ಮಂಗಳೂರು| ಮಾನವ ಹಕ್ಕುಗಳು - ಇಶ್ಯೂಸ್ ಆ್ಯಂಡ್ ಕನ್ಸರ್ನ್ಸ್ ಕುರಿತು ಉಪನ್ಯಾಸ
ಮಂಗಳೂರು: ಮಾನವ ಹಕ್ಕುಗಳು ಸರ್ವವ್ಯಾಪಿಯಾಗಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಅನುಭವಿಸಬಹುದಾದ ಹಕ್ಕುಗಳು. ಈ ಹಕ್ಕುಗಳ ರಕ್ಷಣೆಯಲ್ಲಿ ಸರಕಾರ, ಸಮಾಜ ಮತ್ತು ನಾಗರಿಕರು ಜೊತೆಯಾಗಿ ಕೆಲಸ ಮಾಡಬೇಕು. ಯುವ ಸಮುದಾಯಕ್ಕೆ ಪಾರದರ್ಶಕ ಉತ್ತರದಾಯಿತ್ವದ ಆಡಳಿತವನ್ನು ರೂಪಿಸುವ ಮಹತ್ವದ ಹೊಣೆಗಾರಿಕೆಯಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‍ನ ಮಾನವ ಹಕ್ಕುಗಳ ವೇದಿಕೆ, ಮಾನವಿಕ ವಿಭಾಗ, ಗ್ರಾಹಕ ಹಕ್ಕುಗಳ ವೇದಿಕೆ ಮತ್ತು ಮಹಿಳಾ ವೇದಿಕೆ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶಗಳ ಸಹಭಾಗಿತ್ವದಲ್ಲಿ ಆಯೋಜಿಸಿರುವ ಮಾನವ ಹಕ್ಕುಗಳು - ಇಶ್ಯೂಸ್ ಆ್ಯಂಡ್ ಕನ್ಸರ್ನ್ಸ್ ಕುರಿತಂತೆ ಸರಣಿ ಉಪನ್ಯಾಸವನ್ನು ಉದ್ಘಾಟಿಸಿ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಉತ್ತಮ ಆಡಳಿತದ ಪಾತ್ರದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮುಖ್ಯ ಅತಿಥಿ ಹಿಂದು ವಿದ್ಯಾದಾಯಿನೀ ಸಂಘ, ಸುರತ್ಕಲ್‍ನ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಚ್. ಮಾತನಾಡಿ ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ಜ್ಞಾನವನ್ನು ಹೊಂದಿರುವುದು ಅಗತ್ಯವಾಗಿದೆ. ಮಾನವ ಹಕ್ಕುಗಳು ವಿಶ್ವದಾದ್ಯಂತ ವಾಸಿಸುತ್ತಿರುವ ಜನರ ಮೂಲಭೂತ ಹಕ್ಕುಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ ಪ್ರತಿಯೊಬ್ಬರು ಗೌರವಯುತವಾಗಿ ಬದುಕಲು ಮಾನವ ಹಕ್ಕುಗಳು ಅಗತ್ಯವಾಗಿದೆ ಎಂದರು.
ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಶರ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ವಂದಿಸಿದರು.
ಹಿಂದು ವಿದ್ಯಾದಾಯಿನೀ ಸಂಘದ ಜೊತೆ ಕಾರ್ಯದರ್ಶಿ ಎಂ. ಜಿ. ರಾಮಚಂದ್ರ, ಸದಸ್ಯ ಪ್ರಸಿದ್ಧ ಪಿ., ಆಡಳಿತಾಧಿಕಾರಿ ಮೃದುಲಾ, ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ., ಗ್ರಾಹಕ ಹಕ್ಕುಗಳ ಸಂಘದ ಸಂಯೋಜಕಿ ದಯಾ ಸುವರ್ಣ, ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್, ಸಲಹೆಗಾರ ಗಂಗಾಧರ ಪೂಜಾರಿ, ಗೋವಿಂದ ದಾಸ ಅಲ್ಯುಮ್ನಿ ಅಸೋಸಿಯೇಶನ್ ನ ಸದಸ್ಯರಾದ ಸುಂದರ ಸಾಲ್ಯಾನ್, ಗೀತಾ ಸುರತ್ಕಲ್, ಜಗದೀಶ್ ಪಣಂಬೂರು, ಸರ್ವಜ್ಞ ಐಎಎಸ್ ಅಕಾಡೆಮಿಯ ಸುರೇಶ್, ವಿದ್ಯಾರ್ಥಿ ಸಂಯೋಜಕರಾದ ಧನ್ವಿನ್, ಶಮಾ ಫರ್ಹಾನ ಸ್ಮಿತಾ ಮತ್ತಿತರರು ಉಪಸ್ಥಿತರಿದ್ದರು.