ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್ ಹೆಚ್ಚಿಸಲು ಯೋಜನೆ: ಸಚಿವ ದಿನೇಶ್ ಗುಂಡೂರಾವ್

Update: 2023-08-11 14:05 GMT

ಪುತ್ತೂರು; ಪುತ್ತೂರಿನ ಸರ್ಕಾರಿ ಆಸ್ಪತ್ರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಾಗಿದ್ದು, ಈಗಾಗಲೇ 50 ಬೆಡ್ ಹೆಚ್ಚಿಸಿ ಮೇಲ್ದರ್ಜೆಗೇರಿಸಲು ಕ್ರೀಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ವಿಶೇಷ ಆಧ್ಯತೆಯಲ್ಲಿ 125 ವರ್ಷಗಳ ಇತಿಹಾಸವಿರುವ ಈ ಆಸತ್ರೆಯ ಹಳೆಯ ಕಟ್ಟಡ ಉಳಿಸಿಕೊಂಡೇ ಹೊಸ ಕಟ್ಟಡ ನಿರ್ಮಾಣ ಮಾಡುವ ಮೂಲಕ 150 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯಗಳಲ್ಲಿ ವೈದ್ಯರ ಕೊರತೆ ಮತ್ತು ಸಲಕರಣೆಗಳ ಕೊರತೆ ಇದ್ದು, ಇದನ್ನು ಪೂರೈಸಲು ಹಂತ ಹಂತವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಿಬಂದಿ ಕೊರತೆ ನಿವಾರಿಸಲು 500 ಮಂದಿ ನೇಮಕಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪೂರ್ಣಪ್ರಮಾಣದಲ್ಲಿ ವೈದ್ಯರನ್ನು ನೇಮಕಾತಿಗೊಳಿಸಲು ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆ ಯಲ್ಲಿ ಎಲುಬು ಚಿಕಿತ್ಸೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸಾ ವ್ಯವಸ್ಥೆ ಶೀಘ್ರದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಪಾರದರ್ಶಕತೆ ಉಳಿಸಲು ಕಠಿಣ ಕ್ರಮ ಅಗತ್ಯ

ಬಿಬಿಎಂಪಿ ಕಾಮಗಾರಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನಲ್ಲಿ ಗುತ್ತಿಗೆದಾರರ ಬಿಲ್ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದಾರೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಉಳಿಸಲು ಈ ರೀತಿ ಕ್ರಮ ಅಗತ್ಯವಾಗಿದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.

ಪುತ್ತೂರಿಗೆ ಆಗಮಿಸಿದ ಸಚಿವರು ಮಾಧ್ಯಮದೊಂದಿಗೆ ಮಾತನಾಡಿ, ಬಿಬಿಎಂಪಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಪ್ರಾಮಾಣಿಕ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಗಳಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು ಎಂಬ ನೆಲೆಯಲ್ಲಿ ಈ ಕ್ರಮ ಮಾಡಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳಿಂದ ವರದಿ ಬರಲಿದೆ. ಉತ್ತಮವಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲಿದೆ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಬಿಲ್ ತಡೆಹಿಡಿಯಲಾಗುತ್ತದೆ. ಸರ್ಕಾರ ಯಾವುದೇ ಗುತ್ತಿಗೆದಾರರಿಗೆ ತೊಂದರೆ ಕೊಡುವುದಿಲ್ಲ. ಬಿಬಿಎಂಪಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಮಗಾರಿ ಬಿಲ್ ಪಾವತಿಯಾಗಿಲ್ಲ. ಗುತ್ತಿಗೆದಾರರ ಪರ ನಮಗೂ ಕಾಳಜಿ ಇದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ, ಮೈಸೂರು ವಿಭಾಗೀಯ ಆರೋಗ್ಯ ಇಲಾಖಾ ಅಧಿಕಾರಿ ಡಾ. ರಾಜೇಶ್ವರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಶಿವಶಂಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News