ಪತ್ನಿಗೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಪ್ರಕರಣ: ಆರೋಪಿ ಪತಿಯ ಬಂಧನ
ಮಂಗಳೂರು: ಪ್ರೀತಿಸಿ ಮದುವೆಯಾದ ಪತಿಯು ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಾನಸಿಕವಾಗಿ ಹಿಂಸಿಸಿ, ದೈಹಿಕವಾಗಿ ಹಲ್ಲೆ ನಡೆಸಿ ತನಗೆ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಪತಿಯ ವಿರುದ್ಧ ಪತ್ನಿಯು ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಪ್ರಕರಣ ದಾಖಲಿಸಿರುವ ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿ ವಾಸವಾಗಿರುವ ದಿಲ್‌ಫಾಝ್‌ನನ್ನು ನಾನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೆ. ನನ್ನ ತಂದೆಯ ವಿರೋಧದ ಮಧ್ಯೆಯೂ 2019ರ ಎಪ್ರಿಲ್ 20ರಂದು ನಮ್ಮ ಮದುವೆಯಾಗಿತ್ತು. ಈ ಸಂದರ್ಭ ತಂದೆಯು 22 ಪವನ್ ಚಿನ್ನಾಭರಣವನ್ನು ನೀಡಿದ್ದರು. ಅದಲ್ಲದೆ ವಾಚ್ ಖರೀದಿಸಲೆಂದು 50 ಸಾವಿರ ರೂ.ವನ್ನು ದಿಲ್‌ಫಾಝ್ ಪಡೆದಿದ್ದ. ಆ ಬಳಿಕ ದಿಲ್‌ಫಾಝ್ ಇತರ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿರುವುದು ನನ್ನ ಗಮನಕ್ಕೆ ಬಂದಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಆತ 2019ರ ಸೆಪ್ಟಂಬರ್ 24ರಿಂದ ನನಗೆ ದೈಹಿಕವಾಗಿ ಹಲ್ಲೆ ನಡೆಸಿ, ಮಾನಸಿಕವಾಗಿ ಹಿಂಸಿಸುತ್ತಿದ್ದ. ಇದಕ್ಕೆ ಆತನ ತಂದೆ ಅಬೂಬಕರ್ ಕೂಡ ಸಹಕರಿಸುತ್ತಿದ್ದರು. 2024ರ ನವೆಂಬರ್ 8ರಂದು ದಿಲ್‌ಫಾಝ್ ನನಗೆ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಉಳ್ಳಾಲ ಮಾಸ್ತಿಕಟ್ಟೆಯ ನೊಂದ ಯುವತಿಯು ನವೆಂಬರ್ 21ರಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿದ್ದಾರೆ.