ಭಾರತೀಯ ಕಮ್ಯುನಿಸ್ಟ್ ಪಕ್ಷ ಸೋತು ಓಡಿ ಹೋಗುವ ಪಕ್ಷವಲ್ಲ: ಡಾ. ರಾಮಕೃಷ್ಣ

Update: 2024-12-26 13:35 GMT

ಮಂಗಳೂರು: ಭಾರತೀಯ ಕಮ್ಯುನಿಸ್ಟ್ ಪಕ್ಷ ಸಿಪಿಐ ಗುಣಾತ್ಮಕವಾಗಿ ಸಮಾಜದ ಬದಲಾವಣೆಗೆ ಕಂಕಣ ಬದ್ಧರಾಗಿರುವ ಪಕ್ಷ. ಕಮ್ಯುನಿಸ್ಟರು ಇವತ್ತು ಏನಾದರೂ ಆಗಿಲ್ಲವೆಂದರೆ ಹೋರಾಟದಿಂದ ನಿರ್ಗಮಿಸುವವರಲ್ಲ . ಸಿಪಿಐ ಸೋತು ಓಡಿಹೋಗುವ ಪಕ್ಷವಲ್ಲ ಎಂದು ಖ್ಯಾತ ಶಿಕ್ಷಣ ತಜ್ಞ , ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ರಾಮಕೃಷ್ಣ ಬೆಂಗಳೂರು ಅವರು ಹೇಳಿದ್ದಾರೆ.

ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಗರದ ಡಾನ್ ಬಾಸ್ಕೊ ಹಾಲ್‌ನಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪಕ್ಷಕ್ಕೆ ಶತಮನೋತ್ಸವದ ಸಂಭ್ರಮಾಚರಣೆಯು ಚಾರಿತ್ರಿಕವಾಗಿ ಪ್ರಮುಖ ಘಟ್ಟ. ನಡೆದು ಹಾದಿಯನ್ನು ಮೆಲುಕು ಹಾಕುವ ಸಂದರ್ಭ ವಾಗಿದ್ದು, ಹೀಗಾಗಿ ನೂರು ವರ್ಷಗಳ ಅವಧಿಯಲ್ಲಿ ಇಡೀ ದೇಶದಲ್ಲಿ ಮಾಡಿದ್ದನ್ನು ಪರಾಮರ್ಶೆ ಮಾಡಲು ಹೊರಟಿದ್ದೇವೆ ಎಂದರು.

ಸೋಲು ಗೆಲುವು ಕಮ್ಯುನಿಸ್ಟ್ ಪಕ್ಷಕ್ಕೆ ಇದ್ದದ್ದೆ, ಸೋತು ಸುಮ್ಮನಾಗಿದ್ದರೆ ಇವತ್ತು ಕಮ್ಯುನಿಸ್ಟ್ ಪಕ್ಷ ದೇಶದಲ್ಲಿ ಉಳಿಯುತ್ತಿ ರಲಿಲ್ಲ. ದೇಶದ ಅಭಿವೃದ್ಧಿ ಗೆ ಸಿಪಿಐ ದೊಡ್ಡ ಕೊಡುಗೆ ನೀಡಿದೆ. ರಾಜಕೀಯವಾಗಿ ದೇಶದ ಪ್ರಧಾನ ಮಂತ್ರಿ ಹುದ್ದೆಯನ್ನು ಪಡೆಯವಷ್ಟರ ಮಟ್ಟಿಗೆ ಸಿಪಿಐ ಬೆಳೆದಿಲ್ಲ ಎಂಬ ವಿಚಾರದ ಬಗ್ಗೆ ನಾವು ಹತಾಶರಾಗಿಲ್ಲ.

ಉದ್ಯಮ ಕ್ಷೇತ್ರದಲ್ಲಿ ಭಾರತ ಮತ್ತು ಸೋಯತ್ ನಡುನ ಸಂಬಂಧ ಗಟ್ಟಿಯಾಗಲು ಸಿಪಿಐ ಶ್ರಮಿಸಿದೆ. 100 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಇದು ಯಾಕೆ ಸಾಧ್ಯವಾಗಿಲ್ಲ, ಸೋತಿದ್ದು ಎಲ್ಲಿ ಎನ್ನುವ ವಿಚಾರದ ಬಗ್ಗೆ ಯೋಚಿಸಬೇಕಾಗಿದೆ. ನೂರು ವರ್ಷದ ಅನುಭವದದ ನ್ನೆಲೆಯಲ್ಲಿ ವಸ್ತು ನಿಷ್ಠವಾಗಿ ವಿಮರ್ಶೆ ಮಾಡುವ ಸಂದರ್ಭ ಒದಗಿ ಬಂದಿದೆ ಎಂದರು.

ಸಿಪಿಐ ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ದೊರಕಿಸುವ ಉದ್ದೇಶವನ್ನು ಇಟ್ಟುಕೊಂಡು ಉದಯಿಸಿದ ಪಕ್ಷವಲ್ಲ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹೀಗೆ ಬೇರೆ ಎಲ್ಲ ಸ್ವಾತಂತ್ರ್ಯ ಪಡೆಯಲು ಈ ಪಕ್ಷ ಸ್ಥಾಪನೆಯಾಗಿದೆ ಎಂದು ಹೇಳಿದರು.

*ಮುಂಬೈ ಐಐಟಿ ಸಿಪಿಐ ಕೊಡುಗೆ: ದೇಶದ ಅಭಿವೃದ್ಧಿಗೆ ಸಿಪಿಐ ದೊಡ್ಡ ಕೊಡುಗೆ ನೀಡಿದೆ. ಅಲಿಪ್ತ ಚಳವಳಿಯ ಯಶಸ್ಸಿನಲ್ಲಿ ಸಿಪಿಐ ಶ್ರಮಿಸಿದೆ. ಮುಂಬೈ ಐಐಟಿ ಸ್ಥಾಪನೆ ಸಿಪಿಐ ಕೊಡುಗೆಯಾಗಿದೆ. ಸಿಪಿಐ ಚಿಂತನೆ,ಕಾರ್ಯಾಚರಣೆ ಮೂಲಕ ಸೋವಿಯತ್ ಒಕ್ಕೂಟದ ಸಹಕಾರದಿಂದ ದೇಶದ ಮೊದಲ ಐಐಟಿ ಸ್ಥಾಪನೆಗೊಂಡಿತು ಎಂದು ಮಾಹಿತಿ ನೀಡಿದರು.

ಪರಿಣಾತ್ಮವಾಗಿ ಇಲ್ಲದಿದ್ದರೂ ಗುಣತಾತ್ಮಕವಾಗಿ ನಮ್ಮ ದೇಶದ ಆನೇಕ ನೀತಿಗಳನ್ನು ಬದಲಾಯಿಸುವಲ್ಲಿ ಸಿಪಿಐ ನಾಯಕರು ಯಶಸ್ವಿಯಾಗಿದ್ದಾರೆ . ಭಗತ್ ಸಿಂಗ್ ,ರೇಣು ಚಕ್ರವರ್ತಿ, ಕಲ್ಪನಾದತ್ ಅವರಂತಹ ಕ್ರಾಂತಿಕಾರರನ್ನು ಕಮ್ಯುನಿಸ್ಟ್ ದೇಶಕ್ಕೆ ನೀಡಿದೆ.ಆಡಳಿತ ನಡೆಸುವ ನಾಯಕರಿಗೆ ಸಮರ್ಥ ಮಾರ್ಗದರ್ಶನ ನೀಡಿದೆ.

ಸಾಹಿತ್ಯದ ಮೇರುಶಕ್ತಿಗಳನ್ನು ಕಮ್ಯುನಿಸ್ಟ್ ನೀಡಿದೆ, ಮತಧರ್ಮದ ಸಮನ್ವಯ ಸಾಧಿಸಲು ಶ್ರಮಿಸಿದೆ. ಬಹುತ್ವದ ರಕ್ಷಣೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡಿದೆ ಎಂದು ಹೇಳಿದರು.

ಸೈಧ್ಯಾಂತಿಕವಾಗಿ ಕಮ್ಯುನಿಸ್ಟ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇದ್ದರೂ, ಸಾಮಾಜ್ಯಶಾಹಿಗಳ ವಿರೋಧ ಕಟ್ಟಿಕೊಳ್ಳುವುದರಲ್ಲ ಹಿಂದೆ ಬಿದ್ದಿಲ್ಲ, ಜನರ, ದೇಶದ ಪರಂಪರೆ ಮುಂದುವರಿಸಲು ಹೋರಾಟ ಮುಂದುವರಿಸಬೇಕಾಗಿದೆ.

ಕಾಣಟಕ ರಾಜ್ಯ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ ಕರ್ನಾಟಕದಲ್ಲಿ ಮೊದಲು ಕಮ್ಯುನಿಸ್ಟ್ ಪಕ್ಷ ಕಟ್ಟಿದ್ದು ಉಳ್ಳಾಲದಲ್ಲಿ. ಅಂತಹ ಉಳ್ಳಾಲಕ್ಕೆ ನಿನ್ನೆ ಬಂದಾಗ ರೋಮಾಂಚನವಾಯಿತು ಎಂದು ಬಣ್ಣಿಸಿದರು.

ಹಿಂದೆ ಈಸ್ಟ್ ಇಂಡಿಯಾ ಕಂಪೆನಿ ಮಾಡಿದಂತೆ ಕಾರ್ಪೊರೇಟ್ ಕಂಪೆನಿಗಳು ಜನರನ್ನು ಶೋಷಣೆ ಮಾಡುತ್ತಿದೆ. ಊಳಿಗಮಾನ ವ್ಯವಸ್ಥೆ ಯಂತೆ ಬಂಡವಾಳ ಶಾಹಿಗಳು ಇವತ್ತು ವಿಜ್ರಂಭಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿಗೆ ಮೊದಲ ಶತ್ರು ಕಮ್ಯುನಿಸ್ಟ್ ಆಗಿದೆ. ದೇಶದಲ್ಲಿ ಬಿಜೆಪಿ ಆರ್‌ಎಸ್‌ಎಸ್ ನ್ನು ನಿರ್ಮೂಲನೆ ಮಾಡಲು ನಾವು ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯ ಮಂಗಳೂರು ಸಮಿತಿ ಅಧ್ಯಕ್ಷ ನಾಗೇಶ್ ಕಲ್ಲೂರು ಅಧ್ಯಕ್ಷತೆ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯ ಮಂಗಳೂರು ಸಮಿತಿ ಗೌರವಾಧ್ಯಕ್ಷ ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಶತಮಾನೋತ್ಸವ ಆಚರಣೆ ಮಂಗಳೂರಿನಲ್ಲಿ ನಡೆಯುವುದಕ್ಕೆ ಹೆಮ್ಮೆ ಇದೆ. ೧೯೫೧ರಲ್ಲಿ ಉಳ್ಳಾಲದಲ್ಲಿ ಸಿಪಿಐ ಮೊದಲ ಸಮ್ಮೇಳನ ನಡೆದು ಕರ್ನಾಟಕಕ್ಕೆ ಅದರ ಚಟುವಟಿಕೆ ವಿಸ್ತರಣೆಗೊಂಡಿತು. ಮಂಗಳೂರಿನ ಎಸ್ ವಿ ಘಾಟೆ ಸಿಪಿಐ ಪ್ರಥಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಪಿಐ ಪಕ್ಷವನ್ನು ಕಟ್ಟಿ ಬೆಳೆಸಿದರು. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಿಪಿಐ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.

ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಕರುಣಾಕರ ಮಾರಿಪಳ್ಳ, ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್ ವಿ ರಾವ್ , ಸಿಪಿಐ ಕರ್ನಾಟಕ ರಾಜ್ಯ ಮಂಡಳಿಯ ಸದಸ್ಯ ವಿ.ಕುಕ್ಯಾನ್ ಸಿಪಿಐ ಪ್ರಮುಖರಾದ ಶಶಿಕಲಾ ಉಡುಪಿ, ಡಾ.ಎನ್.ಗಾಯತ್ರಿ, ಬಾಬು ಭಂಡಾರಿ ಬಂಟ್ವಾಳ, ಚಂದ್ರಾವತಿ ಜೈನ್, ಕುಸುಮಾ ವಿಶ್ವನಾಥ, ಲೀನಾ ಪಿಂಟೊ,ನಫೀಸಾ ವಿಟ್ಲ, ಎ ಪ್ರಭಾಕರ್ ರಾವ್, ವಿಶು ಕುಮಾರ್ ಉಪಸ್ಥಿತರಿದ್ದರು.

ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ ವಂದಿಸಿದರು. ವಿ ಸೀತಾರಾಮ ಬೇವಿಂಜೆ ಕಾರ್ಯಕ್ರಮ ನಿರೂಪಿಸಿದರು.

ವಿಟ್ಲದ ರಿಫಾಯಿ ದಫ್ ತಂಡದಿಂದ ದಫ್ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಮಿನಿ ವಿಧಾನ ಸೌಧದ ಬಳಿಯಿಂದ ಡಾನ್ ಬೊಸ್ಕೊ ಸಭಾಂಗಣದ ತನಕ ಭವ್ಯ ಮೆರವಣಿಗೆ ನಡೆಯಿತು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News