದ್ದು, ಈ ವಿಡಿಯೋಗೆ ವ್ಯಕ್ತಿಯೊಬ್ಬನು ಕಮೆಂಟ್ ಮಾಡಿ ದೈವನರ್ತಕರನ್ನು ಕೆಟ್ಟದ್ದಾಗಿ ನಿಂದಿಸಿದ್ದಾನೆ. ಅಲ್ಲದೆ ಆತ ದೈವ ನರ್ತಕ ಸಮುದಾಯದ ವಿರುದ್ಧ ತುಚ್ಚವಾಗಿ ಬರೆದಿದ್ದಾನೆ ಎಂದು ಪಂಬದರ ಯಾನೆ ದೈವಾದಿಗರ ಸಮಾಜ ಸಂಘದ ಧುರೀಣರು ಆರೋಪಿಸಿದ್ದಾರೆ. ನಮ್ಮ ಸಮುದಾಯದ ವಿರುದ್ಧ ಬಂದಿರುವ ಸುಳ್ಳು ಆರೋಪ ಅಶ್ಲೀಲ ನಿಂದನೆಯಿಂದಾಗಿ ಸಾರ್ವಜನಿಕವಾಗಿ ಸಮುದಾಯ ಮುಜುಗರ ಎದುರಿಸುತ್ತಿದೆ. ನಾವು ಪರಿಶಿಷ್ಟ ಜಾತಿಗೆ ಸೇರಿದ ತಮ್ಮ ಮೇಲೆ ಸಮಾಜ ಘಾತುಕರು ಸವಾರಿ ಮಾಡುತ್ತಿದ್ದು, ಇದು ತಮ್ಮ ಕುಲ ಕಸುಬಿಗೆ ಮತ್ತು ಜಾತಿಗೆ ಮಾಡುತ್ತಿರುವ ಅವಮಾನವಾಗಿದೆ ಇವರನ್ನು ಸೈಬರ್ ಕ್ರೈಮ್ ಕಾಯ್ದೆ ಮುಖೇನ ತನಿಖೆಗೆ ಒಳಪಡಿಸಿ ಇವರ ವಿರುದ್ಧ ಜಾತಿ ನಿಂದನೆ ಕೇಸು ದಾಖಲಿಸಿ ಇನ್ನು ಮುಂದಕ್ಕೆ ಹೀಗೆ ನಡೆಯದ ಹಾಗೆ ಎಲ್ಲಾ ಇಲಾಖೆಗೆ ಆದೇಶ ನೀಡುವಂತೆ ಪಂಬದರ ಯಾನೆ ದೈವಾದಿಗರ ಸಮಾಜ ಸಂಘ(ರಿ) ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News