ಕಾನೂನು ಸೌಲಭ್ಯಗಳ ಬಗ್ಗೆ ಜನಸಾಮಾನ್ಯರು ತಿಳಿದಿರಬೇಕು: ಸಿವಿಲ್ ನ್ಯಾಯಾಧೀಶೆ ಶೋಭಾ

Update: 2024-11-04 15:23 GMT

ಮಂಗಳೂರು: ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನೀಡಲಾಗುವ ಹಲವಾರು ಕಾನೂನು ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ, ಕಾರ್ಮಿಕರ ಭವಿಷು ನಿಧಿ ಸಂಘಟನೆ, ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾ ರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ರ್ಕಾುಕ ಇಲಾಖೆಯಿಂದ ಅನುಷ್ಠಾಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜನಸಾಮಾನ್ಯರಿಗೆ ಕೋರ್ಟ್‌ನಲ್ಲಿ ವಕೀಲರನ್ನು ನೇಮಕ ಮಾಡಲು ಸಾಧ್ಯವಾಗದಿದ್ದಾಗ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೆಲವು ಅರ್ಹತೆಗಳಿಗೆ ಅನುಗುಣವಾಗಿ ಉಚಿತವಾಗಿ ವಕೀಲರನ್ನು ಒದಗಿಸಲಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಸಮಿತಿಗಳಿವೆ. ಕೇವಲ ಕೋರ್ಟ್ ಕೇಸ್ ಮಾತ್ರವಲ್ಲದೆ ಕೆಲವೊಂದು ಕೌಟುಂಬಿಕ, ವೈಯಕ್ತಿಕ, ಸರಕಾರದಿಂದ ಸೌಲಭ್ಯಗಳು ಸರಿಯಾಗಿ ಸಿಗದಿದ್ದಾಗ ಸರಕಾರಿ ಕಚೇರಿ ಕೆಲಸದಲ್ಲಿ ವಿಳಂಬ ಮುಂತಾದ ಸಮಸ್ಯೆಗಳಿಗೆ ಪರಿಹಾರ ಮತ್ತು ಸಲಹೆ ಸೂಚನೆಗಳನ್ನು ಪ್ರಾಧಿಕಾರದಿಂದ ನೀಡಲಾಗುತ್ತದೆ ಎಂದು ನ್ಯಾಯಾಧೀಶೆ ಶೋಭಾ ಹೇಳಿದರು.

ಕೆಲವೊಂದು ಕೇಸುಗಳಲ್ಲಿ ಸಂತ್ರಸ್ಥರಿಗೆ ಪರಿಹಾರವನ್ನು ಒದಗಿಸಿಕೊಡುವ ಕೆಲಸವನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತದೆ. ಅದಕ್ಕಾಗಿ ಸಂತ್ರಸ್ಥರು ಪ್ರಾಧಿಕಾರಕ್ಕೆ ಅರ್ಜಿ ಕಳುಹಿಸಬೇಕು. ಸಮಿತಿಯು ಸಮಸ್ಯೆಗಳನ್ನು, ಹಾನಿಯನ್ನು ಗಮನಿಸಿ ಪರಿಹಾರವನ್ನು ನೀಡಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತದೆ. ಕಾನೂನು ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ಪ್ರಾಧಿಕಾರದಲ್ಲಿರುವ ಫ್ರೆಂಡ್ ಆಫೀಸ್ ಮೂಲಕ ಮಾಹಿತಿಯನ್ನು ಪಡೆಯಬಹುದು ಅಥವಾ ಪ್ರಾಧಿಕಾರದ ಹೆಲ್ಪ್‌ಲೈನ್ ಸಂಪರ್ಕಿಸಬಹುದು ಎಂದು ನುಡಿದರು.

ಕಾನೂನು ಸೇವೆಗಳ ಪ್ರಾಧಿಕಾರವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಜನರಿಗೆ ಕಾನೂನು ವಿದ್ಯಾರ್ಥಿಗಳ ಜೊತೆಗೂಡಿ ಸರ್ವೆ ಕಾರ್ಯವನ್ನು ನಡೆಸಿ ನೆರವು ನೀಡುತ್ತದೆ ಎಂದರು.

ದ.ಕ.ಜಿಪಂ ಸಿಇಒ ಡಾ. ಆನಂದ್ ಕೆ. ಮಾತನಾಡಿದರು. ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಆಯುಕ್ತ ಎ.ಪಿ.ಉನ್ನಿಕೃಷ್ಣನ್, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷಣೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಖಾನೆಗಳ ಉಪ ನಿರ್ದೇಶಕ ಎಂ.ಎಸ್. ಮಹಾದೇವ್, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಮತ್ತು ವೈದ್ಯಕೀಯ ಸೇವೆ, ಉಪ ಕೇಂದ್ರೀಯ ಕಾಯಾಲಯ ಉಪ ನಿರ್ದೇಶಕ ಗುರುಂದರ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎ. ಉಸ್ಮಾನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ಬಿ.ಎಸ್. ಹೇಮಲತಾ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಮನೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News