ನ.20: ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆ ಬಿ.ಸಿ.ರೋಡಿನಲ್ಲಿ ಉದ್ಘಾಟನೆ
ಬಂಟ್ವಾಳ: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 14 ನೇ ಬಿ.ಸಿ.ರೋಡು ಶಾಖೆಯು ನ. 20 ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿ ಬಳಿಯ ಪಾರ್ಕ್ ಸ್ಕ್ವೇರ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ 21 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘವು ಈಗಾಗಲೇ 13 ಶಾಖೆಗಳನ್ನು ಹೊಂದಿದ್ದು, ಇದೀಗ 14ನೇ ಶಾಖೆಯನ್ನು ತೆರೆಯಲಾ ಗುತ್ತಿದೆ. 2022-23ನೇ ಸಾಲಿನಲ್ಲಿ 605.34 ಕೋ.ರೂ.ವ್ಯವಹಾರ ನಡೆಸಿ ದಾಖಲೆಯ 1.51 ಕೋ.ರೂ. ಲಾಭಗಳಿಸಿದೆ. 8300 ಸದಸ್ಯರನ್ನು ಹೊಂದಿ 3.12 ಕೋ.ರೂ.ಪಾಲು ಬಂಡವಾಳ, 120 ಕೋ.ರೂ.ಠೇವಣಾತಿ, 100 ಕೋ.ರೂ.ನಷ್ಟು ವಿವಿಧ ರೀತಿಯ ಸಾಲ ವಿತರಿಸಲಾಗಿದೆ.
ಸಂಘವು ಪ್ರಾರಂಭದಿಂದಲೂ ಪ್ರತಿವರ್ಷ ಎ ತರಗತಿಯನ್ನು ಪಡೆಯುತ್ತಿದ್ದು, ಕಳೆದ ಸಾಲಿನಲ್ಲಿ ಸದಸ್ಯರಿಗೆ 15 ಶೇ. ಡಿವಿಡೆಂಡ್ ನೀಡಲಾಗಿದೆ. ಸಂಘವು ಮಂಗಳೂರಿನಲ್ಲಿ ನಡೆದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ, ವ್ಯವಹಾರದ ಪ್ರಗತಿ, ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 4 ಬಾರಿ ಸಾಧನಾ ಪ್ರಶಸ್ತಿ ಪಡೆದಿರುತ್ತದೆ.
ಸಂಘವು ಪ್ರಾರಂಭದಿಂದಲೂ ತನ್ನ ಶಾಖಾ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳ 7 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿವರ್ಷ 200 ವಿದ್ಯಾರ್ಥಿಗಳಿಗೆ ತಲಾ 2000 ರೂ.ನಂತೆ ವಿದ್ಯಾರ್ಥಿ ಸಹಾಯಧನ ವಿತರಿಸುತ್ತಿದ್ದು, ಈವರೆಗೆ ಸುಮಾರು 24 ಲಕ್ಷ ರೂ.ಗಳನ್ನು ಈ ಉದ್ದೇಶಕ್ಕೆ ಬಳಸಲಾಗಿದೆ ಎಂದರು.
ಬಿ.ಸಿ.ರೋಡು ಶಾಖೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ ಅವರು ಭದ್ರತಾ ಕೊಠಡಿ ಹಾಗೂ ಮೊಡಂಕಾಪು ಇನೆಂಟ್ ಜೀಸಸ್ ಚರ್ಚ್ ನ ಧರ್ಮಗುರು ರೆ|ಫಾ| ವಲೇರಿಯನ್ ಡಿಸೋಜ ಅವರು ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ. ಪೊಳಲಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಬೂಬಕ್ಕರ್ ಅಮ್ಮುಂಜೆ ಪ್ರಥಮ ಠೇವಣಿಪತ್ರ ಬಿಡುಗಡೆ ಮಾಡಲಿದ್ದಾರೆ. ಕಟ್ಟಡದ ಮಾಲಕ ಮೃಣಾಲ್ ಮೋಹನ್ ಅಮೀನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ, ನಿರ್ದೇಶಕರಾದ ಬಿ.ಮಹಾಬಲ ರೈ ಬೋಳಂತೂರು, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಮಹಾಪ್ರಬಂಧಕ ವಸಂತ್ ಜಾಲಾಡಿ, ಶಾಖಾ ವ್ಯವಸ್ಥಾಪಕ ವಿನೋದ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.