ಎನ್‌ಡಿಎ ಸೋಲಿಸುವುದು ನಮ್ಮ ಗುರಿ: ಬಿನೋಯ್ ವಿಶ್ವಂ

Update: 2023-09-02 14:04 GMT

ಮಂಗಳೂರು, ಸೆ.2: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಸೋಲಿಸುವುದೇ ನಮ್ಮ ಸದ್ಯದ ಗುರಿ. ಅದಕ್ಕಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯಸಬಾ ಸದಸ್ಯ ಬಿನೋಯ್ ವಿಶ್ವಂ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಯು ನಗರದ ಬಿಜೈನಲ್ಲಿ ಶನಿವಾರ ಆಯೋಜಿಸಿದ್ದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಹಾಗೂ ಪಕ್ಷದ ವಾರಪತ್ರಿಕೆಯಾದ ಕೆಂಬಾವುಟದ 50ನೇ ವರ್ಷದ ವಿಷೇಶ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಂಗಳೂರಲ್ಲಿ ನಡೆಯುತ್ತಿರುವ ಸಿಪಿಐ ಕರ್ನಾಟಕ ರಾಜ್ಯ ಮಂಡಳಿ ಸಭೆಯ ವೀಕ್ಷಕರಾಗಿ ಅವರು ಭೇಟಿ ನೀಡಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ಜನಸಾಮಾನ್ಯರ ಏಳಿಗೆಗಾಗಿ ದುಡಿಯುವುದನ್ನು ಬಿಟ್ಟು ಬಂಡವಾಳಶಾಹಿಗಳ ಉದ್ದಾರಕ್ಕಾಗಿ ದುಡಿಯುತ್ತಿದೆ. ಇದರಿಂದಾಗಿ ಬಡವರು, ಕಾರ್ಮಿಕರು, ಯುವಕರು, ವಿದ್ಯಾರ್ಥಿಗಳು ಮಹಿಳೆಯರು ಹಾಗೂ ಸಮಾಜದ ಕೆಳವರ್ಗ ಬಾರೀ ಕಷ್ಟಗಳನ್ನೆದುರಿಸುತ್ತಿದ್ದಾರೆ. ಬಿಜೆಪಿ ಓಟು ಗಳಿಸುವುದಕ್ಕಾಗಿ ಜನರನ್ನು ಜಾತಿ, ಧರ್ಮಗಳ ಹೆಸರಲ್ಲಿ ಒಡೆಯುತ್ತಿದೆ. ಇದು ದೇಶದಲ್ಲಿ ಅಶಾಂತಿಗೆ ಕಾರಣವಾಗಿದೆ. ನಮ್ಮ ಸಂವಿಧಾನವನ್ನು ಬದಲಿಸಲು ಬಿಜೆಪಿ ಮತ್ತು ಸಂಘಪರಿವಾರ ಮಾಡುತ್ತಿರುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸುವುದು ಅವರನ್ನು ಚುನಾವಣೆಗಳಲ್ಲಿ ಸೋಲಿಸುವುದರಿಂದ ಮಾತ್ರ ಸಾಧ್ಯ ಎಂದವರು ಅಭಿಪ್ರಾಯಿಸಿದರು.

ಈ ನಿಟ್ಟಿನಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ರಾಜಕೀಯ ಒಕ್ಕೂಟವನ್ನು ಸ್ಥಾಪಿಸಿದೆ. ಈ ಒಕ್ಕೂಟದ ಮುಖ್ಯ ಉದ್ದೇಶವೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ನಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳು ಏನೇ ಇದ್ದರೂ, ದೇಶದ ಏಳಿಗೆಗಾಗಿ ಮತ್ತು ದೇಶವಾಸಿಗಳ ಹಿತಕ್ಕಾಗಿ ಈ ಒಕ್ಕೂಟ ಸರ್ವ ಪ್ರಯತ್ನ ನಡೆಸ ಲಿದೆ. ಈ ಕರ್ತವ್ಯ ನಿರ್ವಹಣೆಯಲ್ಲಿ ಸಿಪಿಐ ಮುಂಚೂಣಿಯಲ್ಲಿರುತ್ತದೆ. ಈ ಕಾರ್ಯಸಾಧನೆಗಾಗಿ ಸಿಪಿಐ ಪಕ್ಷದ ಸದಸ್ಯರು, ಹಿತಚಿಂತಕರು ಹಾಗೂ ಜನಸಾಮಾನ್ಯರು ಈಗಿನಿಂದಲೆ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಸಿಪಿಐ ಕರ್ನಾಟಕ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಕರ್ನಾಟಕದ ಜನ ಈವಾಗಲೇ ಎಚ್ಚರಗೊಂಡಿದ್ದಾರೆ. ಈ ಬದಲಾವಣೆ ದೇಶದ ರಾಜಕೀಯ ಬದಲಾವಣೆಯ ಮುನ್ಸೂಚಿಯಾಗಿದೆ ಎಂದರು.

ಸಿಪಿಐ ಪಕ್ಷದ ರಾಜ್ಯ ಮಂಡಳಿಯ ಹಿಂದಿನ ಕಾರ್ಯದರ್ಶಿ ಡಾ. ಸಿದ್ದನಗೌಡ ಪಾಟೀಲರು ಸಭೆಯ ಉದ್ದೇಶ ಪ್ರಸ್ತಾಪಿಸಿ ದರು. ಸಿಪಿಐ ಪಕ್ಷದ ಕರ್ನಾಟಕ ರಾಜ್ಯ ಮಂಡಳಿ ಉಪಕಾರ್ಯದರ್ಶಿ ಅಮ್ಜದ್ ಹಾಗೂ ಎಐವೈಎಫ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾತನಾಡಿದರು. ಸಿಪಿಐ ದ ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಪಕ್ಷದ ಜಿಲ್ಲಾ ಮುಂದಾಳುಗಳಾದ ವಿ. ಕುಕ್ಯಾನ್, ಎಚ್.ವಿ. ರಾವ್, ಶಶಿಕಲಾ ಮುಂತಾದವರು ವೇದಿಕೆಯಲ್ಲಿದ್ದರು. ಸೀತಾರಾಮ ಬೇರಿಂಜೆ ಸ್ವಾಗತಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು. ಸುರೇಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News