ವಿಟ್ಲ: ಜಾನುವಾರು ಸಾಗಾಟಗಾರರಿಗೆ ಕತ್ತಿಯಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಸಂಘಪರಿವಾರದ ಕಾರ್ಯಕರ್ತರು
ವಿಟ್ಲ: ಸಂಘಪರಿವಾರದ ಕಾರ್ಯಕರ್ತರ ತಂಡವೊಂದು ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಸಾಗಾಟಗಾರರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆನ್ನಲಾದ ಘಟನೆ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಬುಧವಾರ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡವರನ್ನು ಕೇರಳದ ಮಂಜೇಶ್ವರ ತಾಲೂಕಿನ ಪಾತೂರು ನಿವಾಸಿ ಮೂಸಾ, ಇಬ್ರಾಹಿಂ, ಹಮೀದ್ ಮತ್ತು ಸಾಲೆತ್ತೂರಿನ ಹಮೀದ್ ಎಂದು ಗುರುತಿಸಲಾಗಿದೆ.
ಆರೋಪಿಗಳಾದ ಜಯ ಪ್ರಶಾಂತ, ಲಕ್ಷೀಶ ಮತ್ತು ಇತರ ಮೂವರು ಜಾನುವಾರು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ಅದರಲ್ಲಿದ್ದ ನಾಲ್ಕು ಮಂದಿಗೆ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮೂಸಾ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ 341, 307, 324, 323, 506,143, 147, 148 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಮುಳಿಯ ಎಂಬಲ್ಲಿಂದ 5 ಜಾನುವಾರುಗಳನ್ನು ಖರೀದಿಸಿ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ತೆರಳುತ್ತಿದ್ದಾಗ ಆರೋಪಿಗಳಾದ ಜಯ ಪ್ರಶಾಂತ, ಲಕ್ಷೀಶ ಮತ್ತು ಇತರ ಮೂವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ 5 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಮಂಜೇಶ್ವರ ಬಾಕ್ರಬೈಲು ನಿವಾಸಿ ಇಬ್ರಾಹಿಂ, ಮೂಸಾ, ಕನ್ಯಾನ ನಿವಾಸಿ ಹಮೀದ್ ಹಾಗೂ ಸಾಲೆತ್ತೂರಿನ ಹಮೀದ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ವಾಹನ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.