ಉಳ್ಳಾಲ: ಅಪೂರ್ಣಗೊಂಡ ಚರಂಡಿ ಕಾಮಗಾರಿ; ಕೊಳಚೆ ನೀರಿನ ಜತೆ ಜನರ ಬದುಕು ಅಸಹನೀಯ !

Update: 2023-09-22 07:08 GMT

ಮಂಗಳೂರು: ಉಳ್ಳಾಲ ನಗರ ಸಭಾ ವ್ಯಾಪ್ತಿಯ ಮಾಸ್ತಿಕಟ್ಟೆ ಎಂಬಲ್ಲಿ ಕಳಪೆ ಕಾಮಗಾರಿಯಿಂದಾಗಿ ಒಳ ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು ಸೋರಿಕೆ ಆಗುತ್ತಿದೆ. ಈ ಕೊಳಚೆ ನೀರು ಬಾವಿಯ ನೀರಿನೊಂದಿಗೆ ಸೇರಿಕೊಳ್ಳುತ್ತಿದ್ದು, ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ನೀರು ಕುಡಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವು ವರ್ಷಗಳ ಹಿಂದೆ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಓವರ್ ಬ್ರಿಡ್ಜ್ ನಿಂದ ಹಿಡಿದು ಅಬ್ಬಕ್ಕ ಸರ್ಕಲ್ ವರೆಗೆ ಚತುಷ್ಪಥ ಕಾಮಗಾರಿ ನಡೆಸಲಾಗಿತ್ತು. ಈ ವೇಳೆ ಕೋಳಚೆ ನೀರು ಹರಿಯುವ ಚರಂಡಿ ಕಾಮಗಾರಿ ಮಾಡಲು ನಾಲ್ಕು ಕೋಟಿ ಮಂಜೂರು ಮಾಡಲಾಗಿತ್ತು. ಈ ಹಣದಲ್ಲಿ ಆರಂಭಗೊಂಡ ಚರಂಡಿ ಕಾಮಗಾರಿ ಮಾಸ್ತಿಕಟ್ಟೆ ವರೆಗೆ ಮಾತ್ರ ಮಾಡಿಸಿ ನಿಲ್ಲಿಸಲಾಗಿತ್ತು. ಇದರ ಬಳಿಕ ಚರಂಡಿ ಕಾಮಗಾರಿ ವಿಸ್ತರಣೆಗೆ ಹಣ ಮೀಸಲಿಟ್ಟರೂ ಕೂಡಾ ಸಂಬಂಧಪಟ್ಟ ಇಲಾಖೆ ಚರಂಡಿ ಕಾಮಗಾರಿ ಪೂರ್ಣ ಗೊಳಿಸದೇ ಅವೈಜ್ಞಾನಿಕವಾಗಿ ನಡೆಸಿದೆ.

ಪರಿಣಾಮ ಮಾಸ್ತಿಕಟ್ಟೆಯಲ್ಲಿ ಈ ಚರಂಡಿ ನೀರು ಸೋರಿಕೆ ಆಗಿ ಗದ್ದೆಗಳಲ್ಲಿ, ರಸ್ತೆ ಬದಿ ಯಲ್ಲಿ ಶೇಖರಣೆ ಆಗುತ್ತಿದ್ದು, ಇದರಿಂದ ಇಲ್ಲಿನ ನಿವಾಸಿಗಳಾದ ಕೆಲವು ಕುಟುಂಬಸ್ಥರ ಬಾವಿ ನೀರಿಗೂ ಕೊಳಚೆ ನೀರು ಪಸರಿಸಿ ಹಾಳಾಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ನಗರ ಸಭೆ ಪೌರಾಯುಕ್ತ ವಾಣಿ ಆಳ್ವ, ಉಳ್ಳಾಲ ಠಾಣೆ ಹಾಗೂ ಸ್ಥಳೀಯ ನಗರಸಭೆ ಕೌನ್ಸಿಲರ್ ಗಳಿಗೆ ಮನವಿ ಅರ್ಪಿಸಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೀಘ್ರ ಪರಿಹಾರ ಮಾಡಲಾಗುವುದು ಎಂದು ಭರವಸೆ ಮಾತ್ರ ನೀಡಿದ್ದಾರೆ ಹೊರತು ಸಮಸ್ಯೆ ಪರಿಹಾರ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೃಹತ್ ಕಟ್ಟಡಗಳು, ಫ್ಲ್ಯಾಟ್ ಗಳ ನೀರು ಚರಂಡಿ ಯಲ್ಲಿ ಹರಿದು ಬರುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ. ಈ ಕಾರಣದಿಂದ ಹರಿದು ಬರುತ್ತಿರುವ ಕೊಳಚೆ ನೀರು ಚರಂಡಿಯಲ್ಲಿ ತುಂಬಿ ಮಾಸ್ತಿಕಟ್ಟೆಯಲ್ಲಿ ಸೋರಿಕೆ ಆಗುತ್ತಿದೆ. ಇದರ ದುರ್ವಾಸನೆಯಿಂದ ದಿನನಿತ್ಯ ಈ ದಾರಿಯಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಒಂದೆಡೆಯಾದರೆ, ಇಲ್ಲಿ ಉತ್ಪತ್ತಿ ಆಗುವ ಸೊಳ್ಳೆಗಳ ಕಾಟದಿಂದ ಮಲೇರಿಯಾ, ಡೆಂಗ್ಯೂ ಮುಂತಾದ ಮಾರಕ ರೋಗಗಳು ಹರಡುವ ಸಾಧ್ಯತೆ ಕೂಡಾ ತಳ್ಳಿ ಹಾಕುವಂತಿಲ್ಲ.

ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆದಿದ್ದರೂ ಮಾಡಲಾದ ಕಾಮಗಾರಿ ಅಪೂರ್ಣ ಗೊಳಿಸಿರುವುದರಿಂದ ಇಂತಹ ಸಮಸ್ಯೆ ಉದ್ಭವಿಸುತ್ತಿದ್ದು, ನಾಲ್ಕು ಕೋಟಿ ಅನುದಾನದಲ್ಲಿ ಚತುಷ್ಪಥ ಕಾಮಗಾರಿ ಮಾಡಿರುವ ಪಿಡಬ್ಲ್ಯೂಡಿ ಬಳಿಕ ಕಾಮಗಾರಿ ವಿಸ್ತರಣೆಗೆ ಮೀಸಲಿಟ್ಟಿರುವ ಎರಡು ಕೋಟಿ ಹಣದಲ್ಲಿ ಶೀಘ್ರದಲ್ಲೇ ಈ ಚರಂಡಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಕೊಳಚೆ ನೀರು ಸೋರಿಕೆಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಅರ್ಧಂಬರ್ಧ ಕಾಮಗಾರಿ

ಆರಂಭದಲ್ಲಿ ಚರಂಡಿ ಕಾಮಗಾರಿ ಗೆ ಪ್ರತ್ಯೇಕ ಹಣ ಮೀಸಲಿಟ್ಟಿದ್ದ ಪಿಡಬ್ಲ್ಯೂಡಿ ಉಳ್ಳಾಲ ನಗರ ದಿಂದ ಆರಂಭಿಸಿ ಮಾಸ್ತಿಕಟ್ಟೆ ವರೆಗೆ ಮಾಡಲಾಗಿತ್ತು. ಈ ಕಾಮಗಾರಿ ವಿಸ್ತರಣೆ ಗೆ ಹಣ ಮೀಸಲಿಟ್ಟ ಬಳಿಕ ಕಾಮಗಾರಿ ವಿಸ್ತರಣೆ ಮಾತ್ರ ಆಗಲಿಲ್ಲ. ಕೇವಲ ಮಳೆ ನೀರು ಹರಿದು ಹೋಗಲು ಈ ಚರಂಡಿ ಕಾಮಗಾರಿ ನಡೆಸಿದರೂ ಬೃಹತ್ ಕಟ್ಟಡಗಳ, ಬಂಗಲೆಗಳ ಕೊಳಚೆ ನೀರನ್ನು ಇದೇ ಚರಂಡಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಚರಂಡಿಯಲ್ಲಿ ಕೊಳಚೆ ನೀರು ಬ್ಲಾಕ್ ಆಗಿ ಸೊರಿಕೆ ಆಗುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಾಟಾಚಾರಕ್ಕೆ ಕ್ರಮ

ಇದೇ ಚರಂಡಿ ಸಮಸ್ಯೆ ಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಸ್ತಿಕಟ್ಟೆ ನಿವಾಸಿಗಳು ಉಳ್ಳಾಲ ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳ‌ ಗಮನಕ್ಕೂ ತಂದು ಪರಿಹಾರ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದರು. ಆದರೂ ಕೂಡ ಚರಂಡಿ ಸಮಸ್ಯೆ ಎಂದಿನಂತೆ ಮುಂದುವರಿದಿದ್ದು, ಇದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟದ ಬದುಕು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಹೋರಾಟದ ಎಚ್ಚರಿಕೆ ನೀಡಿದರೆ ಅಧಿಕಾರಿಗಳು ಬೆರಳೆಣಿಕೆಯ ದಿನದಷ್ಟು ಫ್ಲ್ಯಾಟ್, ಬೃಹತ್ ಕಟ್ಟಡಗಳ ಕೊಳಚೆನೀರು ವಾಹನಗಳಲ್ಲಿ ಸಾಗಾಟ ಮಾಡುವ ಮೂಲಕ ಕ್ರಮ ಕೈಗೊಳ್ಳುತ್ತಾರೆ. ಮತ್ತೆ ಹಿಂದಿನ ಪಾಡಿನಂತೆ‌ ಅಧಿಕಾರ ಕಚೇರಿಗೆ ಸೀಮಿತ ಗೊಳಿಸುವುದು ರಿಂದ ಮತ್ತದೇ ಸಮಸ್ಯೆ ಇಲ್ಲಿ ಉದ್ಭವಿಸುತ್ತದೆ ಎಂದು ಸ್ಥಳೀಯರು ವಾರ್ತಾ ಭಾರತಿ ಗೆ ತಿಳಿಸಿದ್ದಾರೆ.

ಈ ಚರಂಡಿ ಕಾಮಗಾರಿಯಿಂದ ಬಹಳಷ್ಟು ಸಮಸ್ಯೆ ಆಗಿದೆ ಎಂದು ಗೊತ್ತಾಗಿದೆ. ಇನ್ನು ಶೀಘ್ರವಾಗಿ 300 ಮೀಟರ್ ಕಾಮಗಾರಿ ಆಗಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಎಫ್ಎ ಇಲಾಖೆಗೆ ಮನವಿ ಮಾಡಲಾಗಿದೆ.ಫೈನಾನ್ಶಿಯಲ್ ಡಿಪಾರ್ಟ್ ಮೆಂಟ್ ಕ್ರಮ ಕೈಗೊಂಡರೆ ಶೀಘ್ರ ವ್ಯವಸ್ಥೆ ಮಾಡಲಾಗುವುದು. ಮುಂದಿನ ಡಿಸೆಂಬರ್ ತಿಂಗಳ ಒಳಗೆ ಮಾಡಿ ಮುಗಿಸಲು ಪ್ರಯತ್ನ ಮಾಡುತ್ತೇವೆ.

-ದಾಸ್ ಪ್ರಕಾಶ್, ಪಿಡಬ್ಲ್ಯೂಡಿ ಇಂಜಿನಿಯರ್

ಉಳ್ಳಾಲ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಆದರೂ ಕೂಡಾ ಚರಂಡಿಯ ಅರ್ಧಂಬರ್ಧ ಕಾಮಗಾರಿಯಿಂದ ನೀರು ಸೋರಿಕೆ ಆಗುತ್ತಿದ್ದು, ಇದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜ್ಞಾನ ಕುರುಡುತನದಿಂದ ಆಗುತ್ತಿದೆಯೇ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಈ ಸಮಸ್ಯೆಗೆ ಇಲಾಖಾಧಿಕಾರಿಗಳು ಕಣ್ತೆರೆದು ಶೀಘ್ರ ಪರಿಹಾರ ಒದಗಿಸಬೇಕು.

ಹಾಜಿ ಅಬ್ದುಲ್ ರಶೀದ್, ದರ್ಗಾ ಮಾಜಿ ಅಧ್ಯಕ್ಷ



Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News