ರಮಝಾನ್‌ನಿಂದ ಸಹೋದರತೆಯ ಸಮ್ಮಿಲನವಾಗಲಿ: ಮಂಗಳೂರು ಬಿಷಪ್ ಡಾ. ಪೀಟರ್ ಸಲ್ದಾನ

Update: 2025-03-15 21:56 IST
ರಮಝಾನ್‌ನಿಂದ ಸಹೋದರತೆಯ ಸಮ್ಮಿಲನವಾಗಲಿ: ಮಂಗಳೂರು ಬಿಷಪ್ ಡಾ. ಪೀಟರ್ ಸಲ್ದಾನ
  • whatsapp icon

ಮಂಗಳೂರು, ಮಾ.15: ಧರ್ಮದ ಮೂಲಭೂತ ಮೌಲ್ಯಗಳನ್ನು ಅಳವಡಿಸಲು ಎಲ್ಲರೊಂದಿಗೆ ಪರಸ್ಪರ ಅನ್ಯೋನ್ಯತೆಯಿಂದ ಬೆಸೆಯಲು ಇದೊಂದು ಸಕಾಲವಾಗಿದೆ. ರಮಝಾನ್‌ನಿಂದ ಸಹೋದರತೆಯ ಸಮ್ಮಿಲನವಾಗಲಿ ಎಂದು ಮಂಗಳೂರು ಬಿಷಪ್ ಡಾ.ಪೀಟರ್ ಸಲ್ದಾನ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜೆಪ್ಪಿನಮೊಗರುವಿನ ಯೆನೆಪೋಯ ಶಾಲಾ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.


ಮುಸ್ಲಿಮರು ಪವಿತ್ರ ರಮಝಾನ್ ಉಪವಾಸದ ವೇಳೆ ಪ್ರಾರ್ಥನೆ, ದಾನಧರ್ಮದ ಮೂಲಕ ಅಂತರಂಗ ಶುದ್ಧಿಯ ಪ್ರಯತ್ನ ಮಾಡುತ್ತಿದ್ದಾರೆ. ಕ್ರೈಸ್ತರಿಗೂ ಈ ದಿನಗಳು ಪ್ರಾಯಶ್ಚಿತದ ಕಾಲವಾಗಿದೆ. ಕ್ರೈಸ್ತರಿಗೂ-ಮುಸ್ಲಿಮರಿಗೆ ಕೃಪಾವರಗಳಿಂದ ಕೂಡಿರುವ ಸಮಯವಾಗಿದೆ. ಹೃದಯದಲ್ಲಿ ಗೋಡೆಗಳನ್ನು ನಿರ್ಮಿಸಲು, ಸಂಬಂಧಗಳನ್ನು ಮುರಿಯುಲು, ಸೌಹಾರ್ದತೆಯನ್ನು ತಡೆಯುವ ಪ್ರಯತ್ನ ನಡೆಯುತ್ತಿರುವುದು ಇಂದು ಅಲ್ಲಲ್ಲಿ ಕಂಡು ಬರುತ್ತಿದೆ. ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. 2025ನೇ ವರ್ಷವನ್ನು ಕ್ರೈಸ್ತರು ಭರವಸೆಯ ವರ್ಷವಾಗಿ ಆಚರಿಸುತ್ತಿದ್ದಾರೆ. ಭರವಸೆಯ ಯಾತ್ರಿಕರು ಎಂಬ ಧ್ಯೇಯದೊಂದಿಗೆ ಮುನ್ನಡೆಯಲು ಜಗದ್ಗುರು ಪೋಪ್ ಕರೆ ನೀಡಿದ್ದಾರೆ. ನಿರೀಕ್ಷೆ ಮತ್ತು ಭರವಸೆ ಎಂದರೆ ನಮ್ಮ ಜೀವನಕ್ಕೆ ಮಾತ್ರವಲ್ಲ ಇತರ ಬದುಕಿಗೂ ಬೆಳಕಾಗಬೇಕಿದೆ. ಭರವಸೆಯ ಬೆಳಕು ಹೊಳೆಯುವುದು ಕತ್ತಲಲ್ಲಿ ಎಂದರು.


ನಿಟ್ಟೆ ಪರಿಗಣಿತ ವಿವಿಯ ಪ್ರೋ. ಚಾನ್ಸ್‌ಲರ್ ಡಾ. ಶಾಂತರಾಮ ಶೆಟ್ಟಿ ಮಾತನಾಡಿ ಇಫ್ತಾರ್ ಎಂದರೆ ಉಪವಾಸ ಮುರಿಯುವುದು ಎಂದಾಗಿದೆ. ರಮಝಾನ್‌ನಲ್ಲಿ ಪ್ರತಿದಿನವೂ ದಾನ ಧರ್ಮಗಳು ನಡೆಯು ತ್ತಿದೆ. ಎಲ್ಲರೂ ಒಂದೇ ದೇವರಲ್ಲಿ ನಂಬಿಕೆ ಇಟ್ಟವರು. ಎಲ್ಲ ಧರ್ಮಗಳು ಗುರಿ ಒಂದೇ ಎಂದರು.

ಮಂಗಳೂರು ಶಿಕ್ಷಣ, ಬ್ಯಾಂಕಿಂಗ್ ಹಬ್ ಆಗಿದೆ. ಇಂತಹ ನಗರ ಎಲ್ಲಿಯೂ ಇಲ್ಲ, ಈ ನಗರ ಒಗ್ಗಟ್ಟಿಗೆ ಉದಾರಣೆಯಾಗಿದೆ ಎಂದರು.


ಯೆನೆಪೋಯ ಪರಿಗಣಿತ ವಿವಿ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ ಜಗತ್ತಿನ ಶ್ರೇಷ್ಠ ಧರ್ಮ ಮಾನವ ಧರ್ಮವಾಗಿದೆ. ಇಲ್ಲಿ ಆಯೋಜಿಸಿರುವ ಇಫ್ತಾರ್ ಕೂಟವು ಎಲ್ಲ ಧರ್ಮಿಯರು ಒಗ್ಗಟ್ಟಿನಿಂದ ಪರಸ್ಪರ ಭಕ್ತಿಭಾವದಿಂದ ಪ್ರೀತಿ ಮತ್ತು ಬಂಧುತ್ವವನ್ನು ಹಂಚಿಕೊಳ್ಳುವ ಅವಕಾಶವಾಗಿದೆ. ನಾವು ಎಲ್ಲರನ್ನು ಪ್ರೀತಿ, ಗೌರವದಿಂದ ಕಾಣಬೇಕಾಗಿದೆ. ಬಿಷಪ್ ಡಾ.ಪೀಟರ್ ಸಲ್ದಾನ, ನಿಟ್ಟೆ ವಿವಿಯ ಕುಲಾಧಿಪತಿ ಡಾ. ವಿನಯ ಹೆಗ್ಡೆ, ವಿಶಾಲ್ ಹೆಗ್ಡೆ ಅವರ ಸಹಕಾರದೊಂದಿಗೆ ಇಫ್ತಾರ್ ಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತದೆ ಎಂದು ನುಡಿದರು.


ಕರ್ನಾಟಕ ವಿಧಾನ ಪರಿಷತ್‌ನ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್, ಎಸ್ಪಿ ಯತೀಶ್ ಎನ್,  ಸಂತ ಅಲೋಶಿಯೆಸ್ ಪರಿಗಣಿತ ವಿವಿ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ, ಡಾ. ಇಫ್ತಿಕರ್ ಅಲಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಪದ್ಮಾರಾಜ್ ಆರ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.









































Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News