ಸಂಘ ಪರಿವಾರದ ನಾಯಕರ ವಿರುದ್ಧ ಎಫ್‌ಐಆರ್| ಜನರ ಕಣ್ಣಿಗೆ ಮಣ್ಣೆರಚುವ ತಂತ್ರ: ಮುನೀರ್ ಕಾಟಿಪಳ್ಳ
ಮಂಗಳೂರು: ಸಂಘ ಪರಿವಾರದ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಅಷ್ಟೆ. ರಾಜ್ಯ ಸರಕಾರ ಈ ಕುರಿತು ಮಧ್ಯ ಪ್ರವೇಶಿಸಲಿ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.
ಜನವಿರೋಧಿ, ಕೋಮುವಾದಿಗಳ ಕುರಿತು ಮೃದು ಧೋರಣೆ ಹೊಂದಿರುವ ಕಮಿಷನರ್ ಅಗರ್ವಾಲ್ ರನ್ನು ತಕ್ಷಣ ಎತ್ತಂಗಡಿ ಮಾಡದಿದ್ದರೆ ಮಂಗಳೂರು ಗಂಡಾಂತರಕ್ಕೆ ಸಿಲುಕುವುದು ಖಚಿತ. ಅಪಾರ ಪ್ರಮಾಣದ ಜನಾಕ್ರೋಶದ ಬಳಿಕ ನಗರದ ಪ್ರಧಾನ ರಸ್ತೆಯನ್ನು ಪೂರ್ತಿ ಆಕ್ರಮಿಸಿ ಧರಣಿ ನಡೆಸಿದ ಸಂಘಪರಿವಾರದ ಎದುರಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅಗರ್ವಾಲ್ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ಪ್ರಕಟನೆಯ ಪ್ರಕಾರ ಪ್ರತಿಭಟನೆಯ ಅನುಮತಿಗೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ರಸ್ತೆ ತಡೆ ಮಾಡಿದ, ಸಂಚಾರಕ್ಕೆ ತಡೆ ಒಡ್ಡಿದ ಕಾರಣ ಆಯೋಜಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಎಡಪಕ್ಷಗಳು ಫೆಲೆಸ್ತೀನ್‌ನಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿ ನಡೆಸಿದ ಧರಣಿಗೂ ಶರತ್ತುಗಳನ್ನು ವಿಧಿಸಿ ಅನುಮತಿ ನೀಡಬಹುದಿತ್ತಲ್ಲಾ ? ಅಲ್ಲಿ ಧ್ವನಿ ವರ್ಧಕ ಬಳಸಲು ಅನುಮತಿ ನಿರಾಕರಣೆ, ಶಾಂತಿಯುತ ಧರಣಿಯ ಮೇಲೆ ಮೊಕದ್ದಮೆ, ಇಲ್ಲಿ ರಸ್ತೆ ಬಂದ್, ವಾಹನ ಸಂಚಾರಕ್ಕೆ ಅಡತಡೆ, ಉದ್ರೇಕಕಾರಿ ಮಾತುಗಳು ಆಡುವ ನಿರೀಕ್ಷೆ ಇದ್ದರೂ ಅನುಮತಿ ನೀಡಲಾಗಿದೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹೆದ್ದಾರಿ ಗುಂಡಿ ಮುಚ್ಚಲು ಆಗ್ರಹಿಸಿ ರಸ್ತೆ ಬದಿಯ ಮೂಲೆಯಲ್ಲಿ ಆಯೋಜಿ ಸಿದ್ದ ಧರಣಿಗೂ ಹೀಗೆ ಷರತ್ತು ಬದ್ಧ ನೀಡಲಿಲ್ಲ. ಎಡಪಕ್ಷಗಳು ಸುಮಾರು ಐವತ್ತು ಕಾರ್ಯಕರ್ತರು ಫುಟ್ ಪಾತ್ ನಲ್ಲಿ ನಿಂತು ನಡೆಸಿದ ಶಾಂತಿಯುತ ಧರಣಿಗಾಗಿ ಅದರ ಹನ್ನೊಂದು ಮಂದಿ ಪ್ರಧಾನ ನಾಯಕರ ಮೇಲೆ ಎಫ್‌ಐಆರ್ ಹಾಕಿದ್ರಿ, ಹೆದ್ದಾರಿ ಗುಂಡಿ ಮುಚ್ಚಲು ಆಗ್ರಹಿಸಿ ನಡೆಸಿದ ಧರಣಿಯಲ್ಲಿ ಸಮಿತಿ ಸಂಚಾಲಕನ ಮೇಲೆಯೆ ಎಫ್‌ಐಆರ್ ಹಾಕಿದ್ರಿ. ಈಗ ಅಡ್ಡಾದಿಡ್ಡಿ ಮೆರವಣಿಗೆ, ಉದ್ರೇಕಕಾರಿ ಘೋಷಣೆ, ಅನಗತ್ಯವಾಗಿ ಪೂರ್ತಿ ರಸ್ತೆ ಮುಚ್ಚಿ ಇಡೀ ಮಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನೆ ಪೂರ್ತಿ ಅಸ್ತವ್ಯಸ್ತಗೊಳಿಸಿದ ಪ್ರತಿಭಟನೆಯಲ್ಲಿದ್ದ ಸಂಘಪರಿವಾರದ ಎಷ್ಟು ನಾಯಕರ ಹೆಸರು ಎಫ್‌ಐಆರ್‌ನಲ್ಲಿ ಹಾಕಿದ್ರಿ ? ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಕಲ್ಲಡ್ಕದವರು, ರಸ್ತೆ ತಡೆ ತೆರವುಗೊಳಿಸಲು ಕೈಮುಗಿದು ವಿನಂತಿಸುತ್ತಿದ್ದ ಡಿಸಿಪಿ ಮೇಲೆ ಎಗರಾಡುತ್ತಿದ್ದ ಬಿಜೆಪಿ ಶಾಸಕರುಗಳ ಹೆಸರು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆಯೇ ? ಎಫ್‌ಐಆರ್‌ನಲ್ಲಿ ಯಾರದೆಲ್ಲಾ ಹೆಸರು ಇದೆ ಅಂತ ಯಾಕೆ ಪ್ರಕಟನೆಯಲ್ಲಿ ಹೇಳಿಲ್ಲ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.