ಬ್ಯಾಂಕ್ ಸಾಲಕ್ಕೆ ಸಹಕಾರದ ಭರವಸೆ ನೀಡಿ ವಂಚನೆ: ಪ್ರಕರಣ ದಾಖಲು
ಮಂಗಳೂರು: ನಗರದ ನಿವಾಸಿಯೊಬ್ಬರಿಗೆ ಬ್ಯಾಂಕ್ ಸಾಲ ಪಡೆಯಲು ಸಹಕಾರ ನೀಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಸಾಲ ಪಾವತಿಯಾದ ಬಳಿಕ ಫ್ಲ್ಯಾಟ್‌ನ್ನು ವಾರಸುದಾರರಿಗೆ ಹಸ್ತಾಂತರಿಸದೆ ವಂಚಿಸಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದೆ. ಮಂಗಳೂರಿಗೆ ಬಂದ ಬಳಿಕ ಮನೆ ಖರೀದಿಸಲು ನಿರ್ಧರಿಸಿದಾಗ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕಿತ್ತು. ಈ ಸಂದರ್ಭ ಆಕಸ್ಮಿಕವಾಗಿ ತನಗೆ ಸುಧೀರ್ ಎಂಬಾತನ ಪರಿಚಯ ವಾಗಿದ್ದು, ಆತ ಸಾಲ ತೆಗೆಸಿಕೊಡುವುದಾಗಿ ನಂಬಿಸಿದ್ದ. ಹಾಗೇ ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್‌ನಲ್ಲಿ ಸಾಲ ಕೊಡಿಸುವುದಾಗಿ ಹೇಳಿದ. ನಂತರ ಬ್ಯಾಂಕಿಗೆ ಭೇಟಿ ನೀಡಿದಾಗ ಬ್ಯಾಂಕ್‌ನವರು ಸುಧೀರ್‌ನ ಹೆಸರಿನಲ್ಲಿ ಸಾಲ ಮಂಜೂರು ಮಾಡುವುದಾಗಿ ತಿಳಿಸಿದ್ದರು. ಅದರಂತೆ ಸುಧೀರ್ ಬ್ಯಾಂಕಿಗೆ ತನ್ನ ಹೆಸರಿನಲ್ಲಿರುವ ದಾಖಲಾತಿಗಳನ್ನು ನೀಡಿ ಗೃಹ ಸಾಲ ಮಂಜೂರು ಮಾಡಿಸಿಕೊಂಡಿದ್ದ. ಬ್ಯಾಂಕ್ ಲೋನ್ ಸುಧೀರ್ ಹೆಸರಿನಲ್ಲಿರುವುದ ರಿಂದ ಫ್ಲ್ಯಾಟ್ ಕೂಡಾ ಅದೇ ಹೆಸರಲ್ಲಿ ನೋಂದಾಯಿಸಿಕೊಂಡಿದ್ದ. ಬ್ಯಾಂಕ್ ಸಾಲ ಪೂರ್ಣಗೊಂಡ ನಂತರ ಅಪಾರ್ಟ್ ಮೆಂಟನ್ನು ತನ್ನ ಹೆಸರಿಗೆ ವರ್ಗಾಯಿಸುವುದಾಗಿ ಆರೋಪಿ ತಿಳಿಸಿದ್ದ. ಈ ಮಧ್ಯೆ ಆರೋಪಿಯು ತನ್ನಿಂದ 10 ಲಕ್ಷ ರೂ. ಸಾಲ ಪಡೆದುಕೊಂಡು 6 ತಿಂಗಳಲ್ಲಿ ವಾಪಸ್ ನೀಡುವುದಾಗಿ ತಿಳಿಸಿದ್ದ. ಆದರೆ ಸಾಲ ಮರು ಪಾವತಿಯಾದ ಬಳಿಕವೂ ಸುದೀರ್ ಫ್ಲ್ಯಾಟ್‌ನ್ನು ತನ್ನ ಹೆಸರಿಗೆ ಮಾಡಿಸದೆ ವಂಚಿಸಿದ್ದಾನೆ. ಅಲ್ಲದೆ ಸಾಲದ ರೂಪದಲ್ಲಿ ಪಡೆದ 10 ಲಕ್ಷ ರೂ.ನ್ನು ಕೂಡಾ ಮರುಪಾವತಿ ಮಾಡಿಲ್ಲ ಎಂದು ವಂಚನೆಗೊಳಗಾದ ವ್ಯಕ್ತಿ ಬಂದರು ಠಾಣೆಗೆ ನಿಡಿದ ದೂರಿನಲ್ಲಿ ತಿಳಿಸಿದ್ದಾರೆ.