ಅಡಿಕೆಯ ಸಮಗ್ರ ಸಂಶೋಧನೆಗೆ ಕೇಂದ್ರ ಕೃಷಿ ಸಚಿವಾಲಯ ನಿರ್ಧಾರ| ಕ್ಯಾಂಪ್ಕೊ ಪ್ರಯತ್ನಕ್ಕೆ ನೈತಿಕ ಬಲ: ಕಿಶೋರ್ ಕುಮಾರ್ ಕೊಡ್ಗಿ
ಮಂಗಳೂರು: ‘ಅಡಿಕೆ ಸೇವೆನೆಯಿಂದ ಮಾನವನ ಆರೋಗ್ಯ ಮೇಲಾಗುವ ಪರಿಣಾಮದ ಬಗ್ಗೆ ಪುರಾವೆ ಆಧಾರಿತ ಸಂಶೋಧನೆ ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ಅಡಿಕೆ ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾದವನ್ನು ಪುರಾವೆ ಸಮೇತ ಸಂಸದರಿಗೆ ಮನವರಿಕೆ ಮಾಡಿಸಿದ ಕ್ಯಾಂಪ್ಕೊದ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ ಎಂದು ಹೇಳಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದಿಂದಾಗಿ , ‘‘ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ’’ ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ. ಇದಕ್ಕೆ ಶ್ರಮಿಸಿದ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಸಂಸದರಿಗೆ ಹಾಗೂ ಭಾರತೀಯ ಜೀವನ ಕ್ರಮದಲ್ಲಿ ಅಡಿಕೆಯ ಪಾತ್ರವನ್ನು ಗುರುತಿಸಿರುವ ಕೇಂದ್ರ ಕೃಷಿ ಸಚಿವರಿಗೆ ಕ್ಯಾಂಪ್ಕೊ ಅಡಿಕೆ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದೆ ಎಂದು ಕೂಡ್ಗಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ,ತಪ್ಪು ಗ್ರಹಿಕೆಯಿಂದ ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವ ಕ್ರಮದ ವಿರುದ್ಧ ಕ್ಯಾಂಪ್ಕೊ ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳ ಮೂಲಕ ನಿರಂತರ ಅಭಿಯಾನವನ್ನು ಮಾಡುತ್ತಲೇ ಬಂದಿದ್ದು, ಕೊನೆಗೂ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ಸನ್ನು ಪಡೆದಿದೆ. ಎಐಐಎಮ್ ಎಸ್, ಸಿಎಸ್ ಐಆರ್-ಸಿಸಿಎಮ್ ಬಿ, ಐಐಎಸ್ಸಿ ಮುಂತಾದ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಕಾರದ ಮೂಲಕ ಇದರಿಂದ ಅಡಿಕೆಯ ಕುರಿತು ಇರುವ ತಪ್ಪು ಗ್ರಹಿಕೆ ಹೋಗಲಾಡಿಸಿ ,ಅದರ ಆರೋಗ್ಯಕರ ಉಪಯೋಗಗಳ ವೈಜ್ಞಾನಿಕ ದಾಖಲೆ ಸಿಗಲು ಸಾಧ್ಯವಾಗ ಲಿದೆ. ಕೇಂದ್ರ ಸರಕಾರದ ನಿರ್ಧಾರವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಆದಷ್ಟು ಬೇಗ ಸಂಶೋಧನೆ ಪ್ರಾರಂಭಿಸುವಂತೆ ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರು ಸರಕಾರವನ್ನು ಒತ್ತಾಯಿಸಲು ಕ್ಯಾಂಪ್ಕೊ ಎಲ್ಲಾ ಸಂಸದ ರಲ್ಲಿ ಮನವಿ ಮಾಡಿದೆ. ಅಡಿಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜೊತೆ ಮಿಶ್ರಣ ಮಾಡಿದ ಉತ್ಪನ್ನಗಳ ಸಂಶೋಧನಾ ವರದಿಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಣ ಮಾಡಿತ್ತು. ಆದರೆ ಕ್ಯಾಂಪ್ಕೊ ಮೊದಲಿನಿಂದಲೂ ಅಡಿಕೆಯ ಮೂಲ ರೂಪದಲ್ಲಿನ ಉಪಯೋಗವನ್ನು ಸಂಶೋಧಿಸಿ ವರ್ಗೀಕರಿಸಬೇಕೆಂದು ಪ್ರತಿಪಾದಿಸುತ್ತಲೇ ಬಂದಿದೆ. ಆ ರೀತಿಯಲ್ಲಿ ಮಾಡಿದ ಪ್ರತಿಯೊಂದು ಸಂಶೋಧನಾ ವರದಿಗಳು ಅಡಿಕೆ ಕ್ಯಾನ್ಸರ್ ರೋಗವನ್ನು ಪ್ರತಿಬಂಧಿಸುವ ಔಷಧೀಯ ಗುಣಗಳ ಬಗ್ಗೆ ಸಾಕ್ಷೀಕರಿಸಿದ ದಾಖಲೆಗಳಿವೆ.
ಕೇಂದ್ರ ಸರಕಾರದ ಅನುಮೋದನೆಯಿಂದ ಲಕ್ಷಾಂತರ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಶ್ರಮಿಸುತ್ತಿರುವ ಕ್ಯಾಂಪ್ಕೊದ ಪ್ರಯತ್ನಕ್ಕೆ ನೈತಿಕ ಬಲ ಸಿಕ್ಕಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಕೇಂದ್ರ ಕೃಷಿ ಸಚಿವರಿಗೆ ಹಾಗೂ ಎಲ್ಲಾ ಸಂಸದರಿಗೆ ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಕ್ಯಾಂಪ್ಕೊ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.