ಮಂಗಳೂರು: ಕೇಂದ್ರ ಸರಕಾರದಿಂದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Update: 2023-08-09 10:21 GMT

ಮಂಗಳೂರು, ಆ.9: ಕೇಂದ್ರ ಸರಕಾರವು ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಕಳೆದ ಒಂಭತ್ತು ವರ್ಷಗಳಿಂದ ದೇಶವನ್ನಾಳುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಸಾರ್ವಜನಿಕ ಸೊತ್ತುಗಳನ್ನು ಖಾಸಗೀಕರಣಗೊಳಿಸುತ್ತಿದ್ದಾರೆ. ಭಾರತೀಯರನ್ನು ಕಡೆಗಣಿಸಿ ಸದಾ ವಿದೇಶ ಸುತ್ತುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿದೇಶಿ ಗುರು ಆಗಿದ್ದಾರೆ ಎಂದು ಟೀಕಿಸಿದರು.


ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ ಯವರು ಮಾತನಾಡಿ, ಕೃಷಿ ನೀತಿಯನ್ನು ಹೆಮ್ಮೆಟ್ಟಿಸಿದ ರೈತರ ಚಳವಳಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಕನಿಷ್ಟ ಕೂಲಿ, ತುಟ್ಟಿಭತ್ತೆಯನ್ನು ಮಾಲಕರಿಂದ ಜ್ಯಾರಿಮಾಡಿಸಲು ಆಗದ ಸರಕಾರಗಳು ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ವಿಫಲವಾಗಿದೆ. ದೇಶದ ಐಕ್ಯತೆ, ಘನತೆಯನ್ನು ರಕ್ಷಿಸಿ ಉಳಿಸಲು ಕಾರ್ಮಿಕರಿಗೆ ಹೋರಾಟವಲ್ಲದೆ ಬೇರೆ ದಾರಿ ಇಲ್ಲ ಎಂದರು.

ಜನರ ಹೋರಾಟಗಳಿಂದ ರೂಪುಗೊಂಡ ಹಲವಾರು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಈಗಿನ ಕೇಂದ್ರ ಸರಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಜನರೇ ಸಂವಿಧಾನಬದ್ಧವಾಗಿ ಚುನಾಯಿಸಿದ ಸರಕಾರವೇ ಇಂದು ಜನರ ಮೇಲೆ ಸವಾರಿ ನಡೆಸುತ್ತಿದೆ. ಸರಕಾರದ ವಿರುದ್ದದ ಈ ಜನ ಪ್ರತಿಭಟನೆಗೆ ಕೇಂದ್ರ ಸರಕಾರವೇ ಕಾರಣ ಎಂದು ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಆರೋಪಿಸಿದರು.

ಎಐಬಿಇಎ ನೇತೃತ್ವದ ಬ್ಯಾಂಕ್ ಸಂಘಟನೆಗಳ ಮುಖಂಡ ಫಣೀಂದ್ರ, ಎಐಸಿಸಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕೆ.ಇ. ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡಿದರು.


ಪ್ರತಿಭಟನೆಯ ನೇತೃತ್ವವನ್ನು ಎಐಟಿಯುಸಿ ನಾಯಕರಾದ ಬಿ.ಶೇಖರ್, ಎ.ಪ್ರಭಾಕರ್ ರಾವ್, ವಿ.ಕುಕ್ಯಾನ್, ಸುರೇಶ್ ಕುಮಾರ್ ಬಂಟ್ವಾಳ್, ಕರುಣಾಕರ್ ಮಾರಿಪಲ್ಲ, ಸುಲೋಚನಾ, ಮಮತ, ಶಮಿತಾ, ಕೇಶವತಿ, ಸಿಐಟಿಯು ನಾಯಕರಾದ ಬಾಲಕೃಷ್ಣ ಶೆಟ್ಟಿ, ಭಾರತಿ ಬೋಳಾರ. ಪದ್ಮಾವತಿ ಶೆಟ್ಟಿ, ಸದಾಶಿವ ದಾಸ್, ಜಯಂತ ನಾಯ್ಕ್, ಮುನೀರ್ ಕಾಟಿಪಲ್ಲ, ಇಂಟಕ್ನ ಮನೋಹರ್ ಶೆಟ್ಟಿ, ಎಐಸಿಸಿಟಿಯುನ ರಾಮಪ್ಪ ವಿಟ್ಲ, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ ಹಾಜರಿದ್ದರು.


ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಟಿಯುಸಿ ಜಿಲ್ಲಾ ಸಹಾಯಕ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News