ಭಾರತದ ಸಿನಿಮಾ ಚಳವಳಿಯ ದಾಖಲೀಕರಣ ಅಗತ್ಯ: ಗಿರೀಶ್ ಕಾಸರವಳ್ಳಿ
ಮಂಗಳೂರು, ಜ.12: ಭಾರತದಲ್ಲಿ ಅನೇಕ ಸಿನಿಮಾ ಚಳವಳಿಗಳು ನಡೆದಿವೆ. ಆದರೆ ಅವುಗಳ ಅಂಕಿ ಅಂಶಗಳು ಮಾತ್ರ ದಾಖಲಾಗಿವೆಯೇ ಹೊರತು ಸರಿಯಾದ ರೀತಿಯಲ್ಲಿ ಅವುಗಳ ದಾಖಲೀಕರಣವಾಗಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.
ನಗರದಲ್ಲಿ ಮಂಗಳೂರು ಲಿಟ್ ಫೆಸ್ಟ್‌ನ ಎರಡನೇ ದಿನವಾದ ರವಿವಾರ ‘ಸಿನಿಮಾ ತಾಂತ್ರಿಕತೆ’ ವಿಚಾರದ ಬಗ್ಗ್ಗೆ ಅವರು ಮಾತನಾಡಿದರು.
ಭಾರತದ ಪ್ರತಿ ರಾಜ್ಯದ ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆಯಾ ರಾಜ್ಯದ ಇತಿಹಾಸದಲ್ಲಿ ನಡೆದಿರುವ ಚಳವಳಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಜಾಗತಿಕ ಮಟ್ಟದ ಸಿನಿಮಾ ಚಳವಳಿಯ ಇತಿಹಾಸ ಬಹುತೇಕ ದಾಖಲಾಗಿದೆ ಎಂದು ಹೇಳಿದರು.
ಸಿನಿಮಾದಲ್ಲಿ ಎಲ್ಲ ರೀತಿಯ ಕಲೆಗಳ ಎಲ್ಲ ಶಕ್ತಿಯನ್ನು ಬಳಕೆ ಮಾಡುತ್ತೇವೆ. ಈ ಕಾರಣದಿಂದಾಗಿ ಸಿನಿಮಾವನ್ನು ಅರ್ಥ ಮಾಡೋದು ಯೋಚಿಸಿದಷ್ಟು ಸುಲಭವಲ್ಲ ಎಂದರು.
*ತಾಂತ್ರಿಕತೆಯ ಬಗ್ಗೆ ತಿಳಿಯಬೇಕು: ಸಿನಿಮಾಗಳ ವಿಶುವಲ್ ಡಿಸೈನ್, ಲಯದ ಬಗ್ಗೆ ಹೆಚ್ಚಾಗಿ ಯಾರೂ ಮಾತನಾಡು ವುದಿಲ್ಲ, ಆದರೆ ಅದರ ಸಾಹಿತ್ಯದ ಕುರಿತು ಹೆಚ್ಚೇ ಮಾತನಾಡ್ತಾರೆ. ಸಿನಿಮಾ ಹಿಂದಿನ ತಾಂತ್ರಿಕತೆ ಬಗ್ಗೆಯೂ ಮಾತನಾಡುವ ಅಗತ್ಯವಿದೆ ಎಂದು ಹೇಳಿದರು.
ಕೇವಲ ಸಿನಿಮಾ ಕತೆಯನ್ನು ಅರ್ಥ ಮಾಡಿದರೆ ಸಾಲದು, ಪೊಲಿಟಿಕ್ಸ್ ಆಫ್ ಫಿಲಂ ಮೇಕಿಂಗ್ ಕೂಡ ಅರ್ಥ ಮಾಡಿಕೊ ಳ್ಳಬೇಕು ಎಂದು ಕಿವಿಮಾತು ಹೇಳಿದರು.
‘ಬಾಹುಬಲಿ’ ತೆರನಾದ ಸಿನಿಮಾದಲ್ಲಿ ಸೂಪರ್ ಮಾನವನನ್ನು ಸೃಷ್ಟಿ ಮಾಡಿದ್ದಾರೆ. ಆದರೆ ನಾವು ಇಂಥ ಮ್ಯಾನಿಪ್ಯುಲೇಟೆಡ್ ಇಮೇಜ್‌ಗಳನ್ನು ಬಳಸಲ್ಲ, ನೈಜತೆಯನ್ನು ಮ್ಯಾನಿಪ್ಯುಲೇಶನ್ ಮಾಡುವುದೇ ಮಾರ್ಕೆಟಿಂಗ್ ಟೆಕ್ನಾಲಜಿ ಎಂದು ಪ್ರತಿಪಾದಿಸಿದರು.
ಸಿನಿಮಾದ ಮ್ಯೂಸಿಕ್, ಆ ದೃಶ್ಯವನ್ನು ಉದ್ರೇಕಕಾರಿಯಾಗುವಂತೆ ಮಾಡಿದರೆ ಅದು ವ್ಯಾಪಾರಿ ಮನೋಭಾವ. ಮ್ಯೂಸಿಕ್ ಎಂದೂ ದೃಶ್ಯವನ್ನು ಸಾಂದ್ರಗೊಳಿಸಬೇಕು. ಮ್ಯೂಸಿಕ್ ದೃಶ್ಯವನ್ನು ಉದ್ರೇಕಿಸುತ್ತದೆ ಎಂಬ ಕಾರಣದಿಂದಲೇ ಸಿನಿಮಾದಲ್ಲಿ ಸಂಗೀತ ಇರಬಾರದು ಎಂಬ ದೊಡ್ಡ ಒತ್ತಾಯ ಜಾಗತಿಕವಾಗಿ ಕೇಳಿಬರುತ್ತಿದೆ. ನೈಜತೆ ನೈಜವಾಗಿಯೇ ಇರಬೇಕು, ಅಲಂಕಾರ ಅತಿಯಾಗಿರದೆ ಸಿನಿಮಾ ಮೂಡಿಬರಬೇಕು ಎಂದು ಗಿರೀಶ್ ಕಾಸರವಳ್ಳಿ ಸಲಹೆ ನೀಡಿದರು.
ಸಾಹಿತಿ ಗೋಪಾಲಕೃಷ್ಣ ಪೈ ಮಾತನಾಡಿ, ಗಿರೀಶ್ ಕಾಸರವಳ್ಳಿ ಸಿನಿಮಾಗಳಲ್ಲಿ ಹಾಡು, ಡ್ಯಾನ್ಸ್, ಫೈಟ್ ಎಲ್ಲೂ ಇಲ್ಲ. ಆದರೂ ಅವು ಒಳ್ಳೆ ಸಿನಿಮಾಗಳಾಗಿ ಹೆಸರು ಮಾಡಿವೆ. ಮ್ಯೂಸಿಕ್ ಎಷ್ಟು ಬೇಕೋ ಅಷ್ಟನ್ನೇ ಬಳಕೆ ಮಾಡುವುದು ಉತ್ತಮ ಎಂದು ಹೇಳಿದರು.
ಅರುಣ್ ಭಾರದ್ವಾಜ್ ಕಾರ್ಯಕ್ರಮ ನಿರ್ವಹಿಸಿದರು.