ಚುಟುಕುಗಳು ಜಗದೊಡಲೊಳಗೆ ನಿರಂತರ ಸಂಪರ್ಕದಲ್ಲಿರುತ್ತವೆ: ಮುಳಿಯ ಶಂಕರ ಭಟ್

Update: 2025-01-12 15:48 GMT

ವಿಟ್ಲ : ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬಂಟ್ವಾಳ ತಾಲೂಕು ‌ಚುಟುಕು ಸಾಹಿತ್ಯ ಪರಿಷತ್, ವಿಠಲ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ‌ ಪಲಿಮಾರು ಶ್ರೀ ಜನಾರ್ದನ ಪೈ ಸಭಾಂಗಣದ ರವಿವರ್ಮ ಕೃಷ್ಣರಾಜ ಅರಸು ವೇದಿಕೆಯಲ್ಲಿ ತಾಲೂಕು ಆರನೇ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಿತು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ, ಮುಳಿಯ ಶಂಕರಭಟ್ ಅಧ್ಯಕ್ಷೀಯ ಭಾಷಣ ಮಾಡಿ, ಚುಟುಕುಗಳು ಅಣಕು ವಿನೋದವಾಗಿರಬೇಕೇ ಹೊರತು ವ್ಯಕ್ತಿಗತ ಮಾನಸಿಕ ವೇದನೆಗೆ ಕಾರಣವಾಗಿರಬಾರದು. ಗಟ್ಟಿತನದ ಚುಟುಕು ಸಾರ್ವಕಾಲಿಕವಾಗಿ ಉಳಿಯುತ್ತದೆ. ಮಕ್ಕಳ ಮನಸ್ಸನ್ನು ಚುಟುಕು ಒಪ್ಪುತ್ತವೆ, ಗೆಲ್ಲುತ್ತವೆ. ಕಾಲಕಾಲದ ಪರಿಸ್ಥಿತಿಗಳಿಗೆ ಅನುಗುಣವಾಗಿ ಚುಟುಕುಗಳ ಸ್ವರೂಪಗಳೂ ರೂಪಾಂತರಗೊಂಡಿವೆ. ಚುಟುಕುಗಳು ಜಗದೊಡಲೊಳಗೆ ನಿರಂತರ ಸಂಪರ್ಕದಲ್ಲಿರುತ್ತವೆ ಎಂದು ಚುಟುಕು ಸಾಹಿತ್ಯದ ಮಹತ್ವವನ್ನು ತಿಳಿಸಿದರು.

ವಿಟ್ಲ ಅರಮನೆಯ ಬಂಗಾರು ಅರಸರ ಉಪಸ್ಥಿತಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಸಮಿತಿಯ ಪ್ರಧಾನ ಸಂಚಾಲಕ ಎಂ. ಜಿ. ಆರ್. ಅರಸು ಅವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ, ಆಕಳಿಸುವ ನೂರು ಮಂದಿಗಿಂತ ಆಸಕ್ತಿ ಇರುವ ಹತ್ತು ಮಂದಿ ಸಾಹಿತ್ಯ ಸಮ್ಮೇಳನದ ಸಭೆಯಲ್ಲಿದ್ದರೆ ಸಾಕು. ಚುಟುಕುಗಳು ಪ್ರತಿಯೊಬ್ಬರ ಮನಸ್ಸಿನ ಸಾಂತ್ವನಕ್ಕೆ ಕಾರಣವಾಗಿವೆ.

ಕನಕನ ಕಿಂಡಿಯಂತೆ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ್ದಾಗಿದೆ ಎಂದರು.

ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಇರಾ ನೇಮು ಪೂಜಾರಿ, ಮೈಸೂರು ಜಿಲ್ಲೆ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ನಟರಾಜ್ ಮೈಸೂರು, ವಿದ್ಯಾ ಸಂಸ್ಥೆಯ ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷ ಸುದರ್ಶನ ಪಡಿಯಾರ್ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಸೀತಾಲಕ್ಷ್ಮಿ ವರ್ಮ ಅವರ ಬೊಗಸೆಯೊಳಗಿನ 'ಚುಟುಕು ಸಾಗರ' ಕೃತಿ ಅನಾವರಣಗೊಂಡಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರಾಧನಾ ಕಲಾಭವನ ಸಾರಡ್ಕ(ಸಂಸ್ಥೆ), ದೈಹಿಕ ಶಿಕ್ಷಕ ನಿರ್ದೇಶಕ ಶ್ರೀನಿವಾಸ್ ಗೌಡ, ಉಪನ್ಯಾಸಕ ಅಣ್ಣಪ್ಪ ಸಾಸ್ತಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೇಖರ ಪರವ, ಗೋಪಾಲ ಜೋಗಿ, ನಾಟಿ ವೈದ್ಯರಾದ ನಳಿನಿ, ಬಾಲ ಪ್ರತಿಭೆ ರಿಷಿತ್ ರಾಜ್ ಅವರನ್ನು ಸನ್ಮಾನಿಸಲಾಯಿತು.

ಉದ್ಘಾಟನೆಗೆ ಮೊದಲು ನಡೆದ ಮೆರವಣಿಗೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಉದ್ಘಾಟಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣಗೈದರು. ಚುಟುಕು ಸಾಹಿತ್ಯ ಧ್ವಜಾರೋಹಣವನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ನೆರವೇರಿಸಿದರು.

ವಿಠಲ ಎಜುಕೇಶನ್ ಸೊಸೈಟಿ ಸದಸ್ಯ ನಿತ್ಯಾನಂದ ನಾಯಕ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಪ್ರಸ್ತಾವಿಸಿದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಮೋಹನ ಗುರ್ಜಿನಡ್ಕ ವಂದಿಸಿದರು. ರಾಧಾಕೃಷ್ಣ ಎರುಂಬು, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದ ಅಂಗವಾಗಿ ವಿರಾಜ್ ಅಡೂರು ರಚಿಸಿದ ವ್ಯಂಗ್ಯ ಚಿತ್ರ ಪ್ರದರ್ಶನ, ಬಾಲಕೃಷ್ಣ ಶೆಟ್ಟಿ ಖಂಡಿಗ ಹಾಗೂ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲಾ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News