ಅ.17ರಿಂದ ‘ಜಾಗತಿಕ ಮೆರಿಟೈಮ್ ಇಂಡಿಯಾ ಸಮ್ಮಿತ್ 2023’ ಸಮಾವೇಶ ಪೂರ್ವ ಕಾರ್ಯಕ್ರಮ

Update: 2023-08-20 17:42 GMT

ಮಂಗಳೂರು, ಆ.20: ನದೆಹಲಿಯ ಪ್ರಗತಿ ಮೈದಾನದಲ್ಲಿ ಅಕ್ಟೋಬರ್ 17ರಿಂದ 19ವರೆಗೆ ನಡೆಯಲಿರುವ ‘ಜಾಗತಿಕ ಮೆರಿಟೈಮ್ ಇಂಡಿಯಾ ಸಮ್ಮಿತ್ 2023’ ಶೃಂಗಸಭೆಯ ಭಾಗವಾಗಿ ಕರ್ಟನ್ ರೈಸರ್ (ಸಮಾವೇಶ ಪೂರ್ವ) ಕಾರ್ಯಕ್ರವು ರವಿವಾರ ಪಣಂಬೂರು ಬಿಡಿಎಸ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ನವಮಂಗಳೂರು ಬಂದರು ಸೇರಿದಂತೆ ದೇಶದ ಎಲ್ಲಾ ಬಂದರುಗಳನ್ನು ಆತ್ಮನಿರ್ಭರ ಮಾಡಲು ಕೇಂದ್ರ ಸರಕಾರ ಉತ್ಸುಕವಾಗಿದ್ದು, ಉದ್ಯಮಿಗಳು ಕೇಂದ್ರ ಸರಕಾರದೊಂದಿಗೆ ಕೈಜೋಡಿಸಬೇಕೆಂದರು.

ಅಭಿವೃದ್ಧಿಯ ದೃಷ್ಟಿಯಿಂದ ಕೊಂಕಣ ರೈಲ್ವೆಯನ್ನು ನೈರುತ್ಯ ರೈಲ್ವೆಯ ಜೊತೆ ವಿಲೀನಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರ ಜೊತೆ ಕೂಡ ಈ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ನುಡಿದ ಅವರು, ಬಂದರುಗಳನ್ನು ಆತ್ಮನಿರ್ಭರಗೊಳಿಸಲು ಜಾಗತಿಕ ಮೆರಿಟೈಮ್ ಇಂಡಿಯಾ ಸಮ್ಮಿತ್ 2023 ಸಹಕಾರಿಯಾಗಲಿದೆ ಎಂದು ನುಡಿದರು.

ಪ್ರಸ್ತುತ ಕೊಂಕಣ ರೈಲ್ವೆಯು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಪ್ಲಾಟ್‌ಫಾರ್ಮ್‌ಗಳ ವಿಸ್ತರಣೆ, ಹೆಚ್ಚುವರಿ ನಿಲ್ದಾಣಗಳು ಸಿಗುತ್ತಿಲ್ಲ. ಈ ವಿಭಾಗದಲ್ಲಿ ರೈಲುಗಳಲ್ಲಿ ಭದ್ರತೆಯ ಕೊರತೆಯೂ ಇದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ನೈರುತ್ಯ ರೈಲ್ವೆಯ ಜೊತೆಗೆ ವಿಲೀನಗೊಳಿಸಬೇಕು ಅಥವಾ ಕೊಂಕಣ ರೈಲ್ವೆಗೆ ಹಣ ಒದಗಿಸುವಂತೆ ಕೇಂದ್ರ ರೈಲ್ವೆ ಸಚಿವರ ಎದುರು ಬೇಡಿಕೆ ಮುಂದಿಡಲಾಗಿದೆ ಎಂದು ಅವರು ನುಡಿದರು.

ಕಾರ್ಯಕ್ರಮವನ್ನು ಕೇಂದ್ರದ ಬಂದರು, ಪ್ರವಾಸೋದ್ಯಮ, ಒಳನಾಡು ಜಲಸಾರಿಗೆ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನವಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ಎ.ವಿ.ರಮಣ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿಎಲ್, ಶ್ರೀನಿವಾಸ್‌ ವಿದ್ಯಾಸಂಸ್ಥೆಯ ಕುಲಪತಿ ಡಾ. ಸಿಎ ಎ. ರಾಘವೇಂದ್ರ ರಾವ್‌, ಪ್ರವೀಣ್‌ ಕಲ್ಭಾವಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News