ಮೂಡುಬಿದಿರೆ: ಬಡಗಮಿಜಾರು ಅಕ್ರಮ ಕೆಂಪು ಕಲ್ಲಿನಕೋರೆಗೆ ಲೋಕಾಯುಕ್ತ ದಾಳಿ
ಮೂಡುಬಿದಿರೆ: ಬಡಗಮಿಜಾರುನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕೆಂಪು ಕಲ್ಲಿನ ಕೋರೆಗೆ ಉಪ ಲೋಕಾಯುಕ್ತ ವೀರಪ್ಪ ಗೌಡ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ಮಾಡಿದ್ದಾರೆ.
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೆಸಿಬಿ ಜೊತೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲು ಲೋಕಾಯುಕ್ತ ಅಧಿಕಾರಿಗಳು ಮೂಡುಬಿದಿರೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ಕಲ್ಲಿನ ಕೋರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತ ವೀರಪ್ಪಗೌಡ ಅವರು ಕರ್ತವ್ಯ ಲೋಪ ಎಸಗಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಾ ಜಮೀನಿನಲ್ಲಿ ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅಕ್ರಮವಾಗಿ ಕೆಂಪು ಕಲ್ಲಿನ ಕೋರೆ ನಡೆಸುತ್ತಿದ್ದು, ಕಂದಾಯ ನಿರೀಕ್ಷಕರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ವಾರ್ತಾಭಾರತಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅ. 7ರಿಂದ ಮೂಡುಬಿದಿರೆ ತಾಲೂಕಿನ ಬಡಗ ಮಿಜಾರು ಗ್ರಾಮದ ಮಂಜನಬೈಲು ನಿವಾಸಿ ಅರುಣ್ ಭಟ್ ಎಂಬವರು ಸರ್ವೇ ನಂಬರ್ 217/ 2ಎ ಯಲ್ಲಿ 3.22 ಎಕರೆ ಭೂ ಪ್ರದೇಶದಲ್ಲಿ ಅಕ್ರಮ ಕೆಂಪು ಕಲ್ಲಿನ ಕೋರೆ ನಡೆಸುತ್ತಿರುವ ಕುರಿತು ವಾರ್ತಾಭಾರತಿ ಸರಣಿ ಸುದ್ದಿಗಳನ್ನು ಪ್ರಕಟಿಸಿತ್ತು. ಆ ಬಳಿಕ ಗ್ರಾಮಸ್ಥರು ವಾರ್ತಾಭಾರತಿಯ ಸುದ್ದಿಯ ತುಣುಕುಗಳೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಕಲ್ಲಿನ ಕೋರೆಗೆ ದಾಳಿ ಮಾಡಿದ್ದಾರೆ.
ದಾಳಿಯ ಸಂದರ್ಭ ಎಡಿಸಿ ಸಂತೋಷ್, ಲೋಕಾಯುಕ್ತ ಎಸ್‌ಪಿ ನಟರಾಜ್, ಕಂದಾಯ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮೂಡುಬಿದಿರೆ ಪೊಲೀಸರು ಜೊತೆಗಿದ್ದರು.
ನಿಡ್ಡೋಡಿಯ ಬಂಗೇರಪದವುನಲ್ಲಿ ಇನ್ನೊಂದು ಅಕ್ರಮ ಕೋರೆ !
ಬಡಗಮಿಜಾರುನಲ್ಲಿ ಅಕ್ರಮ ಕೆಂಪು ಕಲ್ಲಿನ ಕೋರೆ ನಡೆಸುತ್ತಿದ್ದ ವ್ಯಕ್ತಿ ನಿಡ್ಡೋಡಿಯ ಬಂಗೇರಪದವುನಲ್ಲಿ ಹೊಸದಾಗಿ ಇನ್ನೊಂದು ಅಕ್ರಮ ಕೆಂಪು ಕಲ್ಲಿನ ಕೋರೆ ಆರಂಭಿಸಿರುವ ಬಗ್ಗೆ ಗ್ರಾಮಸ್ಥರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಬಡಗ ಮಿಜಾರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಅಕ್ರಮ ಕೆಂಪು ಕಲ್ಲಿನ ಕೋರೆಯ ಹೊಂಡಕ್ಕೆ ನಿಡ್ಡೋಡಿಯ ಬಂಗೇರಪದವಿನಲ್ಲಿ ನಡೆಸುತ್ತಿರುವ ಅಕ್ರಮ ಕೋರೆಯಿಂದ ಕೆಂಪು ಮಣ್ಣು ತಂದು ಸುರಿದು ತುಂಬಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೆ, ಈ ಅಕ್ರಮ ಕೆಂಪು ಕಲ್ಲಿನ ಕೋರೆ ನಡೆಸಲು ಮೂಡುಬಿದಿರೆಯ ಕಂದಾಯ ನಿರೀಕ್ಷಕರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದೂ ಗ್ರಾಮಸ್ಥರು ವಾರ್ತಾಭಾರತಿಗೆ ದೂರಿದ್ದಾರೆ.
ಅಕ್ರಮಕ್ಕೆ ಕಂದಾಯ ನಿರೀಕ್ಷಕರು, ಗಣಿ ಇಲಾಖೆ ಅಧಿಕಾರಿಗಳ ಸಾಥ್: ಲೋಕಾಯುಕ್ತಕ್ಕೆ ಸಾಕ್ಷ್ಯ ಸಲ್ಲಿಕೆ
ಬಡಗಮಿಜಾರು ಗ್ರಾಮದಲ್ಲಿ ನಡೆಸುತ್ತಿದ್ದ ಅಕ್ರಮ ಕೆಂಪು ಕಲ್ಲಿನ ಕೋರೆಯ ಮಾಲಕರೊಂದಿಗೆ ಮೂಡುಬಿದಿರೆ ಕಂದಾಯ ನಿರೀಕ್ಷಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಕ್ರಮ ಕಲ್ಲು ಕೋರೆಯ ಮಾಲಕನೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಾಕ್ಷಿಯಿದ್ದು, ಇದನ್ನು ಲೋಕಾಯುಕ್ತಕ್ಕೆ ನೀಡಿ ಕಂದಾಯ ನಿರೀಕ್ಷಕರು ಮತ್ತು ಗಣಿ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಗ್ರಾಮಸ್ಥರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಲೊಕಾಯುಕ್ತ ದಾಳಿಗೂ ಮುನ್ನ ಮಾಹಿತಿ ಲೀಕ್ !
ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಬಗ್ಗೆ ಅಕ್ರಮ ಗಣಿ ಮಾಲಕರಿಗೆ ಮಾಹಿತಿ ಇತ್ತು ಎಂದು ಗ್ರಾಮಸ್ತರು ದೂರಿದ್ದಾರೆ. ಪ್ರತೀ ದಿನ ಬೆಳಗ್ಗಿನ ಜಾವ 4ಗಂಟೆಯಿಂದ ಅಕ್ರಮ ಗಣಿಗಾರಿಕೆ ಆರಂಭವಾಗುತ್ತಿತ್ತು. ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳು ಸ್ಥಳದಲ್ಲೇ ಇಡಲಾಗುತ್ತಿತ್ತು. ಆದರೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಮಾಹಿತಿ ತಿಳಿದಿದ್ದ ಕಾರಣ ಕೋರೆಯಲ್ಲಿ ಕಲ್ಲು ಕತ್ತರಿಸುವ ಯಂತ್ರೋಪಕರಣಗಳು ಸೇರಿದಂತೆ ಇತರ ಬೆಲೆಬಾಳುವ ಉಪಕರಣಗಳನ್ನು ರಾತ್ರಿಯೇ ಕೋರೆಯಿಂದ ಸ್ಥಳಾಂತರಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.