ತುಳುನಾಡ ಇತಿಹಾಸ ಅಧ್ಯಯನದ ಮಾರ್ಗ ಪ್ರವರ್ತಕ: ಡಾ. ಪುಂಡಿಕಾಯಿ ಗಣಪತಿ ಭಟ್

Update: 2024-12-03 16:21 GMT

ಮಂಗಳಗಂಗೋತ್ರಿ: ತುಳುನಾಡಿನ ಪ್ರಾಚೀನ ಇತಿಹಾಸ, ಸ್ಥಳನಾಮ, ಭೂತಾರಾಧನೆ, ದೇವಾಲಯ ವಾಸ್ತುಶಿಲ್ಪ, ಮೂರ್ತಿ ಶಿಲ್ಪಗಳ ಬಗೆಗೆ ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಪ್ರಾದೇಶಿಕ ಅಧ್ಯಯನಕ್ಕೆ ಹಾಗೂ ತುಳುನಾಡಿನ ಇತಿಹಾಸ ರಚನೆಗೆ ಅನುಪಮ ಕೊಡುಗೆ ನೀಡಿದ ಇತಿಹಾಸಕಾರ ಪಿ.ಗುರುರಾಜ ಭಟ್ ಅವರು ಮಾರ್ಗಪ್ರವರ್ತಕರೆನಿಸಿದವರು ಎಂದು ಇತಿಹಾಸ ಸಂಶೋಧಕರು ನಿವೃತ್ತ ಪ್ರಾಧ್ಯಾಪಕರಾದ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ವಿಭಾಗ ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಇದರ ವತಿಯಿಂದ ನಡೆದ ಇತಿಹಾಸ ಕ್ಷೇತ್ರದ ಬಹುಮುಖಿ ಸಾಧಕ ಪಿ.ಗುರುರಾಜ ಭಟ್ ಜನ್ಮಶತಮಾನೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.

ತುಳುನಾಡಿನ ಇತಿಹಾಸವನ್ನು ಕಟ್ಟುವಲ್ಲಿ ವಿದೇಶಿ ಇತಿಹಾಸಕಾರರು, ಹವ್ಯಾಸಿ ಮತ್ತು ವೃತ್ತಿಪರ ಇತಿಹಾಸಕಾರರ ಕೊಡುಗೆ ವಿಶೇಷವಾದುದು. ಅದರಲ್ಲಿ ವೃತ್ತಿಪರ ಇತಿಹಾಸಕಾರರಾದ ಗುರುರಾಜ ಭಟ್ಟರು ಜನಸಾಮಾನ್ಯರಲ್ಲೂ ಇತಿಹಾಸದ ಪ್ರಜ್ಞೆಯನ್ನು ರೂಪಿಸಿದ್ದಾರೆ.ಗರ್ಭಗುಡಿಯ ಕತ್ತಲಲ್ಲಿದ್ದ ಇತಿಹಾಸವನ್ನು ಬೆಳಕಿಗೆ ತಂದಿದ್ದಾರೆ. ನಿಷ್ಠೆಯಿಂದ ನೂರಾರು ದೇವಾಲಯ ವಿಗ್ರಹಗಳ ನೈಜ ಭಾವಚಿತ್ರಗಳನ್ನು ತೆಗೆದು ಮೂರ್ತಿಶಿಲ್ಪದ ಕುರಿತು ಹಾಗೂ ದೇವಾಲಯಗಳ ವಾಸ್ತುಶಿಲ್ಪ ಗಳ ಕುರಿತು ಅಧ್ಯಯನವನ್ನು ಪ್ರಥಮವಾಗಿ ಮಾಡಿದ್ದಾರೆ.15 ವರ್ಷಗಳಲ್ಲಿ 700ಕ್ಕೂ ಅಧಿಕ ಲೇಖನಗಳನ್ನೂ, ಹಲವು ಕೃತಿಗಳನ್ನೂ ರಚಿಸಿದ್ದಾರೆ. ಅವರು ರಚಿಸಿದ ತುಳುನಾಡಿನ ಇತಿಹಾಸ ಮತ್ತು ಆ್ಯಂಟಿಕ್ಯುಟೀಸ್ ಆಪ್ ಸೌತ್ ಕೆನರಾ ಅಪೂರ್ವ ಕೃತಿಗಳು ಎಂದರು.

ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮಾತನಾಡಿ ಸ್ಥಳೀಯ ಇತಿಹಾಸವನ್ನು ಅರಿತುಕೊಂಡಾಗ ಮಾತ್ರ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಇತಿಹಾಸ ವಿಭಾಗದ ಅಧ್ಯಕ್ಷೆ ಡಾ. ತ್ರಿವೇಣಿ ಅರಸ್ ಮಾತನಾಡಿ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಇತಿಹಾಸ ಪಠ್ಯಕ್ರಮದಲ್ಲಿ ತುಳುನಾಡಿನ ಇತಿಹಾಸಕ್ಕೆ ಅವಕಾಶ ನೀಡಿದ್ದು ಮುಂದೆ ಅದನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು.

ಇತಿಹಾಸ ವಿಭಾಗದ ವಿದ್ಯಾರ್ಥಿ ಝುಬೇರ್ ಸ್ವಾಗತಿಸಿದರು. ವೈಷ್ಣವಿ ವಂದಿಸಿದರು. ಸೋನುಗೌಡ ವಂದಿಸಿದರು. ಇದೇ ಸಂದರ್ಭದಲ್ಲಿ ಪುಂಡಿಕಾಯಿ ಗಣಪಯ್ಯ ಭಟ್ಟರನ್ನು ಸನ್ಮಾನಿಸಲಾಯಿತು. ಇತಿಹಾಸ ಮತ್ಯು ಕನ್ನಡ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿದ್ದರು

*ಬೆಳ್ಮಣ್ ಶಾಸನ ಕನ್ನಡದ ಮೊದಲ ತಾಮ್ರಶಾಸನ:-

ಕನ್ನಡದ ಮೊದಲ ತಾಮ್ರಶಾಸನ ಕ್ರಿ.ಶ 8ನೆ ಶತಮಾನದ ಬೆಳ್ಮಣ್ ತಾಮ್ರಶಾಸನ. ಅಳುಪ ವಂಶದ ಇಮ್ಮಡಿ ಆಳುವರಸನ ಕಾಲದ ಇದನ್ನು 1972ರಲ್ಲಿ ಪಿ ಗುರುರಾಜ ಭಟ್ಟರು ಬೆಳಕಿಗೆ ತಂದರು. ಇದರಿಂದಾಗಿ ಶಾಸನಾನ್ವೇಷಣೆಯಲ್ಲಿ ಭಟ್ಟರ ಹೆಸರು ಶಾಶ್ವತವಾಗಿ ದಾಖಲಾಗಿದೆ ಎಂದು ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News