ಉಪ್ಪಿನಂಗಡಿ: ವಕ್ಫ್ ಕಾಯ್ದೆ ವಿರುದ್ಧ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಉಪ್ಪಿನಂಗಡಿ: ಕೇಂದ್ರ ಸರಕಾರ ಪಾರ್ಲಿಮೆಂಟ್‍ನಲ್ಲಿ ವಕ್ಫ್ ಮಸೂದೆ ತಿದ್ದುಪಡಿ ಕಾಯ್ದೆಯನ್ನು ಮಂಡಿ ಸುವ ಮೂಲಕ ಇಲ್ಲಿನ ಕಾರ್ಪೋರೇಟರ್ ಲೂಟಿಕೋರರಿಗೆ ಸಹಾಯ ಮಾಡಲು ಹೊರಟದ್ದು ಬಿಟ್ಟರೆ ಈ ಕಾಯ್ದೆಯಿಂದ ಬೇರೆ ಯಾರಿಗೂ ಲಾಭವಿಲ್ಲ. ಜನರಿಗೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿರುವ ಬಿಜೆಪಿ ಸರಕಾರ ಸಾಧನೆ ಶೂನ್ಯವಾಗಿದ್ದು, ಅದನ್ನು ಮತದಾರರು ಪ್ರಶ್ನಿಸಬಾರ ದೆಂದು ವಕ್ಫ್ ಆಸ್ತಿಯ ವಿಚಾರ ಮುಂದಿಟ್ಟುಕೊಂಡು ದೇಶವನ್ನು ಒಡೆದು ಆಳುವ ಕೆಲಸಕ್ಕೆ ಹೊರಟಿದೆ. ಮುಸ್ಲಿಮರ ಉದ್ಧಾರಕ್ಕೆ ಕೇಂದ್ರ ಸರಕಾರ ಹೊರಟಿದ್ದೆಯಾದಲ್ಲಿ ರಾಜೀಂದೆರ್ ಸಾಚಾರ್ ವರದಿಯನ್ನು ಜಾರಿಗೆ ತರಲಿ ಎಂದು ನ್ಯಾಯವಾದಿ, ಚಿಂತಕ ಸುಧೀಕ್ ಕುಮಾರ್ ಮರೋಳ್ಳಿ ತಿಳಿಸಿದರು.
ಉಪ್ಪಿನಂಗಡಿಯ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಪರಿಸರದ ಸುಮಾರು 50ಕ್ಕೂ ಅಧಿಕ ಮಸೀದಿ, ಮದ್ರಸಗಳು ಹಾಗೂ ಸಂಘಟನೆಗಳ ಸಹಯೋಗದಲ್ಲಿ ಎ.15ರಂದು ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಇನ್ನೊಂದು ಸಮುದಾಯದವರನ್ನು ಗುರಿ ಯಾಗಿಸಿ ಅವರು ಪಂಕ್ಚರ್ ಹಾಕಬೇಕೆಂದಿಲ್ಲ ಎಂದು ಹೇಳಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿ ಯವರು ಮೊದಲು ಇವರ ಆಡಳಿತದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಪಂಕ್ಚರ್ ಆಗಿರುವುದನ್ನು ನೋಡಲಿ. ದೇಶದಲ್ಲಿ ನಿರುದ್ಯೋಗ, ಬಡತನ ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದು, ಅದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವಾಗದ ನಾಝಿ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಬಿಜೆಪಿ ಮತ್ತು ಆರೆಸ್ಸೆಸ್ ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಶದಲ್ಲಿ ಸಮುದಾಯ ಸಮುದಾಯಗಳ ಮಧ್ಯೆ ಗಲಭೆಗೆ ಕಾಯುತ್ತಿದೆ. ಆದ್ದರಿಂದ ಪ್ರತಿಯೋರ್ವರು ಇದರ ಹಿಂದಿನ ಅಜೆಂಡಾವನ್ನು ಅರ್ಥ ಮಾಡಿಕೊಳ್ಳ ಬೇಕಾಗಿದೆ. ಪ್ರಧಾನಿಯವರು ಹೇಳುವ ಹಾಗೆ ನಮಗೆ ಬೇಕಾಗಿರುವುದು ಒನ್ ನೇಷನ್ ಒನ್ ಎಲೆಕ್ಷನ್ ಅಲ್ಲ. ನಮಗೆ ಬೇಕಾಗಿರೋದು ಒನ್ ನೇಷನ್ ಒನ್ ಎಜ್ಯುಕೇಷನ್ ಆದ್ದರಿಂದ ಅಂಬೇಡ್ಕರ್, ಗಾಂಧೀಜಿ ಯವರ ಸಿದ್ಧಾಂತಗಳನ್ನೆಲ್ಲಾ ನಾವೆಲ್ಲಾ ಪ್ರೇರಣೆಯಿಟ್ಟುಕೊಂಡು ನಾವೆಲ್ಲಾ ಒಂದಾಗಿ ಈ ದೇಶದ ಅರ್ಥ ವ್ಯವಸ್ಥೆಯನ್ನು ಕಟ್ಟುವ ಕಾರ್ಯ ಮಾಡಬೇಕು ಎಂದರು.
ವಕ್ಫ್ ಆಸ್ತಿ ಎನ್ನುವುದು ಮುಸ್ಲಿಂ ಧರ್ಮದ ನಂಬಿಕೆಯ ಭಾಗವಾಗಿ ಸೃಷ್ಟಿಯಾಗಿದೆ. ಆದರೆ ಈ ಕಮಿಟಿ ಯಲ್ಲಿ ಈಗ ಮುಸ್ಲಿಮೇತರರಿಗೂ ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ವಿರೋಧಿಯಾಗಿದೆ. ಈ ದೇಶದ ಅಲ್ಪಸಂಖ್ಯಾತರು, ದಲಿತರು, ಗಿರಿಜನರು, ಹಿಂದುಳಿದ ವರ್ಗಗಳನ್ನು ಬಿಜೆಪಿಯು ವಿರೋಧಿ ಸುತ್ತಿದ್ದು, ಆರೆಸ್ಸೆಸ್ ಮತ್ತು ಬಿಜೆಪಿಗೆ ಹಿಂದೂ ಧರ್ಮದಿಂದ ಬಿಡುಗಡೆ ಕೊಟ್ಟಾಗ ಮಾತ್ರ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ನಾರಾಯಣ ಗುರುಗಳ ಕನಸಿನಂತೆ ಹಿಂದೂ ಧರ್ಮದ ಶ್ರೇಷ್ಟತೆ ತೋರಲು ಸಾಧ್ಯ. ಆದ್ದರಿಂದ ಕೇಂದ್ರ ಸರಕಾರದ ಇದರ ಹಿಂದಿರುವ ಮರ್ಮವನ್ನು ಅರ್ಥ ಮಾಡಿಕೊಂಡು ಧರ್ಮ ಬೇಧ ಬಿಟ್ಟು ನಾವೆಲ್ಲ ಒಂದಾಗಿ ಈ ತಿದ್ದುಪಡಿ ಕಾಯ್ದೆಯನ್ನು ನ್ಯಾಯಯುತ ಹೋರಾಟದ ಮೂಲಕ ವಿರೋಧಿಸಬೇಕಿದೆ ಎಂದರು.
ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಇಂದು ಕೋಮುವಾದಿ ಹಿಂದುತ್ವವಾದಿ ಶಕ್ತಿಗಳ ಜೊತೆಗೆ ಕೈಜೋಡಿಸಿಕೊಂಡು ಅದಾನಿ- ಅಂಬಾನಿಗಳಂತ ಕಾರ್ಪೋರೇಟರ್‍ಗಳು ನಮ್ಮ ದೇಶವಾಳ್ತ ಇದ್ದಾರೆ. ವಕ್ಫ್ ಮಸೂದೆ ತಿದ್ದುಪಡಿ ಕಾಯ್ದೆ ಮಂಡನೆ ಮಾಡಿರುವುದು ಇವರ ಈ ಕೋಟೆಯನ್ನು ಉಳಿಸಲು ಬೇಕಾಗಿ ಕೇಂದ್ರ ಸರಕಾರ ಉರುಳಿಸುವ ದಾಳ. ಇದರಲ್ಲಿ ದೇಶವನ್ನು ನುಂಗುವ ಕುತಂತ್ರ ಅಡಗಿದೆ. ನಮ್ಮ ದೇಶದ ರಾಜಕಾರಣದಲ್ಲಿ ಕೇಂದ್ರ ಬಿಂದುಗಳಾಗಿರುವುದು ಮುಸ್ಲಿ ಮರು. ಆದರೆ ಅವರೊಳಗೆ ಇರುವ ಹೊಂದಾಣಿಕೆಯ ಕೊರತೆಯನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಲಾಭ ಪಡೆಯುತ್ತಾ ಇದೆ. ಮುಸ್ಲಿಮರು ಒಂದಾಗಿ ನಿಂತ್ರೆ ಇಲ್ಲಿ ಬಿಜೆಪಿಯೂ ಇಲ್ಲ. ಮೋದಿಯೂ ಇಲ್ಲ. ಈ ಕಾಯ್ದೆ ಜಾರಿಯಿಂದ ಅಂಬಾನಿ- ಅದಾನಿಯಂತವರ ಆಸ್ತಿ ಹೆಚ್ಚಳವಾಗುವುದೇ ಹೊರತು ಈ ದೇಶದ ಬಡತನ ದೂರವಾಗಲು ಸಾಧ್ಯವಿಲ್ಲ. ಮುಸ್ಲಿಮರು ಇಲ್ಲಿನ ಮೂಲ ನಿವಾಸಿಯಾಗಿದ್ದು, ಅವರು ಈ ನೆಲದ ವಾರೀಸದಾರರು. ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಕೇವಲ ಮುಸ್ಲಿಮರು ಮಾತ್ರ ಅಲ್ಲ. ಈ ದೇಶದ 80 ಶೇ. ತಳವರ್ಗದವರು ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕೇಂದ್ರದ ಈ ನಿಲುವಿನ ಬಗ್ಗೆ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕು ಎಂದರು.
ಇಸಾಕ್ ಪುತ್ತೂರು ಮಾತನಾಡಿ, ಕೋಮುವಾದಿ ಶಕ್ತಿಗಳು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಅವರು ಅಧಿಕಾರಕ್ಕೆ ಬಂದ ಬಳಿಕ ಕೋಮು ದ್ವೇಷ ಬಲಗೊಳ್ತಾ ಇದೆ. ಇದನ್ನು ಸೋಲಿಸಲು ದೇಶದ ಎಲ್ಲರೂ ಒಂದುಗೂಡಬೇಕಾಗಿದೆ. ವಕ್ಫ್ ಆಸ್ತಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವು ನಡೆಯುತ್ತಿದ್ದು, ವಕ್ಫ್ ಭೂಮಿ ಅಂದರೆ ಅದು ಮುಸ್ಲಿಮರಿಗೆ ಸರಕಾರ ಕೊಟ್ಟ ಭೂಮಿಯಲ್ಲ. ನಮ್ಮ ಹಿರಿಯರು ಸ್ವಯ ಇಚ್ಛೆಯಿಂದ ಅಲ್ಲಾಹುನಿಗಾಗಿ ದಾನವಾಗಿ ನೀಡಿದ ಭೂಮಿ. ಇದರಲ್ಲಿ ವಕ್ಫ್‍ಗೆ ಭೂಮಿಯನ್ನು ಅಕ್ರಮವಾಗಿ ಸೇರಿಸಿಕೊಳ್ಳಲು, ಕಬಳಿಸಲು ಅವಕಾಶವಿಲ್ಲ. ಇಸ್ಲಾಂ ಅದನ್ನು ಒಪ್ಪಿಕೊಳ್ಳು ವುದಿಲ್ಲ. ಈ ಕಾಯ್ದೆಯ ಮೂಲಕ ವಕ್ಫ್ ಆಸ್ತಿಯನ್ನು ಕಬಳಿಸಿ ಉದ್ಯಮಿಗಳಿಗೆ ನೀಡುವ ಬದಲು ಈಗಾಗಲೇ ಕಬಳಿಕೆ ಆಗಿರುವ ವಕ್ಫ್ ಆಸ್ತಿಯನ್ನು ಸಂರಕ್ಷಿಸುವ ಕೆಲಸವಾಗಬೇಕು. ವಕ್ಫ್ ಕಮಿಟಿಗೆ ಮುಸ್ಲಿಮೇತರರನ್ನು ಸೇರಿಸಿಕೊಂಡು ಧರ್ಮದೊಳಗೆ ಹಸ್ತಕ್ಷೇಪ ಮಾಡುವ ಕೆಲಸ ಮಾಡುತ್ತಿದ್ದು, ಇದನ್ನು ನಾವೆಲ್ಲಾ ವಿರೋಧಿ ಸಬೇಕಾಗಿದೆ. ನ್ಯಾಯಯುತ, ಶಾಂತಿಯುತ ಪ್ರತಿಭಟನೆಯ ಮೂಲಕ ಹೋರಾಟ ನಡೆಸಬೇಕಿದೆ ಎಂದರು.
ಎಸ್ಸೆಸ್ಸೆಫ್ ನೇತಾರ ಅಬ್ದುರ್ರಶೀದ್ ಝೈನಿ ಮಾತನಾಡಿ, ಈಗಿನ ವಕ್ಪ್ ಕಾಯ್ದೆಯಿಂದ ಭೂಗಳ್ಳರಿಗೆ ಲಾಭ ಮಾಡಿಕೊಡಲು ಕೇಂದ್ರ ಸರಕಾರ ಹೊರಟಿದೆ. ಇದರ ಹಿಂದೆ ಹಲವು ಕಾಣದ ಕೈಗಳು ಇವೆ. ನಮ್ಮ ಈ ಪ್ರತಿಭಟನೆ ಹಿಂದೂಗಳ, ಮುಸ್ಲಿಮೇತರರ ವಿರುದ್ಧ ಅಲ್ಲ. ಇದು ನಮ್ಮ ಹಕ್ಕಿಗಾಗಿ ನಾವು ಮಾಡುತ್ತಿರುವ ಹೋರಾಟ. ದೇಶದಲ್ಲಿ ಅಧಿಕಾರ ಪಡೆದ ನಮ್ಮ ಕೋಮುವಾದಿ ಶಕ್ತಿಗಳು ನಿರಂತರ ನಮ್ಮ ಸಮುದಾಯ ವನ್ನು ತುಳಿಯುವ ಕೆಲಸ ನಡೆಸುತ್ತಿವೆ. ಆದ್ದರಿಂದ ನಮ್ಮ ಸಮುದಾಯವನ್ನು ಬಲಗೊಳಿಸದಿದ್ದರೆ ಇನ್ನಷ್ಟು ನಾವು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರಕಾರವು ಸರ್ವಾಧಿಕಾರದ ಧೋರಣೆಯನ್ನು ತೋರುತ್ತಿದ್ದು, ದೇಶವನ್ನು ಕೊಳ್ಳೆ ಒಡೆಯುವ ಕೆಲಸ ನಡೆಸುತ್ತಿದೆ. ಸುಳ್ಳಿನ ಮೂಲಕ ಅಧಿಕಾರಕ್ಕೇರಿದ ಬಿಜೆಪಿಯು ಧರ್ಮದ ಆಧಾರದಲ್ಲಿ ದೇಶ ಒಡೆಯುವ ಕೆಲಸ ಮಾಡಿದ್ದಲ್ಲದೆ, ದೇಶದ ಅಭಿವೃದ್ಧಿ ಮಾಡಿಲ್ಲ. ಭಾರತ ಮಾತೆಯ ಇಂಚಿಂಚು ಭೂಮಿಯನ್ನು ಕಾರ್ಪೋರೇಟರ್‍ಗಳಿಗೆ ಮಾರುವ ಕೆಲಸ ಬಿಜೆಪಿಯಿಂದಾಗಿದೆ. ಮುಸ್ಲಿಮರು ಇದ್ದಷ್ಟು ದಿನ ಮಾತ್ರ ಈ ದೇಶದಲ್ಲಿ ಶೂದ್ರರು, ದಲಿತರು ಸುರಕ್ಷತೆಯಿಂದಿರಲು ಸಾಧ್ಯ ಎಂದರಲ್ಲದೆ, ವಕ್ಫ್ ಆಸ್ತಿಯ ತಿದ್ದುಪಡಿ ಕಾಯ್ದೆಯನ್ನು ಮಂಡಿಸುವ ಮೊದಲು ಈ ಬಗ್ಗೆ ಮುಸ್ಲಿಂ ಮುಖಂಡರ ಅಭಿಪ್ರಾಯ ಕೇಳಿಲ್ಲ ಎಂದರು.
ಇಕ್ಬಾಲ್ ಬಾಳಿಲ ಮಾತನಾಡಿ, ಮುಸ್ಲಿಮರನ್ನು ಕೆರಳಿಸೋದೋಸ್ಕರ ಕಾರ್ಪೋರೇಟರ್‍ಗಳನ್ನು ಬದುಕಿ ಸುದಕ್ಕೋಸ್ಕರ ಕೇಂದ್ರ ಸರಕಾರವು ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಮೂಲಕ ದೇಶದಲ್ಲಿ ಧರ್ಮ- ಧರ್ಮಗಳ ನಡುವಿನ ಗಲಭೆಗೆ ಕೇಂದ್ರ ಸರಕಾರವು ಕಾಯುತ್ತಿದೆ. ಆದರೆ ನಾವೆಲ್ಲಾ ಇದರ ಹುನ್ನಾರಕ್ಕೆ ಬಲಿಯಾಗೋದು ಬೇಡ. ಶಾಂತಿಯುತ, ಕಾನೂನಾತ್ಮಕ ಹೋರಾಟದ ಮೂಲಕ ಈ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕುವವರೆಗೆ ವಿರಮಿಸೋದು ಬೇಡ ಎಂದರು.
ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಂ ಕೆ.ಬಿ., ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಮಾಜಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಶಾಹುಲ್ ಹಮೀದ್ ಕರ್ವೇಳ್ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹೆಚ್. ಯೂಸುಫ್ ಹಾಜಿ, ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಅಬ್ದುಲ್ ರಶೀದ್ ಮಠ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಶುಕೂರ್ ಹಾಜಿ, ಅಜೀಜ್ ಬಸ್ತಿಕಾರ್, ಶಬೀರ್ ಕೆಂಪಿ, ಅಮೀನ್ ಅಹ್ಸನ್, ಯೂಸುಫ್ ಪೆದಮಲೆ, ಇಸ್ಮಾಯಿಲ್ ತಂಙಳ್, ಅಬ್ದುಲ್ ರಹಿಮಾನ್ ಯುನಿಕ್, ಹಾರೂನ್ ರಶೀದ್ ಅಗ್ನಾಡಿ, ಇಬ್ರಾಹಿಂ ಆಚಿ, ಇಸ್ಮಾಯಿಲ್ ಇಕ್ಬಾಲ್, ಅಬ್ದುಲ್ ಹಮೀದ್ ಕರಾವಳಿ, ಝಕಾರಿಯಾ ಕೊಡಿಪ್ಪಾಡಿ, ಇಸಾಕ್ ಮೇದರಬೆಟ್ಟು, ಮಹಮ್ಮರ್ ಮುಸ್ತಾಫ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.
ಮುಯ್ಯಿನ್ ಮುಹಮ್ಮದ್ ಕೆಂಪಿ ಕಿರಾಅತ್ ಪಠಿಸಿದರು. ನಝೀರ್ ಮಠ ವಂದಿಸಿದರು. ಇರ್ಷಾದ್ ಯು.ಟಿ. ಅಬ್ದುರ್ರಹ್ಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.