ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಪ್ರಯತ್ನ: ಇಬ್ರಾಹೀಂ ನವಾಝ್

ಮಂಗಳೂರು, ಮಾ.15: ಪಕ್ಷ ನನ್ನ ಮೇಲೆ ಇಟ್ಟ ವಿಶ್ವಾಸ ಉಳಿಸಿಕೊಂಡು ಪ್ರತೀ ಬೂತ್ ಮಟ್ಟದಲ್ಲಿ 10 ಮಂದಿಯ ತಂಡ ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಇಬ್ರಾಹೀಂ ನವಾಝ್ ಹೇಳಿದ್ದಾರೆ.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದಸ್ಯತ್ವ ಅಭಿಯಾನ ದಲ್ಲಿ ದ.ಕ. ಜಿಲ್ಲೆಯಿಂದ 50 ಸಾವಿರ ಮಂದಿ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಮುಂಬರುವ ಗ್ರಾ.ಪಂ. ತಾಲೂಕು ಪಂಚಾಯತ್ ಜಿ.ಪಂ., ಪಾಲಿಕೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಹಿರಿಯರೊಂದಿಗೆ ಶ್ರಮಿಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದವರಿಗೆ ಪಕ್ಷದಲ್ಲಿ ಒಂದಲ್ಲ ಒಂದು ಅವಕಾಶ ಸಿಕ್ಕಿದೆ. ಎಲ್ಲರಿಗೂ ಜವಾಬ್ದಾರಿ ಇದೆ. ಪಕ್ಷ ಸಂಘಟನೆಯ ಚರ್ಚೆಯಾಗಿದೆ.ಯೂತ್ ಕಾಂಗ್ರೆಸ್ ಶಕ್ತಿ ಪ್ರಕಟಿಸುವ ದಿನಗಳು ಬರುತ್ತದೆ. ನಾನು ಚುನಾವಣಾ ರಾಜಕೀಯಕ್ಕಾಗಿ ಆಯ್ಕೆಯಾಗಿದ್ದಲ್ಲ. ಪಕ್ಷ ಸಂಘಟನೆಗಾಗಿ. ಹಳ್ಳಿಯಿಂದಲೇ ಯುವಕರನ್ನು ಸಂಘಟಿಸುವ ಕೆಲಸ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರೂಪೇಶ್ ರೈ, ಕಿರಣ್ ಬುಡ್ಲೆ ಗುತ್ತು, ದೀಕ್ಸಿತ್ ಅತ್ತಾವರ, ಆಸೀಫ್, ಪವನ್ ಸಾಲಿಯಾನ್ ಉಪಸ್ಥಿತರಿದ್ದರು.