ಗುರುಪುರ: ಐವರ ಮೇಲೆ ಹೆಜ್ಜೇನು ದಾಳಿ
ಮಂಗಳೂರು, ಡಿ.4: ಹೆಜ್ಜೇನಿನ(ಪೆರಿಯ) ಗುಂಪೊಂದು ಐವರ ಮೇಲೆ ದಾಳಿ ಮಾಡಿರುವ ಘಟನೆ ಗುರುಪುರದ ಮಠದಬೈಲಿನಲ್ಲಿ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಬೇಬಿ ಯಾನೆ ಸರೋಜ, ಗಣೇಶ್ ಕೊಟ್ಟಾರಿ, ಶೋಧನ್ ಇವರಿಗೆ ಹೆಜ್ಜೇನು ನೊಣಗಳು ಕಡಿದು ಗಂಭೀರ ಗಾಯಗೊಳಿಸಿದೆ. ಉಳಿದ ಇಬ್ಬರಿಗೆ ಸಾಮಾನ್ಯ ಗಾಯವಾಗಿದೆ. ಗಂಭೀರ ಗಾಯಗೊಂಡವರು ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಬೇಬಿಯವರು ಮನೆಯಂಗಳದಲ್ಲಿದ್ದ ವೇಳೆ ಹೆಜ್ಜೇನು ಗುಂಪೊಂದು ದಾಳಿ ಮಾಡಿದೆ. ನೋವಿಂದ ಅವರು ಹತ್ತಿರದ ರಸ್ತೆಗೆ ಓಡಿ ಬಂದಾಗ, ನೆರವಿಗೆ ಬಂದ ಗಣೇಶ್ ಅವರ ಮೇಲೆ ಎರಗಿತು. ಹೆಜ್ಜೇನು ಗುಂಪಿನಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲೇ ಓಡುತ್ತಿದ್ದಾಗ ಅವರ ನೆರವಿಗೆ ಬಂದ ಶೋಧನ್ ಅವರ ಮೈಮೇಲೂ ದಾಳಿ ಮಾಡಿದೆ. ಗಣೇಶ್ ಅವರು ಮೈಮೇಲೆ ರೈನ್‌ಕೋಟ್ ಹಾಕಿ ತಪ್ಪಿಸಿಕೊಂಡಿದ್ದಾರೆ. ಮನೆಯೊಂದರ ಬಳಿ ಓಡಿದ್ದ ಶೋಧನ್ ಮೈಮೇಲೆ ಪೈಪ್ ಮೂಲಕ ನೀರು ಎರಚಿಕೊಂಡು ಪಾರಾಗಲು ಯತ್ನ ನಡೆಸಿದ್ದರು. ಗಾಯಾಳುಗಳು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.