ಬೆಳೆ ಸಮೀಕ್ಷೆಯಡಿ ನೋಂದಣಿ ಕಡ್ಡಾಯ
ಮಂಗಳೂರು, ಸೆ.8: ತೋಟಗಾರಿಕೆ ಬೆಳೆಯ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರ ತುಂಬಿ ಕೊಡುವ ನಿಟ್ಟಿನಲ್ಲಿ 2023-24ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ನೋಂದಣಿಗೊಳ್ಳಲು ಪಹಣಿ ಪತ್ರದಲ್ಲಿ ಬೆಳೆ ನಮೂದಾಗಿರುವುದು ಕಡ್ಡಾಯವಾಗಿರುತ್ತದೆ.
ವಿಮೆ ಬೆಳೆಯು ನಮೂದಾಗದಿದ್ದಲ್ಲಿ ಬೆಳೆ ವಿಮೆ ಅಸಾಧ್ಯ. ಸೆ.15ರೊಳಗೆ ಸಮೀಕ್ಷೆ ಮಾಡಿ ಬೆಳೆ ನಮೂದಿಸಲಾಗುವುದು ಎಂದು ರೈತರಿಂದ ಮುಚ್ಚಳಿಕೆ ಪಡೆದು ಈ ಯೋಜನೆಯಡಿ ರೈತರನ್ನು ನೋಂದಾಯಿಸಲಾಗಿರುತ್ತದೆ. ತಪ್ಪಿದಲ್ಲಿ ಅಂತಹ ರೈತರ ನೋಂದಣಿಯು ತಿರಸ್ಕೃತವಾಗುತ್ತದೆ. ಆದ್ದರಿಂದ ರೈತರು ಖುದ್ದಾಗಿ ಅಥವಾ ಬೆಳೆ ಸಮೀಕ್ಷೆ ಕೈಗೊಳ್ಳಲು ಆಯಾ ಗ್ರಾಮಕ್ಕೆ ನಿಯೋಜಿತರಾಗಿರುವ ವ್ಯಕ್ತಿಗಳ ಮೂಲಕ ಕಡ್ಡಾಯವಾಗಿ ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಳ್ಳಬೇಕು.
ಮಾಹಿತಿಗೆ ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.