ಅತ್ತಾವರ: ಮನೆಯಿಂದ 10 ಲಕ್ಷ ರೂ. ಕಳವು; ಪ್ರಕರಣ ದಾಖಲು

ಮಂಗಳೂರು, ಎ.15: ಮನೆಯೊಂದಕ್ಕೆ ಕಳ್ಳರು ನುಗ್ಗಿ 10ಲಕ್ಷ ರೂ. ಎಗರಿಸಿ ಪರಾರಿಯಾದ ಘಟನೆ ಅತ್ತಾವರದಲ್ಲಿ ಎ.13ರಂದು ನಡೆದಿರುವುದು ವರದಿಯಾಗಿದೆ.
ಪ್ರಕರಣ ವಿವರ: ಎ.12ರಂದು ಸಂಜೆ ಸುಮಾರು 5:00 ಗಂಟೆಗೆ ಅತ್ತಾವರದ ಮನೆಯ ಪಕ್ಕದಲ್ಲಿ ನಡೆಯುತ್ತಿದ್ದ ಅರಸು ಮುಂಡತ್ತಾಯ ದೈವಸ್ಥಾದ ನೇಮೋತ್ಸವಕ್ಕೆ ಪಿರ್ಯಾದಿದಾರರಾದ ಚಂದ್ರಕಲಾ ಅವರ ಗಂಡ ಮತ್ತು ಮಗ ಹೋಗಿದ್ದು, ಬೆಳಗಿನ ಜಾವ ಸುಮಾರು 4: 30 ವೇಳೆಗೆ ಮರಳಿ ಮನೆಗೆ ಬಂದಾಗ ಮನೆಯಿಂದ ಹಣ ಕಳವಾಗಿರುವ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಚಂದ್ರಕಲಾ ಅವರ ಗಂಡ ಮತ್ತು ಮಗ ನೇಮೋತ್ಸಕ್ಕೆ ಎ.12ರಂದು ಸಂಜೆ 5 ಗಂಟೆಗೆ ಹೋಗಿದ್ದರು. ರಾತ್ರಿ 8:00 ಗಂಟೆಗೆ ಗಂಡ ಮತ್ತು ಮಗ ಮನೆಗೆ ವಾಪಸ್ ಬರುತ್ತಾರೆಂಬ ನಿರೀಕ್ಷೆಯಲ್ಲಿ ಮನೆಯ ಬಾಗಿಲನ್ನು ಹಾಕದೆ ಚಂದ್ರಕಲಾ ನೇಮೋತ್ಸವಕ್ಕೆ ತೆರಳಿದ್ದರು ಎನ್ನಲಾಗಿದೆ.
ಬೆಳಗ್ಗಿನ ಜಾವ ಚಂದ್ರಕಲಾ ಮನೆಗೆ ವಾಪಸ್ ಬಂದಾಗ ಮನೆಯ ಮುಖ್ಯ ಬಾಗಿಲು ತೆರೆದಿದ್ದು, ಬೆಡ್ ರೂಮ್‌ನ ಬಾಗಿಲು ಓಪನ್ ಆಗಿತ್ತು . ಮನೆಯ ಗೋದ್ರೆಜ್ ತೆರೆದಿದ್ದು, ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಗೋದ್ರೆಜ್ ಪರಿಶೀಲನೆ ಮಾಡುವಾಗ 10,00,000ರೂ. ಹಣವಿದ್ದ ಬ್ಯಾಗ್ ಕಳವಾಗಿರುವುದು ಬೆಳಕಿಗೆ ಬಂತು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.