ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಈರುಳ್ಳಿಯ ಎಸೆಳುಗಳಂತಿವೆ: ಡಾ.ಆರ್.ಬಾಲಸುಬ್ರಹ್ಮಣ್ಯಂ

Update: 2025-01-12 16:16 GMT

ಮಂಗಳೂರು, ಜ.12: ವಿದೇಶಿಯರು ಸ್ವಾಮಿ ವಿವೇಕಾನಂದರನ್ನು ತಿಳಿದುಕೊಂಡಿದ್ದಾರೆ. ನಮ್ಮಲ್ಲಿ ಬಹುತೇಕ ಮಂದಿ ಅವರ ವ್ಯಕ್ತಿತ್ವವನ್ನು ತಿಳಿದುಕೊಂಡಿಲ್ಲ. ವಿವೇಕಾನಂದ ವ್ಯಕ್ತಿತ್ವ ಈರುಳ್ಳಿ ತರಹ. ಒಂದು ಸಿಪ್ಪೆ ತೆಗೆದಾಗ ಇನ್ನೊಂದು ಉತ್ತಮ ಸಿಪ್ಪೆ ತೆರೆಯುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಾಮರ್ಥ್ಯ ಆಯೋಗ ಸದಸ್ಯ ಹಾಗೂ ವಿವೇಕಾನಂದ ಯೂತ್ ಮೂವ್‌ಮೆಂಟ್ ಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ.

ಮಂಗಳೂರಿನಲ್ಲಿ ಲಿಟ್ ಫೆಸ್ಟ್-2025 ‘ ಸಾಹಿತ್ಯ ಉತ್ಸವದ ’ ಎರಡನೇ ನೇ ದಿನವಾಗಿರುವ ರವಿವಾರ ಈ ಸಾಲಿನ ‘ಮಂಗಳೂರು ಲಿಟ್ ಫೆಸ್ಟ್’ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಈಗಿನ ಯುವಜನತೆ ದೇಶದ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ದೇಶದ ಕೊರತೆಗೆ ನಮ್ಮಲ್ಲೇ ಉತ್ತರ ಕಂಡುಕೊಳ್ಳುವ ಬದಲು ಪಾಶ್ಚಾತ್ಯದತ್ತ ಮುಖ ಮಾಡುತ್ತೇವೆ. ವಿದೇಶಿಗರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ನಾವು ನಮ್ಮ ದೇಶವನ್ನು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ ನಾಯಕತ್ವ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದರು.

*ನೀತಿ ಮಾಡುವುದರಲ್ಲಿ ನಾಯಕತ್ವದ ಕೊರತೆ: ನಾಯಕತ್ವದ ದೇಶದ ನೀತಿಯಲ್ಲಿ ಕೊರತೆ ಇದೆಯೊ ಅಥವಾ ಇಲ್ಲವೊ ಗೊತ್ತಿಲ್ಲ. ಆದರೆ ನೀತಿ ಮಾಡುವವರಲ್ಲಿ ನಾಯಕತ್ವದ ಕೊರತೆ ಇದೆ ಎನ್ನುವುದನ್ನು ವಿದೇಶದಲ್ಲಿ ಅಧ್ಯಯನದಿಂದ ತಿಳಿದುಕೊಂಡೆ. ನಾಯಕತ್ವದ ಬಗ್ಗೆ ತಿಳಿದುಕೊಳ್ಳಲು ವಿದೇಶದಲ್ಲಿ ಅಧ್ಯಯನ ನಡೆಸಿದೆ. ದೇಶದ ಕೊರತೆ ಪತ್ತೆ ಹಚ್ಚಲು ಅಲ್ಲಿ ವ್ಯವಸ್ಥೆ ಸಿಗುತ್ತದೆ ಎಂಬ ಹುಚ್ಚಿನ ಹುಡುಕಾಟದಲ್ಲಿ ವಿದೇಶಕ್ಕೆ ಹೋಗಿದ್ದೆ . ಅಧ್ಯಯನದಿಂದ ಅವರಲ್ಲೂ ಉತ್ತರವಿಲ್ಲ ಎಂಬ ವಿಚಾರ ಗೊತ್ತಾದಾಗ ಬೇಸರದಲ್ಲಿ ಭಾರತಕ್ಕೆ ವಾಪಸ್ ಬಂದೆ ಎಂದರು.

‘ ಧೂಳು ಕೂತಿರುವ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿದಾಗ ಮುಖ ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಭಾವನೆ ಬರುವುದು ಸಹಜ . ಆಗ ಯಾರಾದರೂ ಬಂದು ದಡ್ಡ ನಿನ್ನ ಮುಖ ಚೆನ್ನಾಗಿಯೆ ಇದೆ. ಕನ್ನಡಿಯಲ್ಲಿರುವ ಧೂಳನ್ನು ಒರೆಸಿ ನೋಡು ಎಂದಾಗ ನಮಗೆ ವಾಸ್ತವ ಅರಿವಾಗುತ್ತದೆ ಎಂದರು.

*ಆದಿವಾಸಿಗಳಿಗೆ ‘ನಮ್ಮದೇ’ ಎಂಬುದು ಗೊತ್ತು: ನಗರದಲ್ಲಿ ಜನಿಸಿದವರಿಗೆ ‘ನಾನು’ ಗೊತ್ತು, ‘ನಾವು’ ಎಂಬುದು ಗೊತ್ತಿಲ್ಲ.

ಆದಿವಾಸಿಗಳಿಗೆ ‘ನಮ್ಮದೇ’ ಎಂಬುದು ಗೊತ್ತು. ಆದಿವಾಸಿ ಎಂದರೆ ಕಾಡು ನೆನಪಾಗುತ್ತದೆ. ಇವತ್ತು ಸರಕಾರದ ಆದಿವಾಸಿಗಳಾಗಿದ್ದಾರೆ, ನಮ್ಮನ್ನು ವಿಂಗಡಿಸಿ ಗುರುತಿಸುತ್ತೇವೆಯೇ ಹೊರತು ಭಾರತೀಯ ಎಂದು ಹೇಳಿಕೊಳ್ಳುತ್ತಿಲ್ಲ. ನಾವು ಜೀವನದಲ್ಲಿ ಸ್ಫೂರ್ತಿಯುತವಾಗಿ ಪಯಣಿಸುತ್ತಾ ನಾಯಕತ್ವ ಗುಣ ರೂಢಿಸಿಕೊಂಡು ದೇಶದ ಸಂಸ್ಕೃತಿಯ ಬಗ್ಗೆ ಸಂದೇಶ ನೀಡಬೇಕು ಎಂದರು.

ಗುರುತಿಸುವಿಕೆಯನ್ನು ವಿಂಗಡಿಸುವವರು, ನಮ್ಮ ಪರಂಪರೆಯನ್ನು ನೋಡಲು ಸಾಧ್ಯವಿಲ್ಲ, ಇವತ್ತಿನ ಯುವಕರಿಗೆ ಆದರ್ಶ ವ್ಯಕ್ತಿತ್ವ ಸಿಗಬೇಕು. ಆಗ ಅವರು ಬದಲಾಗುತ್ತಾರೆ ಎಂದರು.

*ಪ್ರಧಾನಿಯ ಮೂರು ಷರತ್ತು: ಆಳವಾದ ಪುಸ್ತಕ ಬರೆಯಲು ಸಂಶೋಧನೆ ಅಗತ್ಯ. ಸಂಪೂರ್ಣ ವಾಗಿ ರಿಯಾಲಿಟಿ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ರಿಯಾಲಿಟಿಯ ಹತ್ತಿರ ಹೋಗಲು ಸಾಧ್ಯವಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಾನು ನಾಯಕತ್ವದ ಬಗ್ಗೆ ಪುಸ್ತಕ ಬರೆಯಬೇಕು ಎಂದು ಯೋಚಿಸಿದ್ದೇನೆ, ನಿಮ್ಮನ್ನು ವಿಶ್ಲೇಶಿಸಿ ಬರೆಯಬೇಕು ಎಂದಾಗ. ಅವರು ತಮಾಷೆಯಿಂದ ನನ್ನ ಬಗ್ಗೆ ನೀವು ಬರೆಯ ಬೇಕಿಂದಿಲ್ಲ . ಅದು ವ್ಯರ್ಥ , ಇನ್ನೊಬ್ಬ ಮೋದಿ ಭಕ್ತನ ಪುಸ್ತಕ ಬೇಡ, ಯಾಕೆ ಸಮಯ ವ್ಯರ್ಥ ಮಾಡುತ್ತೀರಿ ಎಂದು ಹೇಳಿ ನಕ್ಕರು. ಬಳಿಕ ಒಪ್ಪಿಕೊಂಡು ಮೂರು ಷರತ್ತು ವಿಧಿಸಿದರು. ಅವರ ಮೊದಲನೇ ಷರತ್ತು ಪುಸ್ತಕ ಮೋದಿ ಬಗ್ಗೆ ಆಗಬಾರದು ಮತ್ತು ಅದು ಭಾರತೀಯ ಪರಂಪರೆ ಆಧಾರಿತ ನಾಯಕತ್ವದ ಪುಸ್ತಕ ಆಗಿರಬೇಕು. ಎರಡನೇಯದು ವಿಶ್ವಕ್ಕೆ ಭಾರತ ನಾಯಕತ್ವದಲ್ಲಿ ವಿಶ್ವಗುರು ಎಂಬ ವಿಚಾರ ಪುಸ್ತಕದಲ್ಲಿ ಬಿಂಬಿತವಾಬೇಕು ಮತ್ತು ಪುಸ್ತಕದ ಮೂಲಕ ಅದೊಂದು ಪಾಠ ಪುಸ್ತಕವಾಗಬೇಕು ಹಾಗೂ ವ್ಯಕ್ತಿ ಆಧಾರಿತ ಆಗಬಾರದು ಮೂರನೇ ಷರತ್ತು ಈ ಪುಸ್ತಕವನ್ನು ಓದುವುದರಿಂದ ದೇಶದ ಸೇವೆಗೆ ಸಾವಿರ ನಾಯಕರು ರೂಪುಗೊಳ್ಳಬೇಕು ಎಂದಾಗಿತ್ತು . ಮೂರು ವರ್ಷಗಳ ಬಳಿಕ ಅವರನ್ನು ಭೇಟಿಯಾದಾಗ ಅವರಿಗೆ ಹಿಂದೆ ತಮ್ಮೊಂದಿಗೆ ಮಾತನಾಡಿದ್ದ ವಿಚಾರಗಳನ್ನು ಮರೆತಿರಲಿಲ್ಲ ಎಂದು ನೆನಪಿಸಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರ ಸಂವಹನ ಬೇರೆ ಬೇರೆ ಕಡೆ ವಿಭಿನ್ನ ರೀತಿಯಲ್ಲಿ ಇರುವುದನ್ನು ನೋಡಬಹುದು. ಮನ್‌ಕೀ ಬಾತ್, ಕ್ಯಾಬಿನೆಟ್ ಮೀಟಿಂಗ್, ರಾಜಕೀಯ ಸಭೆಯಲ್ಲಿ ಅವರ ಮಾತನ್ನು ಗಮನಿಸಬಹುದು. ವೈನಾಡಿನಲ್ಲಿ ಅನಾಹುತದಲ್ಲಿ ಆಸ್ಪತ್ರೆ ಸೇರಿದ್ದ ತಾಯಿಯ ಪಕ್ಕದಲ್ಲಿ ಕೂತ್ತಿದ್ದ ಮಗುವಿನ ತಲೆ ಸವರಿ ಮಾತನಾಡುತ್ತಾರೆ. ಆಗ ಮಗು ವಿಗೆ ಅವರ ಅರ್ಥವಾಗಿದೆಯೋ ಗೊತ್ತಿಲ್ಲ. ಆದರೆ ಮಗುವಿನ ತಲೆ ಸವರಿ ಮಾತನಾಡುವುದನ್ನು ನೋಡಿದವರಿಗೆ ವಿಶ್ವಾಸ ವ್ಯಕ್ತವಾಗುತ್ತದೆ. ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಅವರು ಪ್ರಧಾನಿಯನ್ನು ಭೇಟಿಯಾದಾಗ ಬುಮ್ರಾ ಮಗುವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ಆಗ ಮಗುವಿಗೆ ಖುಶಿಯಾಗುತ್ತದೆ ಎಂದು ಬಣ್ಣಿಸಿದರು.

ನಮ್ಮಲ್ಲಿ ನಾಯಕತ್ವವನ್ನು ಕೊಂಡಾಡುತ್ತೇವೆ, ನಾಯಕರನ್ನು ಕೊಂಡಾಡುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರ ‘ ಪವರ್ ವಿತ್ ಇನ್-ಲೀಡರ್‌ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ’ ಆಂಗ್ಲ ಕೃತಿಯನ್ನು ಸಂಸದ ಹಾಗೂ ಭಾರತ್ ಫೌಂಡೇಷನ್ ಟ್ರಸ್ಟಿ ಬ್ರಿಜೇಶ್ ಚೌಟ ಬಿಡುಗಡೆಗೊಳಿಸಿದರು.

ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಡಾ.ರವಿ, ಭಾರತ್ ಫೌಂಡೇಷನ್‌ನ ಟ್ರಸ್ಟಿಗಳಾದ ಡಾ. ಶ್ರೀಧರನ್, ಶ್ರೀರಾಜ್ ಗುಡಿ, ಸುನೀಲ್ ಕುಲಕರ್ಣಿ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News