ತೆಂಕೆ ಎಡಪದವು | ದನ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಡಿ.23: ತೆಂಕ ಎಡಪದವು ಗ್ರಾಮದ ಪದರಂಗಿ ಕೊರ್ಡೇಲ್ ಎಂಬಲ್ಲಿ ಮೇಯಲು ಬಿಟ್ಟ ದನಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೂಡಬಿದಿರೆಯ ಕರಿಂಜೆ ಗ್ರಾಮದ ಬಗ್ಗಪಾಲವಿನ ಮುಹಮ್ಮದ್ ರಫೀಕ್ ಯಾನೆ ರಫೀಕ್ (31) ಮತ್ತು ಕಲ್ಲಬೆಟ್ಟು ಗ್ರಾಮದ ನೀರಳಿಕೆಯ ಶೌಕತ್ ಅಲಿ ಯಾನೆ ಶೌಕತ್ (34) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ ದನಕಳವು ಮಾಡಲು ಬಳಸಿರುವ ಸುಮಾರು 3 ಲಕ್ಷ ರೂ. ಮೌಲ್ಯದ ಕಾರು ಹಾಗು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.19ರಂದು ತೆಂಕ ಎಡಪದವು ಗ್ರಾಮದ ಪಂಚಾಯತ್ ಕಚೇರಿ ಬಳಿ ಮೇಯಲು ಬಿಟ್ಟ ದನ ಮತ್ತು ಪದರಂಗಿ ಕೊರ್ಡೇಲ್ ಎಂಬಲ್ಲಿ ಡಿ.21ರಂದು ಮೇಯಲು ಬಿಟ್ಟ ದನಗಳು ಕಳವಾದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೊಂಡ ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್. ಪತ್ತೆ ಕಾರ್ಯಕ್ಕೆ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಪಿಎಸ್ಸೈ ರೇವಣಸಿದ್ದಪ್ಪ ಮತ್ತು ಕುಮಾರೇಶನ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದನಗಳನ್ನು ಕಳವುಗೈದು ಮಾಂಸ ಮಾಡಿರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆ, ಉಡುಪಿಯ ಅಜೇಕಾರು ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದನ ಕಳವಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುತ್ತವೆ. ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.