ರಾಜಕೀಯ ಪಕ್ಷಗಳೂ ಆಂತರಿಕ ದೂರು ಸಮಿತಿ ರಚಿಸಬೇಕು: ಮಂಜುಳಾ

Update: 2024-09-05 14:07 GMT

ಮಂಗಳೂರು: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಸಿನಿಮಾ ಉದ್ಯಮದಲ್ಲಿ ಮಾತ್ರವಲ್ಲ, ರಾಜಕೀಯ ಪಕ್ಷ ಗಳೂ ಆಂತರಿಕ ದೂರು ಸಮಿತಿ ರಚಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸಿ. ಮಂಜುಳಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಕಿರುಕುಳ ನೀಡುವ ವ್ಯಕ್ತಿಗಳು ಇದ್ದಲ್ಲಿ, ಅಂತಹವರನ್ನು ಪಕ್ಷದಿಂದ ಹೊರಹಾಕಬೇಕು. ನಮ್ಮ ಪಕ್ಷದಲ್ಲಿ ಅಂತಹ ಸಂದರ್ಭ ಬಂದಲ್ಲಿ ನಾನು ಖಂಡಿತವಾ ಗಿಯೂ ಪಕ್ಷಕ್ಕೆ ಶಿಫಾರಸು ಮಾಡುತ್ತೇನೆ ಎಂದು ಅವರು ಹೇಳಿದರು.

ರಾಜಕೀಯ ಪಕ್ಷಗಳು ಬೆಳೆದಂತೆ ಎಲ್ಲ ರೀತಿಯ ಜನರು ಬಂದು ಸೇರುತ್ತಾರೆ. ಪಕ್ಷದಲ್ಲಿ ದುಡಿಯುವ ಆಸೆಯಿಂದ ರಾಜಕಾರಣಕ್ಕೆ ಬರುವ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾದರೆ ಬಹಿರಂಗವಾಗಿ ಪ್ರತಿರೋಧಿಸಬೇಕು. ಯಾವುದೇ ಪಕ್ಷ ಇರಲಿ, ಮಹಿಳೆಯರ ವಿಷಯ ಬಂದಾಗ ಅಲ್ಲಿ ಪಕ್ಷದ ಪ್ರಶ್ನೆ ಬರುವುದಿಲ್ಲ. ಮಹಿಳೆ ಯಾರ ಸರಕೂ ಅಲ್ಲ ಎಂದರು.

ಸಿನಿಮಾ ಉದ್ಯಮ ಕೂಡ ಕೆಲಸ ಸ್ಥಳ ಆಗಿರುವುದರಿಂದ, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆ ಸಮಿತಿ ರಚನೆ ಮಾಡಬೇಕು. ಲೈಂಗಿಕ ಕಿರುಕುಳ ಸೇರಿದಂತೆ ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕಲಾವಿದರು ಇಟ್ಟಿರುವ ಬೇಡಿಕೆಗೆ ಇನ್ನೂ ಹೆಚ್ಚು ಕಲಾವಿದರು ಸಹಿ ಮಾಡಬೇಕು. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನಿಗಾದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆಯನ್ನು ನಡೆಸಬೇಕು ಎಂದು ಹೇಳಿದರು.

ಕಾರ್ಕಳದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ನೇಹಾ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರಾಕರ ವಿಫಲವಾಗಿದೆ. ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆಯೂ ಸರ್ಕಾರದ ಪ್ರತಿಕ್ರಿಯೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಮಹಿಳಾ ಸುರಕ್ಷತಾ ಸಭೆ ನಡೆಸುತ್ತಿಲ್ಲ. ಕರಾವಳಿಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಿದರು.

ಬಿಜೆಪಿಯ ಮಂಜುಳಾ ರಾವ್, ಶ್ವೇತಾ ಪೂಜಾರಿ, ಶಿಲ್ಪಾ, ಸಂಧ್ಯಾ ವೆಂಕಟೇಶ್, ಲಿಖಿತಾ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News