ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸಿ: ನ್ಯಾಯಾಧೀಶೆ ಶೋಭಾ

Update: 2023-11-17 09:10 GMT

ಮಂಗಳೂರು, ನ. 17: ಸಮಾಜದಲ್ಲಿ ನಡೆಯುವ ತಪ್ಪುಗಳ ಬಗ್ಗೆ ಧ್ವನಿ ಎತ್ತುವ ಜತೆಗೆ ಅದನ್ನು ತಿಳಿಸುವುದು ನಮ್ಮ ಹಕ್ಕಾಗಿದ್ದರೆ, ಆ ತಪ್ಪುಗಳನ್ನು ನಾವೂ ಮಾಡದಿರುವುದು ನಮ್ಮ ಕರ್ತವ್ಯ. ಸಂವಿಧಾನದಲ್ಲಿ ನೀಡಲಾಗಿರುವ ಈ ಹಕ್ಕು ಮತ್ತು ಕರ್ತವ್ಯಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಬೇಕು ಎಂದು ದ.ಕ. ಜಿಲ್ಲಾ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಅವರು ಹೇಳಿದ್ದಾರೆ. 

ನಗರದ ಪುರಭವನದ ಸಮೀಪದ ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಮಕ್ಕಳ ಸಮಾಸೋತ್ಸವ ಸಮಿತಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಸೇರಿದಂತೆ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿ ಹೇಳಿದ ಅವರು, ಹುಟ್ಟಿನಿಂದ ಸಾವಿನವರೆಗೆ ಪ್ರತಿಯೊಂದು ಹಂತದಲ್ಲೂ ಜನ ಜೀವನಕ್ಕೆ ಉಪಯೋಗವಾಗುವ ಕಾನೂನುಗಳಿದ್ದು, ಅವುಗಳ ಮಾಹಿತಿಯನ್ನು ಮಕ್ಕಳು ಹೊಂದಿರಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿಸಿಪಿ ದಿನೇಶ್‌ ಕುಮಾರ್‌ ಮಾತನಾಡಿ, ಮಕಕ್ಳು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳುವ ಜತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ತಮ್ಮದಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಮಾಸೋತ್ಸವದಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.

ಮಕ್ಕಳ ಮಾಸೋತ್ಸವ ಸಮಿತಿಯ ಸಂಚಾಲಕಿ ನಂದಾ ಪಾಯಸ್‌ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್‌ ಮಂಗಳೂರು ವಲಯ ಅಧ್ಯಕ್ಷರಾದ ಆಶಾ ನಾಗರಾಜ್‌, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಅಧ್ಯಕ್ಷೆ ನಯನ ರೈ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಕಸ್ತೂರಿ ಬೊಳುವಾರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದಾ್ಯಲಯದ ಪಾ್ರಂಶುಪಾಲರಾದ ದಿವಾಕರ ಶೆಟ್ಟಿ, ಎಸ್‌ಡಿಎಂಸಿ ಸಮನ್ವಯ ಸಮಿತಿಯ ಪ್ರವೀಣ್‌ ಆಚಾರ್ಯ ಉಪಸ್ಥಿತರಿದ್ದರು.

ಬಾಲ್ಯ ವಿವಾಹಕ್ಕಾಗಿ ಹುಟ್ಟಿದ ದಿನಾಂಕವೇ ಬದಲಾವಣೆ!

ದ.ಕ. ಜಿಲ್ಲೆ ಬುದ್ಧಿವಂತರ ಜಿಲ್ಲೆಯೆಂದೇ ಕರೆಯಲ್ಪಡುತ್ತದೆ. ಇಲ್ಲಿ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ತಪ್ಪೆಂಬ ಮಾಹಿತಿ ಜನರಲ್ಲಿ ಇದೆ. ಆದರೆ ಬಾಲ್ಯ ವಿವಾಹದಂತಹ ಪ್ರಕರಣಗಳಲ್ಲಿ ಇಲ್ಲಿ ಕಾರ್ಯಾಚರಣೆಗೆ ತೆರಳಿದರೆ ಪೋಷಕರು ಮಕಕ್ಳ ಹುಟ್ಟಿದ ದಿನಾಂಕವನ್ನೇ ಬದಲಾಯಿಸಿರುತ್ತಾರೆ. ಅಂಕ ಪಟ್ಟಿಯಲ್ಲೂ ತಿದ್ದುಪಡಿ ಮಾಡಿರುವ ಪ್ರಸಂಗಗಳು ಕಂಡು ಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಅವರು ಬಹಿರಂಗ ಪಡಿಸಿದ್ದಾರೆ.

ನಾನು ಇಲಾಖೆಗೆ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ದ.ಕ. ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲ ಕಾರ್ಮಿಕರು ಇರಲು ಸಾಧ್ಯವಿಲ್ಲ ಎಂಬ ಭಾವನೆ ನನ್ನದಾಗಿತ್ತು. ಆದರೆ ನಮ್ಮ ಜಿಲ್ಲೆಯಲ್ಲೂ ಈ ವ್ಯವಸ್ಥೆ ಇರುವುದು ಬೇಸರದ ಸಂಗತಿ. ಇಂತಹ ವ್ಯವಸ್ಥೆಯನ್ನು ಬದಲಾಯಿಸಲು ಸಮಾಜದ ಜನರ ಸಹಕಾರ ಅಗತ್ಯವಾಗಿದೆ. ಮಕ್ಕಳ ಗ್ರಾಮ ಸಭೆಗಳು ಬಹುತೇಕವಾಗಿ ಕಾಟಾಚಾರಕ್ಕೆ ನಡೆಯುತ್ತಿದೆ. ಹೀಗಾಗಬಾರದು. ಮಕ್ಕಳು ಪೋಷಕರು, ಶಿಕ್ಷಕರು ನೀಡಿದ ಅಭಿಪ್ರಾಯ, ಸಲಹೆಗಳನ್ನು ಹೇಳಿಕೊಳ್ಳುವ ಬದಲು ಅವರಾಗಿಯೇ ಸಹಜ ಸಮಸ್ಯೆಗಳನ್ನು ಗ್ರಾಮ ಸಭೆಗಳಲ್ಲಿ ತಿಳಿಸುವಂತಹ ವಾತಾವರಣ ಸೃಷ್ಟಿಯಾಗಬೇಕು. ಸದ್ಯ ಶಾಲೆಗಳಲ್ಲಿ ರೆಗ್ಯುಲರ್‌ ತರಗತಿಗಳು ನಡೆಯುತ್ತಿರುವುದರಿಂದ ಮಕಕ್ಳನ್ನು ಮೊಬೈಲ್‌ನಿಂದ ದೂರ ಉಳಿಸುವ ಮೂಲಕ ಸೈಬರ್‌ ಅಪರಾಧಗಳಿಂದ ದೂರವಿರಿಸಬೇಕು. ಮಕ್ಕಳು ಆತ್ಮಹತ್ಯೆಯಂತಹ ನಿರ್ಧಾರದಿಂದ ದೂರ ಉಳಿಯುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲಿ ಮಕಕ್ಳ ಸ್ನೇಹಿ ಸಮಾಲೋಚಕರನ್ನು ನೇಮಕ ಮಾಡುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News