ಸಬ್ಸಿಡಿ ಆಧಾರಿತ ಸಾಲ ನೀಡುವಾಗ ವಿನಾಕಾರಣ ತಡೆ ಬೇಡ: ಬ್ಯಾಂಕ್‌ಗಳಿಗೆ ದ.ಕ. ಜಿ.ಪಂ. ಸಿಇಒ ನಿರ್ದೇಶನ

Update: 2025-03-15 18:10 IST
ಸಬ್ಸಿಡಿ ಆಧಾರಿತ ಸಾಲ ನೀಡುವಾಗ ವಿನಾಕಾರಣ ತಡೆ ಬೇಡ: ಬ್ಯಾಂಕ್‌ಗಳಿಗೆ ದ.ಕ. ಜಿ.ಪಂ. ಸಿಇಒ ನಿರ್ದೇಶನ
  • whatsapp icon

ಮಂಗಳೂರು, ಮಾ.15: ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ರೀತಿಯ ಸಬ್ಸಿಡಿ ಆಧಾರಿತ ಸಾಲ ಯೋಜನೆಗಳಿಗೆ ಸಂಬಂಧಿಸಿ ಫಲಾನುಭವಿಗಳಿಗೆ ವಿಳಂಬ ಧೋರಣೆ ಅನುಸರಿಸಬಾರದು ಎಂದು ಜಿ.ಪಂ. ಸಿಇಒ ಡಾ. ಆನಂದ್‌ರವರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಉರ್ವಾಸ್ಟೋರ್‌ನ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಜಿಲ್ಲಾ ಲೀಡ್ ಬ್ಯಾಂಕ್ ಸಭೆಯಲ್ಲಿ ವಿವಿಧ ಸರಕಾರಿ ಯೋಜನೆಗಳಿಗೆ ಸಂಬಂಧಿಸಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ವಿವರವನ್ನು ಪಡೆದುಕೊಂಡರು.

ಸರಕಾರದ ಸಬ್ಸಿಡಿ ಆಧಾರಿತ ಸಾಲ ಯೋಜನೆಗಳ ಮಂಜೂರಾತಿಯನ್ನು ಫಲಾನುಭವಿಗಳ ಸಿಬಿಲ್ ಸ್ಕೋರ್ ಕಾರಣದಿಂದ ವಿಳಂಬ ಅಥವಾ ತಡೆಹಿಡಿಯಲಾಗುತ್ತದೆ. ದುರ್ಬಲ ವರ್ಗಗಳಿಗೆ ನೀಡಲಾಗುವ ಈ ಸಬ್ಸಿಡಿ ಯೋಜನೆಗಳು ಇಂತಹ ಸಣ್ಣ ಪುಟ್ಟ ಕಾರಣಗಳಿಗಾಗಿ ಫಲಾನುಭವಿಗಳಿಂದ ವಂಚಿತವಾಗ ಬಾರದು. ಈ ಬಗ್ಗೆ ಬ್ಯಾಂಕ್‌ಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.

ಮುದ್ರಾ ಯೋಜನೆಯಡಿ 618.01 ಕೋಟಿ ರೂ. ಸಾಲ ವಿತರಣೆ

ಮುದ್ರಾ ಯೋಜನೆಯಡಿ 2024ರ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ 47570 ಖಾತೆಗಳಿಗೆ ಒಟ್ಟು 618.01 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ತಿಳಿಸಿದರು.

ಇದೇ ಅವಧಿಯಲ್ಲಿ ಪ್ರಧಾನ ಮಂತ್ರಿ ಜನ್‌ಧನ್ ಯೋಜನೆಯಡಿ 37,161 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನ ಮಂತ್ರಿಜೀವನ್ ಜ್ಯೋತಿ ವಿಮಾ ಯೋಜನೆಯಡಿ 35904 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 90321 ಮಂದಿಯನ್ನು ನೋಂದಣಿ ಮಾಡಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ 25272 ನೋಂದಣಿಯಾಗಿದ್ದು, ಪಿಎಂ ಸ್ವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2025ರ ಫೆಬ್ರವರಿ 28ರವರೆಗೆ ಪ್ರಥಮ ಕಂತಿನಲ್ಲಿ 12,873, ದ್ವಿತೀಯ ಕಂತಿನಲ್ಲಿ 4790 ಹಾಗೂ ತೃತೀಯ ಕಂತಿನಲ್ಲಿ 1666 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡಲಾಗಿದೆ ಎಂದು ಅವರ ವಿವರಿಸಿದರು.

ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 126718.85 ಕೋಟಿ ರೂ.ಗಳಾಗಿದ್ದು, ಇದು ಶೇ. 10.58ರಷ್ಟು ಬೆಳವಣಿಗೆ ಸಾಧಿಸಿದೆ. ಡಿಸೆಂಬರ್ ಅಂತ್ಯಕ್ಕೆ ಆದ್ಯತಾ ವಲಯ ಮತ್ತು ಅದ್ಯತೇತರ ವಲಯಗಳಲ್ಲಿ ಒಟ್ಟು 37663.20 ಕೋಟಿ ರೂ. ಸಾಲ ವಿತರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 8898.58 ಕೋಟಿ ರೂ. ವಿತರಣೆಯಾಗಿದ್ದು, ತ್ರೈಮಾಸಿಕ ಗುರಿ 11187.85 ಕೋಟಿ ರೂ.ಗಳಲ್ಲಿ ಶೇ. 79.54ರಷ್ಟು ನಿರ್ವಹಣೆ ಸಾಧಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮದ್ಯಮ ಉದ್ದಿಮೆಯಡಿ 5627.92 ಕೋಟಿ ರೂ. ಸಾಲ ವಿತರಣೆಯಾಗಿದ್ದು, ತ್ರೈಮಾಸಿಕ ಗುರಿಯಾದ 6011.79 ಕೋಟಿಯ ಶೇ. 93.61ರಷ್ಟು ನಿರ್ವಹಣೆ ಸಾಧಿಸಲಾಗಿದೆ. ಶಿಕ್ಷಣ ಸಾಲ ಕ್ಷೇತ್ರದಲ್ಲಿ 124.85 ಕೋಟಿ ಸಾಲ ವಿತರಣೆಯಾಗಿದೆ. ಗೃಹ ಸಾಲ ಕ್ಷೇತ್ರದಲ್ಲಿ 253.34 ಕೋಟಿ ರೂ. ಸಾಲ ವಿತರಣೆಯಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಆರ್‌ಬಿಐ ಬೆಂಗಳೂರಿನ ಎಜಿಎಂ ಅರುಣ್ ಕುಮಾರ್ ಪಿ., ನಬಾರ್ಡ್‌ನ ಸಂಗೀತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News