ವಿಟ್ಲ| ವ್ಯಾಪಾರಿಗಳ ವಿರೋಧದ ನಡುವೆ ವಾರದ ಸಂತೆ ಸ್ಥಳಾಂತರ: ಪ.ಪಂ ಮುಖ್ಯಾಧಿಕಾರಿ ತಂಡದಿಂದ ಕಾರ್ಯಾಚರಣೆ

Update: 2025-01-07 14:00 GMT

ವಿಟ್ಲ: ವಿಟ್ಲ-ಪುರಭವನ ರಸ್ತೆಯ ಎರಡು ಬದಿಯಲ್ಲಿ ನಡೆಯುತ್ತಿದ್ದ ಸಂತೆಯ ಒಂದು ಬದಿಯನ್ನು ಪಟ್ಟಣ ಪಂಚಾಯತ್ ನಿಗದಿಪಡಿಸಿದ ಸ್ಥಳಕ್ಕೆ ವ್ಯಾಪಾರಿಗಳ ವಿರೋಧದ ನಡುವೆಯೂ ಸ್ಥಳಾಂತರ ಮಾಡಲಾಯಿತು.

ಪೇಟೆಯಿಂದ ಪುರಭವನ ಸಂಪರ್ಕಿಸುವ ರಸ್ತೆಯ ಎರಡು ಬದಿಯಲ್ಲಿ ಸಂತೆ ದಿನ ವ್ಯಾಪಾರ ನಡೆಸಲಾಗುತ್ತಿತ್ತು. ಈ ರಸ್ತೆ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ, ಬಿಲ್ಲವ ಸಮುದಾಯ ಭವನ , ಪೊಲೀಸ್ ವಸತಿಗೃಹ, ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಸಂತೆ ವ್ಯಾಪಾರಿಗಳು ರಸ್ತೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಭಾರೀ ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರು ಈ ಬಗ್ಗೆ ಪಟ್ಟಣ ಪಂಚಾಯತ್ ಹಲವು ವರ್ಷಗಳಿಂದ ದೂರು ನೀಡುತ್ತಲೇ ಬಂದಿದ್ದರು.

ಮುಖ್ಯಾಧಿಕಾರಿಗಳು ಮತ್ತು ಅಧ್ಯಕ್ಷರ ನಿಯೋಗ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು.

ಪಟ್ಟಣ ಪಂಚಾಯತ್ ಅಧಿನದ ಪುರಭವನದ ಹಿಂಭಾಗದಲ್ಲಿರುವ ಖಾಲಿ ಜಾಗಕ್ಕೆ ಶಿಫ್ಟ್ ಮಾಡಲಾಗುವುದು ಎಂದು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ.ರವರು ಸೂಚನೆ ನೀಡಿದ್ದರು.

ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಇದೇ ರಸ್ತೆಗೆ ತಾಗಿಕೊಂಡಿರುವ ಪಟ್ಟಣ ಪಂಚಾಯತ್ ಅಧಿನದ ಪುರಭವನದ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ವಾರದ ಸಂತೆ ನಡೆಸಲು ಗುರುತಿಸಲಾಗಿತ್ತು.

ಮಂಗಳವಾರ ಬೆಳ್ಳಂಬೆಳಿಗ್ಗೆ ಆಗಮಿಸಿದ ಮುಖ್ಯಾಧಿಕಾರಿ, ಪೊಲೀಸರು, ಸಿಬ್ಬಂದಿಗಳು ಸಂತೆಯನ್ನು ತೆರವುಗೊಳಿಸಲು ಸೂಚಿಸಿದರು. ಇದಕ್ಕೆ ತರಕಾರಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಈಗ ನಿಗದಿಪಡಿಸಿರುವ ಸ್ಥಳಕ್ಕೆ ವಾಹನ ಹೋಗಲು ವ್ಯವಸ್ಥೆ ಇಲ್ಲ ಹಾಗೂ ಗ್ರಾಹಕರು ಈ ಕಡೆ ಬರಲ್ಲ ಎಂದು ಕಾರಣ ನೀಡಿ, ಹಿಂದೇಟು ಹಾಕಿದರು. ಸ್ಥಳದಲ್ಲಿ ಕೆಲಹೊತ್ತು ಮಾತಿನ ಚಕಮಕಿಯೂ ನಡೆದಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಮತ್ತು, ಸದಸ್ಯರು ಆಗಮಿಸಿ, ಮಾತುಕತೆ ನಡೆಸಿ, ಪಂಚಾಯತ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಮನವಿ ಮಾಡಿದರು.

ಕೊನೆಯಲ್ಲಿ ಒಂದು ಬದಿಯಲ್ಲಿ ವ್ಯಾಪಾರ ಮಾಡುವವರನ್ನು ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು. ಅದಲ್ಲದೇ ಇನ್ನೊಂದು ಬದಿಯಲ್ಲಿ ವ್ಯಾಪಾರ ಮಾಡುವವರು ರಸ್ತೆಯನ್ನು ಬಿಟ್ಟು ಅಂಗಡಿ ಇಡುವಂತೆ ಖಡಕ್ ಸೂಚನೆ ನೀಡಲಾ ಯಿತು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾವುದು ಎಂದು ಎಚ್ಚರಿಕೆ ನೀಡಲಾಯಿತು. ಸಾರ್ವಜನಿಕರ ಮನವಿ ಸ್ಪಂದಿಸಿ, ತಕ್ಷಣವೇ ಪರಿಹಾರ ಕಂಡುಕೊಂಡ ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಪೆÇನ್ನೋಟ್ಟು ಭಾಗದ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯರಾದ ವಿಕೆಎಂ ಅಶ್ರಪ್, ಅರುಣ್ ಎಂ ವಿಟ್ಲ, ಜಯಂತ ಸಿ.ಎಚ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News