ಪಜೀರು | ದಫನ ಭೂಮಿಯ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿಶ್ರಾಂತ ಪ್ರಾಧ್ಯಾಪಕರಿಂದ ದಫನ ಭೂಮಿಯಲ್ಲೇ ಏಕಾಂಗಿ ಧರಣಿ

Update: 2025-01-12 11:12 GMT

.

ಕೊಣಾಜೆ: ಇಲ್ಲಿನ ಪಜೀರು ಗ್ರಾಮದಲ್ಲಿ ದಫನ ಭೂಮಿಯ ಸಮಸ್ಯೆಗೆ ಸೂಕ್ತ ಕ್ರಮಕೈಗೊಂಡು ಬಗೆಹರಿಸುವಂತೆ ಒತ್ತಾಯಿಸಿ ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಪ್ರೊ.ಅಬ್ದುಲ್ ರಹಿಮಾನ್ ಧಪನ ಭೂಮಿಗಾಗಿ ಕಾಯ್ದಿರಿಸಿದ ಜಾಗದಲ್ಲೇ ಏಕಾಂಗಿ ಧರಣಿ ಆರಂಭಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ, ಹಿರಿಯ ಪ್ರಾಧ್ಯಾಪಕರಾಗಿ ನಿವೃತ್ತಿಯಾಗಿರುವ ಪಜೀರು ಗ್ರಾಮದ ಗ್ರಾಮಚಾವಡಿ ನಿವಾಸಿ ಪ್ರೊ.ಬಿ.ಅಬ್ದುಲ್ ರಹಿಮಾನ್ ಅವರು ತಮ್ಮೂರಿನಲ್ಲಿ ಮುಸ್ಲಿಂ ಧಪನ ಭೂಮಿಗಾಗಿ ಹೊರಾಟ‌ ಮಾಡಿದ್ದರು. ಇದೀಗ ಗ್ರಾಮಚಾವಡಿ ಬಳಿ ಜಮೀನು ಕಾಯ್ದಿರಿಸಿದ್ದರೂ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಆ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯನಡೆದಿಲ್ಲ, ಆದ್ದರಿಂದ ಕೂಡಲೇ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ.

2015 ರಲ್ಲೇ‌ ದಫನ ಭೂಮಿಗಾಗಿ ಮನವಿ:

ಈ ಕುರಿತು ಮಾತನಾಡಿರುವ ಪ್ರೊ.ಅಬ್ದುಲ್ ರಹಿಮಾನ್ ಅವರು, ಗ್ರಾಮಚಾವಡಿಯಲ್ಲಿ ಮುಸ್ಲಿಂ ದಫನ ಭೂಮಿಗಾಗಿ 2015 ರಲ್ಲಿ ಅಲ್ ಅಖ್ಸಾ ಮಸೀದಿಯ ವತಿಯಿಂದ ಅಂದಿನ ಜಿಲ್ಲಾಧಿಕಾರಿಗಳಾದ ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಿದ್ದೆವು. ಬಳಿಕ ಕೆಲವು ಅಡತಡೆಗಳು ಎದುರಾದರೂ ಜಿಲ್ಲಾ ವಕ್ಫ್ ಹಾಗೂ ಜಿಲ್ಲಾಡಳಿತದ ಸಲಹೆಯಂತೆ ಪಜೀರು ಪಂಚಾಯತ್ ವತಿಯಿಂದ ಬೇಡಿಕೆ ಸಲ್ಲಿಸಲಾಗಿ 2021 ರಂದು ಪಂಚಾಯತ್‌ಗೆ ಜಮೀನನ್ನು ಕಾಯ್ದಿರಿಸಲಾಗಿತ್ತು. ಯಾವಾಗ ದಫನ ಭೂಮಿಯನ್ನು ಕಾಯ್ದಿರಿಸಲಾಯಿತೋ ಕೆಲವು ಪಂಚಾಯಿತಿ ಸದಸ್ಯರು ತಮ್ಮದೇ ಹಕ್ಕು ಎಂಬಂತೆ ವರ್ತಿಸತೊಡಗಿದ್ದು, ದಫನ‌ ಭೂಮಿ ಅಭಿವೃದ್ಧಿ ಸಮಿತಿ ರಚಿಸಲು ಕರೆದ ಪ್ರಥಮ ಸಭೆಗೆ ನನಗೆ ಆಹ್ವಾನ ನೀಡದೆ ಕಡೆಗಣಿಸಿದ್ದರು. ಸಭೆಗೆ ಕರೆಯದಿದ್ದರೂ ನಾನು ಸಭೆಗೆ ಹೋಗಿದ್ದಾಗ ಕೆಲವು ಮುಖಂಡರ ಒತ್ತಡದಿಂದ ಸಮಿತಿಯ ಕೊನೆಯ ಸದಸ್ಯನಾಗಿ ಸೇರಿಸಿದ್ದರು ಎಂದು ಹೇಳಿದರು.

ಬಳಿಕ ಪಿಡಿಒ ಮೂಲಕ ಸಭೆ ನಡೆದರೂ ಸಮಿತಿಯ ವಿಷಯದಲ್ಲಿ ವಿವಾದ ಮುಂದುವರಿದಿತ್ತು. ಇದರಿಂದ ಬೇಸರಗೊಂಡು ಹೊರ ನಡೆದಾಗ ಇದನ್ನೇ ನೆಪವಾಗಿಸಿ ನಾನು ಸೇರಿ ಮೂವರು ಸದಸ್ಯರನ್ನು ಹೊರಗಿಡುವ ಪ್ರಯತ್ನವನ್ನೂ ಮಾಡಲಾಗಿತ್ತು ಎಂದು ತಿಳಿದು ಬೇಸರಗೊಂಡಿದ್ದೆ. ಸಮಿತಿ ಆರಂಭವಾಗಿ 3 ವರ್ಷ ಕಳೆದರೂ ಸಮಿತಿಯು ಅಸ್ತಿತ್ವದಲ್ಲಿದೆಯೇ ಎಂದು ತಿಳಿಯುತ್ತಿಲ್ಲ. ಯಾಕೆಂದರೆ ಸಮಿತಿಗೆ ಬ್ಯಾಂಕ್ ಅಕೌಂಟ್‌ ಆಗಲೀ, ಲೆಟರ್ ಹೆಡ್ ಕೂಡಾ ಇಲ್ಲ. ಅಭಿವೃದ್ಧಿ ಸಮಿತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯ‌ ನಡೆಯದಿದ್ದಾಗ ನಾವೇ ಕೆಲವು ಮಂದಿ ಹಣ ಹೊಂದಿಸಿಕೊಂಡು ಕಾಯ್ದಿರಿಸಿದ ಇಳಿಜಾರು ಪ್ರದೇಶವನ್ನು ಸಮತಟ್ಟು ಮಾಡಿದ್ದೆವು. ಆದರೆ ಇದು ಕೆಲವು ಪಂಚಾಯತ್ ಸದಸ್ಯರಿಗೆ ಒಪ್ಪಿಗೆಯಾಗದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ಎಲ್ಲಾ ವಿಚಾರಗಳು ನನಗೆ ತುಂಬಾ ಬೇಸರ ತಂದಿದೆ ಎಂದರು.

ದಫನ ಭೂಮಿ ಮೇಲ್ವಿಚಾರಣೆಗಾಗಿ ಸಮಿತಿ ರಚಿಸುವುದು ಮತ್ತು ಈ ಸಮಿತಿಗೆ ಅಭಿವೃದ್ಧಿಯ ಮೇಲ್ವಿಚಾರಣೆ, ಪಂಚಾಯತ್ ಸದಸ್ಯರು ರಾಜಕೀಯ ತಾರತಮ್ಯ ಮಾಡದಿರುವುದು ಹಾಗೂ ಪಿಡಿಒ ಅವರನ್ನು ಶಾಶ್ವತ ಆಹ್ವಾನಿತರಾಗಿ ಸೇರಿಸುವುದು, ದಫನ ಭೂಮಿಗೆ ನಾಮಪಲಕ ಅಳವಡಿಸುವುದು, ಜಮೀನಿನಲ್ಲಿ ಪಂಚಾಯತ್ ವತಿಯಿಂದ ನೀರಿನ ವ್ಯವಸ್ಥೆ, ಕೊಠಡಿ, ಆವರಣಗೊಡೆ ನಿರ್ಮಾಣ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗ್ಗಿನಿಂದ ಸಂಜೆಯವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ಉದ್ದೇಶಿದ್ಧೇನೆ ಎಂದು ತಿಳಿಸಿದರು.

ನಾನು ಮಂಗಳೂರು ವಿವಿಯಲ್ಲಿ 18 ವರ್ಷಗಳ ಕಾಲ ಹಾಗೂ ಕುವೆಂಪು ವಿವಿಯಲ್ಲಿ ಹಿರಿಯ ಪ್ರಾಧ್ಯಾಪಕನಾಗಿ 13 ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. 76ರ ಹರೆಯದ ನನಗೆ ಹೃದಯಕ್ಕೆ ಸಂಬಂಧಿಸಿ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿದ್ದರೂ ಈ ಊರಿನ ಜನರ ಪರವಾಗಿ ದಫನ ಭೂಮಿಯ ಸಮಸ್ಯೆಯ ಪರಿಹಾರಕ್ಕಾಗಿ ಒತ್ತಾಯಿಸುತ್ತಾ ಬಂದಿದ್ದೇನೆ. ಇದೀಗ ಬೇಡಿಕೆ ಈಡೇರಿಕೆಗಾಗಿ ಕೊನೆಯದಾಗಿ ಅನಿರ್ದಿಷ್ಟಾವಧಿ ಏಕಾಂಗಿಯಾಗಿ ಧರಣಿ ನಡೆಸಲು ಉದ್ದೇಶಿಸಿದ್ದೇನೆ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಅಬ್ದುಲ್ ರಹಿಮಾನ್ ತಿಳಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News