ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತವಾಗಬಾರದು: ಡಿಸಿ ಮುಲ್ಲೈ ಮುಗಿಲನ್

Update: 2023-09-24 13:01 GMT

ಮಂಗಳೂರು, ಸೆ.24: ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಅಂಕದ ಜೊತೆ ಸ್ಕೌಟ್ಸ್, ಎನ್‌ಸಿಸಿ, ಎನ್ಸೆಸ್ಸೆಸ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಸವ್ಯಸಾಚಿಗಳಾಗಿ ಹೊರಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ದ.ಕ.ಜಿಲ್ಲಾ ಸಂಸ್ಥೆಯ ವತಿಯಿಂದ ರವಿವಾರ ನಗರದ ಬಲ್ಮಠ ವೃತ್ತ ಬಳಿಯ ಜಿಲ್ಲಾಧಿಕಾರಿಯ ನಿವಾಸದಲ್ಲಿ ನಡೆದ ತೃತೀಯ ಚರಣ (ಕಬ್), ಸುವರ್ಣ ಗರಿ (ಬುಲ್‌ಬುಲ್), ತೃತೀಯ ಸೋಪನಾ (ಸ್ಕೌಟ್ಸ್- ಗೈಡ್ಸ್) ಹಾಗೂ ನಿಪುಣ್ ವಿಭಾಗದ (ರೋವರ್ಸ್-ರೇಂಜರ್ಸ್) ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತನ್ನ ಸ್ವಾರ್ಥಕ್ಕಿಂತ ಸಮಾಜದ ಬಗ್ಗೆ ಕಾಳಜಿ ಹೊಂದಿರಬೇಕು. ತ್ಯಾಗದ ಚಿಂತನೆಯನ್ನು ಮೈಗೂಡಿಸಿ, ಸಮಾಜಕ್ಕೆ ಪೂರಕವಾಗಿ ಬದುಕಬೇಕು. ಜೀವನದಲ್ಲಿ ಶಿಕ್ಷಣ ಮುಖ್ಯ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿವಿಧ ವಿಭಾಗ ಗಳಲ್ಲಿ ದೇಶಪ್ರೇಮ, ಸಂವಿದಾನ, ಪ್ರಜಾಪ್ರಭುತ್ವ, ಮಾನವೀಯ ಗುಣ, ಶಿಕ್ಷಕರಿಗೆ, ಹಿರಿಯರಿಗೆ, ಗೌರವ ನೀಡುವ ಆದರ್ಶ ಗಳನ್ನು ಕಲಿಯಬಹುದಾಗಿದೆ ಎಂದು ಡಿಸಿ ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟರು.

ಬಳಿಕ ಜಿಲ್ಲಾಧಿಕಾರಿಯು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ತೃತೀಯ ಚರಣ ಕ್ಲಬ್ಸ್‌ನ 23 ಶಾಲೆಗಳಿಂದ 237 ಕ್ಲಬ್ಸ್, ಸುವರ್ಣಗರಿ ಬುಲ್‌ಬುಲ್ಸ್‌ನ 28 ಶಾಲೆಗಳಿಂದ 252 ಬುಲ್‌ಬುಲ್ಸ್, ತೃತೀಯ ಸೋಪಾನ ಸ್ಕೌಟ್ಸ್‌ನ 34 ಶಾಲೆಗಳಿಂದ 237 ಸ್ಕೌಟ್ಸ್, ತೃತೀಯ ಸೋಪಾನ ಗೈಡ್ಸ್‌ನ 39 ಶಾಲೆಗಳಿಂದ 302 ಗೈಡ್ಸ್, ನಿಪುಣ್ ರೋವರ್ಸ್‌ನ 6 ಕಾಲೇಜುಗಳಿಂದ 23 ರೋವರ್ಸ್, ನಿಪುಣ್ ರೇಂಜರ್ಸ್‌ನ 6 ಕಾಲೇಜುಗಳಿಂದ 96 ರೇಂಜರ್ಸ್‌ಗೆ ಪ್ರಶಸ್ತಿ ನೀಡಲಾಯಿತು.

ಜಿಲ್ಲಾಧಿಕಾರಿ ಪತ್ನಿ ಅಶ್ವಿನಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ, ಜಿಲ್ಲಾ ಸಹಾಯಕ ಆಯುಕ್ತ ವಸಂತ ರಾವ್, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಪ್ರತಿಮ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಗೈಡ್ ಆಯುಕ್ತೆ (ಪ್ರಭಾರ) ಜಯವಂತಿ ಸೋನ್ಸ್ ವಂದಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಕೆ. ಪ್ರಮಾಣ ಪತ್ರ ವಾಚಿಸಿದರು. ಶಾಂತರಾಮ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News