ಜಮೀನು ನೋಂದಣಿ ಬಳಿಕ ಖಾತೆಯಿಂದ ಹಣ ವರ್ಗಾವಣೆ: ಮಂಗಳೂರು ಸೆನ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು
Update: 2023-10-26 13:26 GMT
ಮಂಗಳೂರು, ಅ.26: ನಗರದ ಉಪನೋಂದಣಾಧಿಕಾರಿಯ ಕಚೇರಿಯಲ್ಲಿ ಜಮೀನು ನೋಂದಣಿಯ ಬಳಿಕ ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಮತ್ತೊಬ್ಬ ವ್ಯಕ್ತಿ ನೀಡಿದ ದೂರಿನಂತೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.9ರಂದು ತನ್ನ ಮೊಬೈಲ್‌ಗೆ ಬಂದ ಸಂದೇಶ ಪರಿಶೀಲಿಸಿದಾಗ ತನ್ನ ಬ್ಯಾಂಕ್ ಖಾತೆಯಿಂದ ಆ.23ರಂದು 4,990 ರೂ., ಆ.24ರಂದು 8,500 ರೂ., ಸೆ.6ರಿಂದ 9ರ ಮಧ್ಯೆ ಎರಡು ಬಾರಿ ತಲಾ 10,000 ಮತ್ತು 3,400 ಹೀಗೆ ಒಟ್ಟು 36,890 ರೂ. ಕಡಿತವಾಗಿರುವ ಬಗ್ಗೆ ತಿಳಿದು ಬಂತು. ಆ.2ರಂದು ತಾನು ಮಂಗಳೂರು ಉಪನೋಂದಣಾಧಿಕಾರಿಯ ಕಚೇರಿಯಲ್ಲಿ ಜಮೀನು ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್‌ನ ಪ್ರತಿಯನ್ನು ನೀಡಿದ್ದು, ಆ ಬಳಿಕ ಯಾರೋ ಅಪರಿಚಿತರು ತಂತ್ರಾಂಶ ಬಳಸಿ ತನ್ನ ಆಧಾರ್ ಕಾರ್ಡ್‌ನ ಮಾಹಿತಿಯನ್ನು ಪಡೆದು ಹಣವನ್ನು ಮೋಸದಿಂದ ವರ್ಗಾಯಿಸಿ ಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.