ಆಹಾರ, ಆರ್ಥಿಕ ಭದ್ರತೆಯಲ್ಲಿ ಮೀನುಗಾರಿಕೆ ಪಾತ್ರ ಪ್ರಮುಖ: ಡಾ.ಎನ್.ಎ. ಪಾಟೀಲ್

Update: 2024-02-20 09:57 GMT

ಮಂಗಳೂರು, ಫೆ. 20: ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಆರ್ಥಿಕ ಸುಭದ್ರತೆಯಲ್ಲಿ ಮೀನುಗಾರಿಕಾ ಕ್ಷೇತ್ರದ ಪಾತ್ರ ಮಹತ್ವದಾಗಿದ್ದು, ಮತ್ಸ್ಯ ಸಂಪದ ಜಾಗೃತಿ ಅಭಿಯಾನ ಆ ದಿಸೆಯಲ್ಲಿ ಈ ಕ್ಷೇತ್ರದ ಸುಧಾರಣೆಗೆ ಪೂರಕವಾಗಲಿದೆ ಎಂದು ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ಕಾಲೇಜಿನ ವಿಸ್ತರಣಾ ನಿರ್ದೇಶಕ ಡಾ. ಎನ್.ಎ. ಪಾಟೀಲ್ ಹೇಳಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ಮತ್ಸ್ಯ ಸಂಪದ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವಲ್ಲಿ ಮೀನುಗಾರಿಕಾ ವಲಯ ಮುಂಚೂಣಿಯಲ್ಲಿದ್ದು, ಮೀನುಗಾರರ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ ಹಾಗೂ ಅಪೌಷ್ಟಿಕತೆ ನಿವಾರಣೆ ಆಗಬೇಕು ಎಂದರು.

ಉದ್ಘಾಟನಾ ಕಾರ್ಯಕ್ರಮದ ವೇಳೆ ವೀಡಿಯೋ ಕಾನ್ಫರೆನ್ಸ್ ಸಂದೇಶ ನೀಡಿದ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಡಾ. ಎಲ್. ನರಸಿಂಹ ಮೂರ್ತಿ, ಮತ್ಸ್ಯ ಸಂಪದ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿರುವ ರೈತರು ಹಾಗೂ ವಿಜ್ಞಾನಿಗಳು ಮುಂದಿನ 10 ವರ್ಷಗಳಿಗೆ ಪೂರಕವಾಗಿ ಜನಸಂಖ್ಯೆಯನ್ನು ಗಮನದಲ್ಲಿಸಿರಿಕೊಂಡು ಮೀನುಗಾರಿಕಾ ವಲಯದಲ್ಲಿ ಆಗಬೇಕಾಗಿರುವ ಬದಲಾವಣೆಗಳು, ರೈತರಿಗೆ ಏನು ಅಗತ್ಯವಿದೆ ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸಲ್ಲಿಸಿದರೆ ಕಾನೂನು ರೂಪಿಸುವವರಿಗೆ ಅಗತ್ಯವಾಗಲಿದೆ ಎಂದರು.

ಅಳಿವಿನಂಚಿನಲ್ಲಿರುವ ಮೀನಿನ ಸಂತತಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಮಂಡಳಿಯು ಈಗಾಗಲೇ ನದಿ ಮೀನು ಸಾಕಾಣೆ ಮೂಲಕ ಕ್ರಮಕ್ಕೆ ಮುಂದಾಗಿದ್ದರೆ, 5 ಲಕ್ಷ ಮೀನುಗಾರರಿಗೆ ವಿವಿಧ ರೀತಿಯ ಯೋಜನೆಗಳನ್ನು ಒದಗಿಸಿದೆ. ಮೀನಿನ ನಿರ್ವಹಣೆ, ಸಂರಕ್ಷಣೆ ಮತ್ತು ಮಾರಾಟದಲ್ಲಿ ಗಮನಾರ್ಹ ಸುಧಾರಣೆ ತರಲು ಮೂಲಸೌಕರ್ಯ ಸೌಲಭ್ಯಗಳನ್ನು ರಚಿಸಲು ಮಂಡಳಿ ಬದ್ಧವಾಗಿದೆ. ಭಾರತ ಸರಕಾರದ ಆತ್ಮ ನಿರ್ಭರ್ ಭಾರತ್ ನ ಉಪಕ್ರಮವಾಗಿ, ಸಂಶೋಧನಾ ಸಂಸ್ಥೆಗಳು ಮತ್ತು ಸಂಸ್ಥೆಗಳ ಬೆಂಬಲದೊಂದಿಗೆ ಮಾರುಕಟ್ಟೆ ಬದಲಾವಣೆಗಳು, ಆಹಾರ ಭದ್ರತೆ ಸಮಸ್ಯೆಗಳು ಮತ್ತು ವಲಯದಲ್ಲಿನ ಹವಾಮಾನ ಬದಲಾವಣೆಗಳಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್, ಎಸ್.ಎಂ. ಶಿವಪ್ರಕಾಶ್, ವಿವೇಕ್ ಆರ್., ಡಾ.ಟಿ.ಎನ್. ರಾಜೇಶ್, ಡಾ. ಟಿ.ಜೆ. ರಮೇಶ್, ಡಾ. ವಿಜಯ ಕುಮಾರ್, ಡಾ. ಕೆ.ಬಿ. ರಾಜಣ್ಣ, ಡಾ. ಮಂಜಪ್ಪ ಎನ್. ಉಪಸ್ಥಿತರಿದ್ದರು.

ಈ ಸಂದರ್ಭ ಕಾಲೇಜಿನ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್. ಆಂಜನೇಯಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಜಯ ಕುಮಾರ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎ.ಟಿ. ರಾಮಚಂದ್ರ ನಾಯ್ಕ್ ಸ್ವಾಗತಿಸಿದರು.

ಕಾರ್ಯಕ್ರಮದ ಅಂಗವಾಗಿ ವಿಜ್ಞಾನಿಗಳಿಂದ ರೈತರೊಡನೆ ಸಂವಾದ ಕಾರ್ಯಕ್ರಮ, ವಿಷಯಾಧಾರಿತ ವೈಜ್ಞಾನಿಕ ಮಾಹಿತಿಗಳು ಮತ್ತು ಜಲಕೃಷಿಯಲ್ಲಿ ನವೀನ ತಂತ್ರಜ್ಞಾನದ ಪರಿಚಯ, ರೈತರ ಕೃಷಿ ಹೊಂಡಗಳಲ್ಲಿ ಮೀನು ಸಾಕಣೆಗೆ ಸೂಕ್ತವಾದ ಮೀನಿನ ತಳಿಗಳ ಪರಿಚಯ ಮತ್ತು ನಿರ್ವಹಣೆ ಮೊದಲಾದ ಕಾರ್ಯಕ್ರಮಗಳ ಜತೆಗೆ ಮೀನುಗಾರಿಕೆಗೆ ಅಗತ್ಯವಾದ ಸಲಕರಣೆಗಳು, ಅವಿಷ್ಕಾರಗಳು, ಉತ್ಪನ್ನಗಳ ಪ್ರದರ್ಶನ ಮಳಿಗೆಗಳ ಮೂಲಕ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News