ಪಣಂಬೂರು: ಮೊಗವೀರ ಸಂಯುಕ್ತ ಸಭೆಯಿಂದ ಸ್ಪೀಕರ್ ಖಾದರ್, ಶಾಸಕರಿಗೆ ಸನ್ಮಾನ

Update: 2023-07-09 10:27 GMT

ಮಂಗಳೂರು, ಜು 9: ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆ (ಉಪ್ಪಳದಿಂದ ಹೊಸಬೆಟ್ಟುವರೆಗಿನ ಮೊಗವೀರ ಗ್ರಾಮ ಸಭೆಗಳ ಒಕ್ಕೂಟ) ಮಂಗಳೂರು, ಇವರ ವತಿಯಿಂದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕರುಗಳಾದ ಡಾ.ವೈ.ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಯಶ್ಪಾಲ್ ಎ. ಸುವರ್ಣರವರಿಗೆ ಅಭಿನಂದನಾ ಕಾರ್ಯಕ್ರಮ ಪಣಂಬೂರು ಮೊಗವೀರ ಸಭಾದ ಸಮುದಾಯ ಭವನದಲ್ಲಿ ಶನಿವಾರ ಜರುಗಿತು

ಸಮಾರಂಭ ಅಧ್ಯಕ್ಷತೆಯನ್ನು ಸಂಯುಕ್ತ ಸಭೆಯ ಅಧ್ಯಕ್ಷ ಭರತ್ ಕುಮಾರ್ ವಹಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಸಮಾಜದ ಪರವಾಗಿ 30 ಅಂಶಗಳ ಹಕ್ಕೊತ್ತಾಯದ ಮನವಿಯನ್ನು ಸಲ್ಲಿಸಿದರು.

ಮೊಗವೀರ ಗ್ರಾಮಗಳಲ್ಲಿ ಇರುವ ಸಮಸ್ಯೆಗಳು ಹಾಗೂ ಮೀನುಗಾರಿಕಾ ಕ್ಷೇತ್ರದ ಬೇಡಿಕೆಗಳು ಈ ಹಕ್ಕೊತ್ತಾಯದ ಮನವಿಯಲ್ಲಿ ನೀಡಲಾಯಿತು.

ಮೊಗವೀರ ಮಹಾಜನ ಸಂಘದ ಅಧ್ತಕ್ಷ ಜಯ ಸಿ. ಕೋಟ್ಯಾನ್ ನೂತನ ಶಾಸಕರು ಹಾಗೂ ವಿಧಾನ ಸಭಾಧ್ಯಕ್ಷರಿಗೆ ಮೊಗವೀರ ಸಮಾಜದ ಪರವಾಗಿ ಅಭಿನಂದನಾ ನುಡಿಗಳನ್ನು ನುಡಿದರು ಹಾಗೂ ಮೊಗವೀರ ಸಮಾಜದ ಸಂಪೂರ್ಣ ಸಮಸ್ಯೆಗಳನ್ನು ತಿಳಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತಾಡಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಮೊಗವೀರರು ಶ್ರಮಜೀವಿಗಳಾಗಿದ್ದು ಸ್ವಾಭಿಮಾನಿಗಳಾಗಿದ್ದಾರೆ ಪ್ರಥಮವಾಗಿ ಈ ಎಲ್ಲಾ ಬೇಡಿಕೆಗಳನ್ನು ಇಟ್ಟಿದ್ದಾರೆ. ಸರಕಾರವು ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸಕಲ ಪ್ರಯತ್ನ ಮಾಡುವ ಭರವಸೆ ಇತ್ತರು.

ಶಾಸಕ ಡಿ.ವೇದವ್ಯಾಸ ಕಾಮತ್, ಸಂಯುಕ್ತ ಸಭೆಗೆ ಸಮುದಾಯ ಭವನ ನಿರ್ಮಿಸಲು ನಿವೇಶನವನ್ನು ಒದಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಶಾಸಕ ಡಾ| ವೈ ಭರತ್ ಶೆಟ್ಟಿ ಮಾತನಾಡಿ, ಮೀನುಗಾರಿಕಾ ಜೆಟ್ಟಿ ನಿರ್ಮಾಣ ಹಾಗೂ ಕರರಹಿತ ಡಿಸೇಲ್ ಮತ್ತು ನಾಡದೋಣಿಗಳ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು.

ಶಾಸಕ ಯಶ್ಪಾಲ್ ಎ. ಸುವರ್ಣ ಶುಭಾಶಯವನ್ನಿತ್ತರು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮೊಗವೀರ ಗ್ರಾಮ ಸಭೆಗಳ ಅಧ್ಯಕ್ಷರು ಹಾಗೂ ಸದಸ್ಯರು, ಮಹಿಳಾ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಮೀನುಗಾರಿಕಾ ಸಹಕಾರಿ ಸಂಘಗಳ ಅಧ್ಯಕ್ಷರು, ಮೀನುಗಾರಿಕಾ ಯೂನಿಯನ್ ಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೋಹನ್ ಕೋಡಿಕಲ್ ವಂದಿಸಿದರು. ಯಶವಂತ ಬೋಳೂರು ಕಾರ್ಯಕ್ರಮ ನಿರ್ವಹಿಸಿದರು.




 




 


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News