ಪೂಂಜಾಲಕಟ್ಟೆ: ಸ್ಮಶಾನದ ಜಾಗ ಸರ್ವೇ ನಡೆಸುವ ಸಂದರ್ಭ ಗ್ರಾ.ಪಂ ಅಧ್ಯಕ್ಷರಿಗೆ ಜೀವ ಬೆದರಿಕೆ; ದೂರು ದಾಖಲು

Update: 2024-07-21 09:24 GMT

ಬೆಳ್ತಂಗಡಿ:  ಸ್ಮಶಾನಕ್ಕೆಂದು ಗುರುತಿಸಿರುವ ಜಾಗದ ಗಡಿ ಗುರುತು ಮಾಡಲು ಸರ್ವೇ ನಡೆಸುವ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಿಗೆ ಹಾಗೂ ಇತರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಬಾರ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ತಿಲ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ‌

ಪುತ್ತಿಲ ಗ್ರಾಮದ ಸಂ, ನಂ 73/2a ಯಲ್ಲಿ 20ಸೆನ್ಸ್ ಪರಿಶಿಷ್ಟ ಜಾತಿಯವರಿಗೆ ಹಾಗೂ 20ಸೆನ್ಸ್ ಪರಿಶಿಷ್ಟ ಪಂಗಡದವರಿಗೆ ಹಾಗೂ ಸ ನ‌ಂ 66/1p ಯಲ್ಲಿ 40 ಸೆನ್ಸ್ ಹಿಂದೂ ರುದ್ರಭೂಮಿಗೆ ಮೀಸಲಿರಿಸಿದ ಜಮೀನಿದೆ. ದಶಕಗಳ ಹಿಂದೆಯೇ ಮೀಸಲಿರಿಸಲಾಗಿದ್ದ ಈ ಜಮೀನನ್ನು ಗಡಿ ಗುರುತು ಮಾಡಲು ಗ್ರಾಮ ಪಂಚಾಯತಿನಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು.  

ಈ ಹಿನ್ನೆಲೆಯಲ್ಲಿ ಜುಲೈ 20 ರಂದು ಗಡಿ ಗುರುತಿಸಲು ಬಂದ ಸಂದರ್ಭದಲ್ಲಿ ಸ್ಥಳೀಯರಾದ ಸಂತೋಷ್ , ಕೋಟ್ಯಪ್ಪ ಪೂಜಾರಿ, ಸೂರಜ್ ಅವರು ಗ್ರಾ.ಪಂ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿದ್ದಾರೆ. ಜಾಗ ಅಳತೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ  ಬಾರ್ಯ ಗ್ರಾ.ಪಂ ಅಧ್ಯಕ್ಷ ಪಿ ಕೆ ಉಸ್ಮಾನ್ ಅವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಅದೇರೀತಿ ಸ್ಮಶಾನಕ್ಕೆಂದು ಗುರುತಿಸಲಾಗಿರುವ ಜಾಗದಲ್ಲಿ ಇದ್ದ ಮರಗಳನ್ನು ಸದ್ರಿ ವ್ಯಕ್ತಿಗಳು ಗ್ರಾ.ಪಂ ಗೆ ಮಾಹಿತಿ ನೀಡದೆ ಅಕ್ರಮವಾಗಿ ಕಡಿದು ಸಾಗಾಟ ಮಾಡಿದ್ದಲ್ಲದೇ ಜಮೀನನ್ನು ಕಬಳಿಸುವ ಪ್ರಯತ್ನ ನಡೆಸಿದ್ದು, ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಮಶಾನಕ್ಕೆಂದು ಈ ಮೀಸಲಿರಿಸಲಾಗಿದ್ದ ಜಮೀನನ್ನು ಅಕ್ರಮಿಸುವ ಪ್ರಯತ್ನ ನಡೆಯುತ್ತಿದ್ದ ಹಿನ್ನಲೆಯಲ್ಲಿ ಗಡಿ ಗುರುತು ಮಾಡಲು ಪ್ರಯತ್ನ ಮಾಡಲಾಗಿತ್ತು. ಈ ಹಿಂದೆಯೂ ಪ್ರಯತ್ನಿಸಿದಾಗ ಅದನ್ನು ತಡೆಯಲಾಗಿತ್ತು. ಇದೀಗ ಗ್ರಾಮಪಂಚಾಯತಿನ ಕೋರಿಕೆಯ ಮೇರೆಗೆ ತಹಶೀಲ್ದಾರರ ನೇತೃತ್ವದಲ್ಲಿ ಅಳತೆ ನಡೆಸಲಾಗಿತ್ತು. ಜಮೀನನ್ನುಅಳತೆ ಮಾಡಿ, ಗಡಿ ಗುರುತುಮಾಡಿ ಅಗಳು ಹಾಕುವ ಮೊದಲು ಅದನ್ನು ತಡೆದಿದ್ದಾರೆ. ಸ್ಮಶಾನಕ್ಕೆ ಮೀಸಲಿರಿಸಲಾಗಿರುವ ಜಾಗ ಉಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.

ಪಿ ಕೆ ಉಸ್ಮಾನ್ ಅಧ್ಯಕ್ಷರು, ಗ್ರಾ.ಪಂ ಬಾರ್ಯ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News