ಕರಾವಳಿಯಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತರ ಕುರಲ್ ಪರ್ಬ

Update: 2024-10-06 14:45 GMT

ಮಂಗಳೂರು: ಮಳೆ-ಬೆಳೆ ನೀಡಿದ ದೇವರನ್ನು ಸ್ಮರಿಸಿ ಕೃತಜ್ಞತೆ ಅರ್ಪಿಸಿ, ಆರಾಧನೆ, ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಕರಾವಳಿಯ ಪ್ರೊಟೆಸ್ಟಂಟ್ ಕ್ರೈಸ್ತರು ಹೊಸ ಬೆಳೆಯ ಹಬ್ಬ/ಕುರಲ್ ಪರ್ಬ ರವಿವಾರ ಆಚರಿಸಿದರು.

ಬೆಳಗ್ಗೆ ಚರ್ಚ್‌ಗಳಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತರು ಭಾಗವಹಿಸಿ ಪ್ರಕೃತಿಯ ವರಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದರು. ತಮ್ಮ ಕೃಷಿ ಜಮೀನಿನ ಬೆಳೆಗಳನ್ನು ಪ್ರಾರ್ಥನೆ ವೇಳೆ ಭಕ್ತಿಪೂರ್ವಕವಾಗಿ ದೇವರಿಗೆ ಅರ್ಪಿಸಿ ಕೃತಜ್ಞತೆ ಸಲ್ಲಿಸಲಾಯಿತು.

ಬಲ್ಮಠ ಸಿಎಸ್‌ಐ ಶಾಂತಿ ಕೆಥೆಡ್ರಲ್‌ನಲ್ಲಿ ಸಭಾಪಾಲಕ ವಂ. ಪ್ರಭುರಾಜ್ ಹಾಗೂ ವಂ. ಗೋಲ್ಡಿನ್ ಬಂಗೇರ ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿದರು. ಸಿಎಸ್‌ಐ ಬಿಷಪ್ ಅ.ವಂ. ಹೇಮಚಂದ್ರ ಕುಮಾರ್ ಹಬ್ಬದ ಸಂದೇಶ ನೀಡಿ, ದಾನ ಧರ್ಮದ ಮೂಲಕ ಜೀವನ ನಡೆಸುವಂತೆ ಕರೆ ನೀಡಿದರು.

ಮಡಿಕೇರಿಗುಡ್ಡೆ ಸುಶಾಂತಿ ಚರ್ಚ್, ಗೋರಿಗುಡ್ಡೆ ಹೆಬಿಕ್ ಮೆಮೋರಿಯಲ್ ಚರ್ಚ್‌ಗಳಲ್ಲಿ ಹಬ್ಬ ಆಚರಿಸಲಾಯಿತು. ಅ.9ರಂದು ಬೆಳ್ಮ ಸಿಎಸ್‌ಐ ಚರ್ಚ್ ಹಾಗೂ ಬೊಕ್ಕಪಟ್ಟಣ ವಿಶ್ರಾಂತಿ ಚರ್ಚ್‌ನಲ್ಲಿ ಹಬ್ಬದ ಆಚರಣೆ ನಡೆಯಲಿದೆ. ಉಳಿದ ಸಿಎಸ್‌ಐ ಚರ್ಚ್‌ಗಳಲ್ಲಿ ಮುಂದಿನ ದಿನಗಳಲ್ಲಿ ಹಬ್ಬದ ಆಚರಣೆ ನಡೆಯಲಿದೆ.

ಚರ್ಚ್‌ಗಳಲ್ಲಿ ಆರಾಧನೆಯ ಬಳಿಕ ಮಕ್ಕಳಿಗೆ ಕಬ್ಬು ಮತ್ತು ಕುಟುಂಬಗಳಿಗೂ ತೆನೆ ವಿತರಿಸಲಾಯಿತು. ಅವುಗಳನ್ನು ಮನೆಗೆ ಕೊಂಡೊಯ್ದು ಸಂಪ್ರದಾಯದಂತೆ ಕುಟುಂಬ ಸದಸ್ಯರು ಜತೆಯಾಗಿ ಸೇವಿಸಿ ತರಕಾರಿ ಭೋಜನ ಸವಿದರು. ಸಂಜೆ ಕ್ರೈಸ್ತರಿಗಾಗಿ ವಿವಿಧ ಆಟೋಟಗಳನ್ನು ಚರ್ಚ್‌ಗಳಲ್ಲಿ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ಪ್ರೊಟೆಸ್ಟಂಟ್ ಕ್ರೈಸ್ತರು ಈ ಹಬ್ಬ ಆಚರಿಸುತ್ತಾರೆ. ಸಾಮಾನ್ಯವಾಗಿ ಅಕ್ಟೋಬರ್ - ನವೆಂಬರ್‌ನಲ್ಲಿ ಈ ಆಚರಣೆ ಬರುತ್ತದೆ. ಆದರೆ ತುಳುನಾಡಿನಲ್ಲಿ ಹೆಚ್ಚಾಗಿ ಭತ್ತದ ಬೆಳೆ ಕೊಯ್ಲಿಗೆ ಬರುವ ವೇಳೆ ಈ ಹಬ್ಬ ಆಚರಿಸುತ್ತಾರೆ. ನವೆಂಬರ್ ಅಂತ್ಯದವರೆಗೆ ವಿವಿಧ ಚರ್ಚ್‌ಗಳಲ್ಲಿ ಈ ಆಚರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News