ಅನಿರೀಕ್ಷಿತ ಮಳೆ: ಹೂವಿನ ಮಾರಾಟಕ್ಕೆ ಅಡ್ಡಿ; ಸಂಕಷ್ಟಕ್ಕೀಡಾದ ಮಾರಾಟಗಾರರು
ಮಂಗಳೂರು, ಸೆ.5: ಶ್ರೀಕೃಷ್ಣ ಜನ್ಮಾಷ್ಟಮಿಯ ಮುನ್ನಾದಿನವಾಗಿರುವ ಮಂಗಳವಾರ ನಗರದಲ್ಲಿ ಹೂ ಮಾರಾಟಕ್ಕೆ ಮಳೆ ಅಡ್ಡಿಯಾಗಿದೆ.
ಕೆಲವು ದಿನಗಳಿಂದ ಕಾಣೆಯಾಗಿದ್ದ ಮಳೆ ಮತ್ತೆ ಕಾಣಿಸಿಕೊಂಡಿದೆ. ಹಬ್ಬಕ್ಕೆ ಹೂ ಮಾರಾಟಕ್ಕೆ ಬಂದವರಿಗೆ ಮಳೆ ಅಡ್ಡಿಪಡಿ ಸಿದೆ. ಹೊರ ಜಿಲ್ಲೆಗಳಿಂದ ಪ್ರತಿವರ್ಷ ಅಷ್ಟಮಿ ಹೊತ್ತಿಗೆ ಹೂ ಮಾರಾಟಕ್ಕೆ ಮಂಗಳೂರಿಗೆ ಬರುತ್ತಾರೆ. ಆದರೆ ಅನಿರೀಕ್ಷಿತ ಮಳೆ ಅವರ ವ್ಯಾಪಾರಕ್ಕೆ ತೊಂದರೆಯಾಗಿದೆ.
ನಗರದ ಮಾರ್ಗದ ಎರಡೂ ಕಡೆಗಳಲ್ಲೂ ಸೇವಂತಿಗೆ , ಗುಲಾಬಿ, ತುಳಸಿಮಾಲೆ, ಕನಕಾಂಬರ, ಕಾಕಡ, ಚೆಂಡು ಹೂವು, ಬಣ್ಣದ ಹೂವುಗಳ ರಾಶಿ ಕಂಡು ಬಂದಿದೆ. ಬೆಳಗ್ಗಿನಿಂದಲೇ ಹೂವಿನ ಮಾರಾಟವನ್ನು ಆರಂಭಿಸಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹಬ್ಬಗಳಿಗೆ ಹೂವುಗಳು ಬೇಕೆ ಬೇಕು. ಹೀಗಾಗಿ ವ್ಯಾಪಾರಿಗಳಿಗೆ ಇದೊಂದು ಅವಕಾಶ. ಅಷ್ಟಮಿ, ಚೌತಿಗೆ ಹೊರ ಜಿಲ್ಲೆಗಳ ವ್ಯಾಪಾರಿಗಳು ನಗರಕ್ಕೆ ಆಗಮಿಸಿ ಹೂವಿನ ವ್ಯಾಪಾರ ಮಾಡಿ ವಾಪಸಾಗುತ್ತಾರೆ. ಎರಡು ದಿನಗಳ ಕಾಲ ಭರ್ಜರಿ ವ್ಯಾಪಾರ ಸಾಮಾನ್ಯವಾಗಿ ಕಂಡು ಬರುತ್ತದೆ.
ಈ ಬಾರಿ ಮಳೆ ಕಡಿಮೆ ಕಾರಣದಿಂದಾಗಿ ಹೂವಿನ ಬೆಳೆ ಜಾಸ್ತಿಯಾಗಿದೆ. ಹೀಗಾಗಿ ವ್ಯಾಪಾರಿಗಳು ಹೆಚ್ಚು ಹೂವುಗಳನ್ನು ಹೊತ್ತು ತಂದಿದ್ದಾರೆ. ಆದರೆ ಮಳೆಯಿಂದಾಗಿ ಹೂವಿಗೆ ಬೇಡಿಕೆಯೂ ಕಡಿಮೆಯಾಗಿದೆ. ಹೂವನ್ನು ಮಳೆಗೆ ರಕ್ಷಿಸುವುದೇ ಸವಾಲಾಗಿದೆ. ಬಣ್ಣದ ಹೂವುಗಳು ಮಳೆಗೆ ಕೊಳೆತು ಹೋಗುವ ಭೀತಿ ಇದೆ.
ದ.ಕ. ಜಿಲ್ಲೆಯ ಎಲ್ಲೂ ಹೂ ಬೆಳೆಯಲಾಗುತ್ತಿಲ್ಲ. ಹೊರ ಜಿಲ್ಲೆಗಳಿಂದಲೇ ಇಲ್ಲಿಗೆ ಹೂ ಬರಬೇಕು. ಹೀಗಾಗಿ ಅಷ್ಟಮಿಯ ಮುನ್ನ ಒಂದಿಷ್ಟು ಆದಾಯ ಗಳಿಸಲು ಹೂವಿನ ವ್ಯಾಪಾರಿಗಳು ನಗರಕ್ಕೆ ಬರುತ್ತಾರೆ. ಪ್ರತಿವರ್ಷದಂತೆ ಈ ಬಾರಿಯೂ ನೂರಾರು ಮಂದಿ ವ್ಯಾಪಾರಿಗಳು ನಗರಕ್ಕೆ ಆಗಮಿಸಿ ಮಾರ್ಗದ ಬದಿಯಲ್ಲಿ ವ್ಯಾಪಾರ ಆರಂಭಿಸಿದ್ದಾರೆ. ದಿನವಿಡೀ ನಗರ ದಲ್ಲಿ ಆಗಾಗ ಕಾಣಿಸಿಕೊಂಡ ತುಂತುರು ಮಳೆ ಸಮಸ್ಯೆಯನ್ನು ತಂದೊಡ್ಡಿದೆ. ಬುಧವಾರವೂ ಮಳೆ ಮುಂದುವರಿದರೆ ಹೂವಿನ ವ್ಯಾಪಾರಿಗಳಿಗೆ ಇನ್ನಷ್ಟು ನಷ್ಟ ಕಷ್ಟ ಖಚಿತ ಎನ್ನಲಾಗುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿಗೂ ಭಾರೀ ಬೇಡಿಕೆ ಕಂಡು ಬಂದಿದೆ. ಹಣ್ಣು , ತರಕಾರಿಗಳ ಧಾರಣೆಯಲ್ಲಿ ವ್ಯತ್ಯಯ ಉಂಟಾಗಿದೆ