ಎ.16ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ: ಸಿಇಟಿಗೆ ದ.ಕ ಜಿಲ್ಲೆಯಲ್ಲಿ 22,525 ವಿದ್ಯಾರ್ಥಿಗಳು

ಮಂಗಳೂರು: ವೃತ್ತಿಪರ ಶಿಕ್ಷಣ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬುಧವಾರ ಪ್ರಾರಂಭವಾಗಲಿದ್ದು, ದ.ಕ ಜಿಲ್ಲೆಯಲ್ಲಿ 22,525 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 43 ಪರೀಕ್ಷಾ ಕೇಂದ್ರಗಳಿವೆ. ಮಂಗಳೂರು-27, ಮೂಡಬಿದ್ರೆ- 8, ಪುತ್ತೂರು -4, ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 4 ಕೇಂದ್ರಗಳಿವೆ. ಎಪ್ರಿಲ್ 16ರಂದು ಬೆಳಗ್ಗೆ- ಭೌತಶಾಸ್ತ್ರ, ಮಧ್ಯಾಹ್ನ- ರಸಾಯನಶಾಸ್ತ್ರ, ಎಪ್ರಿಲ್ 17ರಂದು ಬೆಳಗ್ಗೆ - ಗಣಿತ ಹಾಗೂ ಮಧ್ಯಾಹ್ನ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾ ಪಂಚಾಯತ್‌ನಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಏರ್ಪಡಿಸಲಾಗಿದೆ.
*ಕನ್ನಡ ಭಾಷಾ ಪರೀಕ್ಷೆಗೆ 106 ಮಂದಿ ಗೈರು: ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿರುವ ಹೊರನಾಡ ಕನ್ನಡಿಗರಿಗೆ ಮಂಗಳವಾರ ಕನ್ನಡ ಭಾಷಾ ಪರೀಕ್ಷೆ ಮಂಗಳೂರಿನಲ್ಲಿ ನಡೆಯಿತು. ಒಟ್ಟು 655 ವಿದ್ಯಾರ್ಥಿಗಳಲ್ಲಿ 549 ಮಂದಿ ಹಾಜರಾಗಿದ್ದು, 106 ಮಂದಿ ಗೈರು ಹಾಜರಾಗಿದ್ದಾರೆ.
*ಸಿಇಟಿ ಪರೀಕ್ಷೆ: ನಿಷೇಧಾಜ್ಞೆ ಜಾರಿ:
ಎಪ್ರಿಲ್ 15 ರಂದು ಆರಂಭಗೊಂಡ ಸಿಇಟಿ 2025ರ ಕನ್ನಡ ಭಾಷಾ ಪರೀಕ್ಷೆ ಹಾಗೂ ಎಪ್ರಿಲ್ 16 ಮತ್ತು 17 ರಂದು ಸಿಇಟಿ ವೃತ್ತಿಪರ ಕೋರ್ಸ್ ಪರೀಕ್ಷೆಗಳು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 35 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಗಳನ್ನು ಶಾಂತ ವಾತಾವರಣದಲ್ಲಿ ನಡೆಸಲು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೆೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಉಪ ಪೋಲಿಸ್ ಆಯುಕ್ತ ಹಾಗೂ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು, ಇನ್ನಾವುದೇ ವಸ್ತುಗಳನ್ನು ಹಂಚುವುದು/ರವಾನಿಸುವುದು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೆೇಧಿಸಲಾಗಿದೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಕಾರಕ(ಆ್ಯಸಿಡ್) ಸ್ಫೋಟಕ ವಸ್ತುಗಳನ್ನು ಕೊಂಡುಹೋಗು ವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ.
ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ತಿಳಿಸುವ ಸಲುವಾಗಿ ಸಂಜ್ಞೆ ಗಳನ್ನು ಮಾಡುವುದು ಹಾಗೂ ಇನ್ನಿತರ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ ಸಾರ್ವಜನಿಕರು ಐದು ಅಥವಾ ಐದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು, ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ಜೆರಾಕ್ಸ್‌ಮತ್ತು ಕಂಪ್ಯೂಟರ್/ ಸೈಬರ್ ಅಂಗಡಿಗಳು/ ಪ್ರಿಂಟಿಂಗ್ ಶಾಪ್‌ಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊಬೈಲ್ ದೂರವಾಣಿ, ಬ್ಲೂ ಟೂತ್ ಹಾಗೂ ಪೇಜರ್ ಇತ್ಯಾದಿ ಇಲೆಕ್ಟ್ರಾನಿಕ್ಸ್ ಸಂಪರ್ಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ,ಸಭೆ ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ,ಬ್ಯಾಂಕ್ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆಲಾಠಿ /ಶಸ್ತ್ರಾಸ್ತ್ರ ಉಪಯೋಗಿಸುವುದಕ್ಕೆ ಅನ್ವಯವಾಗುವುದಿಲ್ಲ ಎಂದು ಉಪ ಪೋಲಿಸ್ ಆಯುಕ್ತ ಹಾಗೂ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ.