ಬೀದಿಬದಿ ವ್ಯಾಪಾರಿಗಳ ಹಕ್ಕು ನಿರಾಕರಿಸಿದರೆ ಹೋರಾಟ ತೀವ್ರ : ಬಿಕೆ ಇಮ್ತಿಯಾಝ್

Update: 2024-09-24 14:30 GMT

ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಐಡಿ ಕಾರ್ಡ್, ಪ್ರಮಾಣ ಪತ್ರ ಅಧಿಕಾರಸ್ಥರ ಭಿಕ್ಷೆ ಅಲ್ಲ ಅದು ಅವರ ಹಕ್ಕಾಗಿದೆ ಬೀದಿ ವ್ಯಾಪಾರದ ಕಾನೂನುಬದ್ಧ ಹಕ್ಕನ್ನು ನಿರಾಕರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸಿಐಟಿಯು ಸಂಯೋಜಿತ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ.

ನಗರದ ಮಿನಿ ವಿಧಾನಸೌಧದ ಎದುರು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು) ನೇತೃತ್ವದಲ್ಲಿ ಮಂಗಳವಾರ ಬೀದಿಬದಿ ವ್ಯಾಪಾರಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು .

ಬಿಜೆಪಿ ನಗರಾಡಳಿತದ ಕುಮ್ಮಕ್ಕಿನಿಂದ ಬೀದಿ ಬದಿ ವ್ಯಾಪಾರಸ್ಥರ ಐಕ್ಯತೆಯನ್ನು ಒಡೆದು ಬೀದಿ ವ್ಯಾಪಾರಿಗಳ ಹೋರಾಟ‌ ವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಬಿಜೆಪಿಯ ರಾಜಕೀಯದಾಟಕ್ಕೆ ಬಡ ಬೀದಿಬದಿ ವ್ಯಾಪಾರಸ್ಥರನ್ನು ಬಲಿ ಕೊಡಲು ಸಿಐಟಿಯು ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬೀದಿಬದಿ ವ್ಯಾಪಾರಿಗಳು ಶ್ರಮ ಜೀವಿಗಳಾಗಿದ್ದು ಬಿಸಿಲು ಮಳೆಗೆ ಮೈಯ್ಯೊಡ್ಡಿ ದುಡಿಯುತ್ತಿದ್ದಾರೆ ಅವರ ಪರವಾಗಿ ದೇಶದಲ್ಲಿ ಕಾನೂನು ಜಾರಿಯಲ್ಲಿದ್ದರೂ ಅನುಷ್ಠಾನ ಆಗುತ್ತಿಲ್ಲ . ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ನಡೆಸಿ ದೌರ್ಜನ್ಯ ಮಾಡಲಾಗಿದೆ ಪ್ರತಿಭಟನೆಗೆ ಹೋದರೆ ಐಡಿ ಕಾರ್ಡ್ ಕೊಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತದೆ ಎಂದು ಅವರು ಟೀಕಿಸಿದರು. ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಮುಖಂಡರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್ ಎಸ್, ಹಂಝ ಮುಹಮ್ಮದ್, ಶಿವಪ್ಪ, ವಿಜಯ್ ಶಕ್ತಿನಗರ, ಗುಡ್ಡಪ್ಪ, ಸಿಕಂದರ್, ಕಾಜ ಮೊಯ್ದಿನ್,ಸಲಾಂ ಜನತಾಕಾಲನಿ, ಹನೀಫ್ ಸುರತ್ಕಲ್, ಶೈಲಾ ಸಿಕ್ವೇರಾ, ಆನಂದ ಕೃಷ್ಣಾಪುರ, ಚಂದ್ರಶೇಖರ ರಾವ್,ಗಂಗಮ್ಮ,ಸುನೀತಾ ಸುರತ್ಕಲ್, ಸೋಮಿ ಬಾಯಿ, ವಿಜಯ್ ತಲಪಾಡಿ, ಗದಿಗಪ್ಪ, ವಿನಾಯಕ್ ಶೆಣೈ,ನವೀನ್ ಶೆಟ್ಟಿ,ವಿನೋದ್, ಯೋಗಿತಾ ಸುವರ್ಣ ,ಜಾತ್ರೆ ವ್ಯಾಪಾರಸ್ಥರ ಸಂಘದ ಅಶ್ರಫ್, ಶಫಿಯುಲ್ಲಾ,ಉಮರ್ ಮುಂತಾದವರು ಉಪಸ್ಥಿತರಿದ್ದರು.

*15ದಿನಗಳ ಒಳಗೆ ಐಡಿ ಕಾರ್ಡ್: ವಿರೋಧಿಗಳ ವ್ಯಾಪಕ ಅಪಪ್ರಚಾರ ಮತ್ತು ಧಾರಾಕಾರ ಸುರಿದ ಮಳೆಯ ನಡುವೆ ಬೀದಿಬದಿ ವ್ಯಾಪಾರಿಗಳು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು 15 ದಿವಸದ ಒಳಗೆ ಬೀದಿಬದಿ ವ್ಯಾಪಾರಿಗಳ ಐಡಿ ಕಾರ್ಡ್, ಪ್ರಮಾಣ ಪತ್ರ ವಿತರಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News