ಬಡಗಮಿಜಾರ್‌ನಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ: ಉಪ ಲೋಕಾಯುಕ್ತರ ದಾಳಿ
ಮಂಗಳೂರು: ಮೂಡಬಿದಿರೆ ತಾಲೂಕಿನ ಬಡಗ ಮಿಜಾರ್‌ನಲ್ಲಿ ನಿಡ್ಡೊಡಿಯಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕ್ವಾರೆ (ಲ್ಯಾಟರೈಟ್ ಕಲ್ಲಿನ ಗಣಿಗಾರಿಕೆ ) ನಡೆಯುತ್ತಿದೆ ಎಂದು ಸ್ಥಳೀಯರು ನೀಡಿರುವ ದೂರಿನಂತೆ ಕ್ವಾರೆಗಳಿಗೆ ಮಂಗಳವಾರ ಬೆಳಗ್ಗೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಅಧಿಕಾರಿಗಳೊಂದಿಗೆ ದಾಳಿ ನಡೆಸಿದರು.
ಸ್ಥಳೀಯರ ದೂರಿನ ಮೇರೆಗೆ ವೀರಪ್ಪ ಅವರು ಹೆಚ್ಚುವರಿ ನೋಂದಣಾಧಿಕಾರಿ ಕೆ.ಎಂ.ರಾಜಶೇಖರ್, ಉಪನೋಂದಣಾಧಿ ಕಾರಿ ಕೆ.ಎಂ. ಬಸವರಾಜಪ್ಪ ಮತ್ತು ಎನ್.ಎಂ.ಅರವಿಂದ್, ಮತ್ತು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ನಟರಾಜ್ ಅವರು ಕೆಂಪು ಕಲ್ಲು ಕ್ವಾರಿಗಳ ಮೇಲೆ ದಾಳಿ ನಡೆಸಿದರು.
ಮೂಡಬಿದ್ರಿಯ ಬಡಗ ಮಿಜಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಿರ್ಬಂಧಿತ ಲ್ಯಾಟರೈಟ್ ಕಲ್ಲು ಗಣಿಗಾರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿವರವಾದ ವರದಿಯನ್ನು ನೀಡುವಂತೆ ನಿರ್ದೇಶನ ನೀಡಿದರು.
ಲೋಕಾಯುಕ್ತರು ಅನಿರೀಕ್ಷತವಾಗಿ ದಾಳಿಯ ವೇಳೆ ಲ್ಯಾಟರೈಟ್ ಕಲ್ಲುಗಳನ್ನು ತೆಗೆಯುತ್ತಿದ್ದ ಕಾರ್ಮಿಕರು ಮತ್ತು ಜೆಸಿಬಿ ನಿರ್ವಾಹಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮ ಲೆಕ್ಕಾಧಿಕಾರಿ ಈ ಜಮೀನು ಖಾಸಗಿಯದ್ದಾಗಿದೆ ಎಂದು ಹೇಳಿದರೆ, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಅವರು ಕಲ್ಲು ತೆಗೆಯಲು ಯಾವುದೇ ಅನುಮತಿ ತೆಗೆದುಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅಧಿಕಾರಿಯ ಪ್ರತಿಕ್ರಿಯೆಯಿಂದ ಅಚ್ಚರಿ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಕೆಂಪು ಕಲ್ಲಿನ ಗಣಿಗಾರಿಕೆಯಿಂದ ಸಂಭಾವ್ಯ ಪರಿಸರ ಅಪಾಯದ ಬಗ್ಗೆ ನೀವು ಕನಿಷ್ಠ ಕಾಳಜಿಯನ್ನು ತೋರುತ್ತಿಲ್ಲ. ಇದು ಭೂಕುಸಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ಅವರು ಸ್ಥಳೀಯ ಮೂಡಬಿದ್ರಿ ಪೊಲೀಸರಿಗೆ ಜಮೀನು ಮಾಲೀಕರ ದಾಖಲೆಗಳನ್ನು ಪರಿಶೀಲಿಸುವಂತೆ ತಿಳಿಸಿದರು. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಲ್ಲಿ ಎಫ್‌ಐಆರ್ ದಾಖಲಿಸಿ ಎಲ್ಲ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಿ ಎಂದು ಹೇಳಿದರು.