ಎಡಪಂಥೀಯ ವಿಚಾರಧಾರೆಯಿಂದ ದೇಶ ಉಳಿಸಲು ಸಾಧ್ಯ: ಬಾಲಕೃಷ್ಣ ಶೆಟ್ಟಿ

Update: 2024-10-06 12:46 GMT

ಬಂಟ್ವಾಳ : ಅಮೇರಿಕನ್ ಸಾಮ್ರಾಜ್ಯಶಾಹಿಗಳ ನೇತೃತ್ವದಲ್ಲಿ ವಿಶ್ವವನ್ನು ಕಪಿಮುಷ್ಠಿಯಲ್ಲಿರಿಸಲು ಜಾಗತಿಕ ಬಂಡವಾಳ ಶಾಹಿಗಳು ನಡೆಸುವ ಪಿತೂರಿಯಿಂದ ಜಗತ್ತಿನ ಸಾಮಾನ್ಯ ಜನತೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇವರ ಲಾಭಕೋರ ತನದಿಂದಾಗಿ ಬಡವರು, ದುಡಿಯುವ ವರ್ಗ, ಶೋಷಿತ ಜನತೆಯ ಬದುಕು ಸರ್ವನಾಶವಾಗುತ್ತಿದೆ. ಬಲಪಂಥೀಯ ಶಕ್ತಿಗಳು ತನ್ನ ಮೂಲ ಅಜೆಂಡಾವನ್ನು ಬಿಚ್ಚಿಡುತ್ತಿದ್ದು, ಜಗತ್ತಿನೆಲ್ಲೆಡೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ. ಇದಕ್ಕೆ ಎದುರಾಗಿ ಜಗತ್ತಿನಲ್ಲಿ ಎಡಪಂಥೀಯ ವಿಚಾರಧಾರೆಗಳು ಬಲಗೊಳ್ಳುತ್ತಿದೆ. ಹಾಗಾಗಿ ಎಡಪಂಥೀಯ ವಿಚಾರಧಾರೆ ಗಳಿಂದ ಮಾತ್ರ ದೇಶ ಹಾಗೂ ಅಲ್ಲಿನ ಜನತೆಯ ಬದುಕನ್ನು ರಕ್ಷಿಸಲು ಸಾಧ್ಯ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು.

ಬಿಸಿ ರೋಡ್‌ನ ರಿಕ್ಷಾ ಭವನದ ಸೀತಾರಾಮ ಯೆಚೂರಿ ವೇದಿಕೆಯಲ್ಲಿ ರವಿವಾರ ನಡೆದ ಸಿಪಿಎಂ 24ನೇ ಬಂಟ್ವಾಳ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸದಾಶಿವದಾಸ್ ಸಮ್ಮೇಳನದ ಮಾರ್ಗದರ್ಶಕರಾಗಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಜರುಗಿದ ಪ್ರತಿನಿಧಿ ಅಧಿವೇಶನದ ಅಧ್ಯಕ್ಷತೆಯನ್ನು ಸಿಪಿಎಂ ಮುಖಂಡ ಉದಯ ಕುಮಾರ್ ವಹಿಸಿದ್ದರು. ಕಳೆದ 3 ವರ್ಷಗಳ ಕರಡು ವರದಿಯನ್ನು ಸಿಪಿಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಂಡಿಸಿದರು.

ಈ ಸಂದರ್ಭ ಬಂಟ್ವಾಳ ತಾಲೂಕು ನೂತನ ಸಂಘಟನಾ ಕಾರ್ಯದರ್ಶಿಯನ್ನಾಗಿ ಚಂದ್ರ ಪೂಜಾರಿ ಬೋಳಂತೂರು ಅವರನ್ನು ಆಯ್ಕೆಗೊಳಿಸಿತು. ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಜರುಗಲಿರುವ ದ.ಕ.ಜಿಲ್ಲಾ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಆಯ್ಕೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News