ಮನಪಾ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ: ವಿಶೇಷ ತನಿಖಾ ತಂಡ ರಚನೆಗೆ ಸಿಪಿಎಂ ಒತ್ತಾಯ

Update: 2025-01-07 14:10 GMT

ಮಂಗಳೂರು, ಜ.7: ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಗಳನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯ ಅಬ್ದುಲ್ ರವೂಫ್ ದಾಖಲೆಗಳನ್ನು ಮುಂದಿಟ್ಟು ಮಾಡಿದ್ದಾರೆ. ಆಯುಕ್ತರ ಮೇಲೆ ಹೊರಿಸಿರುವ ಭ್ರಷ್ಟಾಚಾರದ ಗಾತ್ರ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿದ್ದು, ಈ ಕುರಿತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡದ ಮೂಲಕ ತನಿಖೆ ನಡೆಸಬೇಕು ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ನಗರ ಪಾಲಿಕೆ ಆಯುಕ್ತರ ಮೇಲೆ ಈ ಹಿಂದೆಯೂ ಭ್ರಷ್ಟಾಚಾರ, ಸರ್ವಾಧಿಕಾರಿ ನಡೆಯ ಕುರಿತು ಹಲವು ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿ ಆಡಳಿತದಲ್ಲಿ ಮಂಗಳೂರು ನಗರ ಪಾಲಿಕೆ ಮೊದಲೇ ಭ್ರಷ್ಟಾಚಾರ, ದುರಾಡಳಿತದಿಂದ ನಲುಗಿ ಹೋಗಿದೆ. ಜಲಸಿರಿ, ಯುಜಿಡಿ, ಸ್ಮಾರ್ಟ್‌ಸಿಟಿ ಯೋಜನೆಗಳ ಭ್ರಷ್ಟಾಚಾರ, ಟಿಡಿಆರ್ ಹಗರಣ, ಅಡ್ಡಾದಿಡ್ಡಿ ಕೆಲಸಗಳಿಂದ ನಾಗರಿಕಗರು ರೋಸಿ ಹೋಗಿದ್ದರು. ಇದರ ನಡುವೆ ನಗರ ಪಾಲಿಕೆಗೆ ಆಯುಕ್ತರಾಗಿ ಆನಂದ್ ಸಿಎಲ್ ಆಗಮಿಸಿದ ಬಳಿಕ ಅವರ ವಿಲಕ್ಷಣ ನಡವಳಿಕೆ, ಪ್ರತಿಯೊಂದರಲ್ಲೂ ಯಾವ ಮುಲಾಜು ಇಲ್ಲದೆ ಹಣದ ಬೇಡಿಕೆ ಇಡುತ್ತಾರೆ ಎಂಬ ಆರೋಪ ಗಳು ಮಂಗಳೂರು ನಗರ ಪಾಲಿಕೆಯಲ್ಲಿ ಗಂಭೀರ ಸ್ಥಿತಿಯನ್ನು ನಿರ್ಮಿಸಿದೆ. ಜನತೆ ನಗರ ಪಾಲಿಕೆ ಮೇಲೆ ಪೂರ್ತಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

2001ರಿಂದ ಕಟ್ಟಲ್ಪಟ್ಟ ಪ್ರಭಾವಿಗಳಿಗೆ ಸೇರಿದ ಹಲವು ಅಕ್ರಮ ವಸತಿ ಸಂಕೀರ್ಣ, ವಾಣಿಜ್ಯ ಕಟ್ಟಡಗಳಿಗೆ ಕಂಪ್ಲೀಷನ್ ಪ್ರಮಾಣ ಪತ್ರ ನೀಡಿದ್ದಾರೆ ಎಂಬುದು ಗಂಭೀರ ವಿಷಯವಾಗಿದೆ. ಕೆಡವಲು ಆದೇಶವಾದ ಕಟ್ಟಡದ ಫ್ಲೋರ್‌ಗಳು, ನ್ಯಾಯಾಲಯದಲ್ಲಿ ತಡೆ ಇರುವ ಕಟ್ಟಡಗಳೂ ಇದರಲ್ಲಿ ಸೇರಿದೆ ಎನ್ನಲಾಗಿದೆ. ಕಳೆದ ಎರಡು ದಶಕದಲ್ಲಿ ಎಷ್ಟೇ ಒತ್ತಡ ಇದ್ದರೂ, ಯಾವ ಅಧಿಕಾರಿಗಳೂ ಮುಟ್ಟದ ಈ ಫೈಲ್‌ಗಳನ್ನು ತೀರಾ ಸರಳವಾಗಿ ಕಂಪ್ಲಿಷನ್ ಸರ್ಟಿಫಿಕೇಟ್ ನೀಡಿ ಕ್ಲಿಯರ್ ಮಾಡಿದ್ದಾರೆ ಎಂಬ ಆರೋಪದ ತನಿಖೆಯ ಅಗತ್ಯವಿದೆ. ಐದು ಲಕ್ಷ ರೂ.ಗೆ ಮೀರಿದ ಕಾಮಗಾರಿಗಳನ್ನು ತುರ್ತು ಕಾಮಗಾರಿ ಪಟ್ಟಿಗೆ ಸೇರಿಸಿ ನೇರವಾಗಿ ಕಾಮಗಾರಿ ಗುತ್ತಿಗೆ ನೀಡಿರುವುದು ನಿಯಮಗಳ ಬಹಿರಂಗ ಉಲ್ಲಂಘನೆಯಾಗಿದೆ. ಇನ್ನು ವಿವಿಧ ಕಾಮಗಾರಿಗಳಿಗೆ ನಗರ ಪಾಲಿಕೆಯಯ ಹಣಕಾಸು ಸಾಮರ್ಥ್ಯ 60 ಕೋ.ರೂ. ಇರುವಾಗ 160 ಕೋ.ರೂ.ಗೆ ಮಂಜೂರಾತಿ ನೀಡಿರುವುದು ನಗರ ಪಾಲಿಕೆಯನ್ನು ಪೂರ್ತಿ ದಿವಾಳಿ ಮಾಡುವ ಭ್ರಷ್ಟ ನಡೆಯಾಗಿದೆ. ತನ್ನ ಮೇಲೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ಮಾಡಿದ ಆರೋಪಕ್ಕೆ ಆಯುಕ್ತರು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವುದು ವಿಲಕ್ಷಣ ನಡೆಯಾಗಿದೆ. ಇದು ಖಂಡನೀಯ ಮಾತ್ರ ಅಲ್ಲ, ಶಿಸ್ತು ಕ್ರಮಕ್ಕೆ ಅರ್ಹ ಪ್ರಕರಣವಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ದುರಾಡಳಿತದಿಂದ ಬಸವಳಿದಿರುವ ಮಂಗಳೂರು ನಗರದ ಜನತೆಗೆ ಈ ಸರ್ವಾಧಿಕಾರಿ ನಡೆಯ ಆಯುಕ್ತರ ಭ್ರಷ್ಟಾಚಾರ ಅರಗಿಸಲು ಅಸಾಧ್ಯವಾಗಿದೆ. ನಗರ ಪಾಲಿಕೆಯ ಕಾಂಗ್ರೆಸ್‌ನ ಹಿರಿಯ ಸದಸ್ಯನೇ ಆರೋಪ ಹೊರಿಸಿರುವು ದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಆಯುಕ್ತರ ಮೇಲಿನ ಆರೋಪಗಳನ್ನು ಹಿರಿಯ ಅಧಿಕಾರಿಗಳ ನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಒಳಪಡಿಸಬೇಕು. ಆಯುಕ್ತರ ಮೇಲಿನ ಆರೋಪಗಳ ಜೊತೆಗೆ ಈ ಹಿಂದೆ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದ ಮರಕಡ, ಪಚ್ಚನಾಡಿ ಗ್ರಾಮದ ಜಮೀನುಗಳ ಟಿಡಿಆರ್ ಹಗರಣ, ಜಲಸಿರಿ ಯೋಜನೆಯ ಕುರಿತಾದ ಆರೋಪ, ಸ್ಮಾರ್ಟ್‌ಸಿಟಿ ಹಗರಣಗಳನ್ನು ಈ ತಂಡದ ತನಿಖಾ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

*ತನಿಖೆ ಸ್ವಾಗತಾರ್ಹ: ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ, ಕಳಪೆ ಕಾಮಗಾರಿ ಮತ್ತು ಆದ್ಯತೆಯನ್ನು ಧಿಕ್ಕರಿಸಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನಾ ಅನುಷ್ಟಾನ ಸಾರ್ವಜನಿಕರ ಹಣದ ದುಂದುವೆಚ್ಚ ಎಂದು ಈಗಾಗಲೇ ಸಿಪಿಎಂ ಹಲವಾರು ದೂರುಗಳನ್ನು ತನಿಖಾ ಸಂಸ್ಥೆ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ಆದೇಶಿಸಿರುವ ರಾಜ್ಯ ಸರಕಾರದ ಕ್ರಮವನ್ನು ಸಿಪಿಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿ ಸ್ವಾಗತಿಸುತ್ತದೆ ಎಂದು ಕಾರ್ಯದರ್ಶಿಗಳಾದ ಯೋಗೀಶ್ ಜಪ್ಪಿನಮೊಗರು ಮತ್ತು ಪ್ರಮೀಳಾ ಕೆ. ನೀಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News