ಉಪ್ಪಿನಂಗಡಿ: ತುಂಬಿ ಹರಿಯುತ್ತಿರುವ ನದಿ; ಶಾಸಕರು, ಅಧಿಕಾರಿಗಳ ಭೇಟಿ

Update: 2023-07-23 16:08 GMT

ಉಪ್ಪಿನಂಗಡಿ: ಎರಡು ದಿನದಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಈ ಮಳೆಗಾಲ ಆರಂಭವಾದಗಿನಿಂದ ನೀರಿನ ಹರಿವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಳ್ಳದಿದ್ದ ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿ- ಕುಮಾರಧಾರವು ಜು.23ರಂದು ಮೈದುಂಬಿ ಹರಿಯತೊಡಗಿದೆ.

ಜು.22ರಿಂದ ಜು.23ರವರೆಗೆ ಉಪ್ಪಿನಂಗಡಿಯಲ್ಲಿ 148.6 ಮಿ.ಮೀ. ಮಳೆಯಾಗಿದ್ದು, ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಿದ್ದು, ಅದರಲ್ಲಿ ಜು.23ರಂದು ಬೆಳಗ್ಗೆ ಏಳು ಮೆಟ್ಟಿಲುಗಳಷ್ಟೇ ಕಾಣುತ್ತಿತ್ತು. ಸಂಜೆಯಾಗುತ್ತಲೇ ನೀರಿನ ಹರಿವು ಉಭಯ ನದಿಗಳಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ನಾಲ್ಕು ಮೆಟ್ಟಿಲುಗಳಷ್ಟೇ ಕಾಣುತ್ತಿತ್ತು. ದೇವಾಲಯದ ಬಳಿಯಿರುವ ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ 29.05 ಮೀಟರ್ ಎತ್ತರಕ್ಕೆ ನೀರು ನೇತ್ರಾವತಿಯಲ್ಲಿ ಹರಿಯುತ್ತಿದ್ದು, ಇಲ್ಲಿನ ಅಪಾಯದ ಮಟ್ಟ 31.0 ಆಗಿದೆ. ನೇತ್ರಾವತಿ ನದಿ ಯನ್ನು ಸೇರುವ ಸಣ್ಣ ಹೊಳೆಯ ನೀರಿನ ಸರಾಗ ಹರಿಯುವಿಕೆಗೆ ನೇತ್ರಾವತಿ ನದಿಯ ನೀರು ತಡೆಯೊಡ್ಡಿದ್ದರಿಂದ ರಂಗಾಜೆ, ಕೂಟೇಲು ಸೇರಿದಂತೆ ಸಣ್ಣ ಹೊಳೆಯ ಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ.

ಧರೆ, ತಡೆಗೋಡೆ ಕುಸಿತ, ಕೃತಕ ನೆರೆ: ಶಾಸಕರಿಂದ ಪರಿಶೀಲನೆ

ಜು.23ರಂದು ಭಾರೀ ಮಳೆಗೆ ಹಲವು ಕಡೆಗಳಲ್ಲಿ ಧರೆ ಕುಸಿದಿದ್ದು, ಕೆಲವು ಕಡೆ ಮನೆಗಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ 34 ನೆಕ್ಕಿಲಾಡಿಯಲ್ಲಿ ಮನೆಯೊಂದು ಜಲಾವೃತವಾದ ಘಟನೆಯೂ ನಡೆದಿದೆ. ಮಳೆಹಾನಿಯಾದ ಹಲವು ಕಡೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿಯ ನಟ್ಟಿಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ನಿರ್ಮಾಣ ಮಾಡಿದ ಉದ್ದದ ತಡೆಗೋಡೆಯೊಂದು ಮಗುಚಿ ಬಿದ್ದಿದೆ. ಇದರಿಂದ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಅಶೋಕ್ ಕುಮಾರ್ ರೈಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್ ಹಾಗೂ ಗುತ್ತಿಗೆದಾರ ಸಂಸ್ಥೆಯಾದ ಕೆಎನ್‍ಆರ್‍ನವರಿಗೆ ಸೂಕ್ತ ನಿರ್ದೇಶನ ನೀಡಿದರು. ನಿನ್ನಿಕಲ್ಲಿನ ಉದ್ದಮಜಲು ಎಂಬಲ್ಲಿ ರಸ್ತೆಗೆ ಧರೆ ಕುಸಿದು ಬಿದ್ದು ರಸ್ತೆ ಬಂದ್ ಆಗಿದ್ದು, ಅದರ ತೆರವಿಗೆ ಪಿಡಿಒ ಅವರಿಗೆ ಶಾಸಕರು ಸೂಚಿಸಿದರು. ಜು.22ರಂದು ಗಾಳಿಗೆ ಧ್ವಂಸಗೊಂಡ ಕಜೆಕ್ಕಾರಿನ ಅಂಬೇಡ್ಕರ್ ಕಾಲನಿಯ ಎರಡು ಮನೆಗಳನ್ನು ವೀಕ್ಷಿಸಿದ ಶಾಸಕರು ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ವರದಿ ನೀಡಲು ಗ್ರಾಮಕರಣಿಕರಿಗೆ ಸೂಚಿಸಿದರು.

ಮನೆ ಜಲಾವೃತ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭ ಚರಂಡಿಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, 34 ನೆಕ್ಕಿಲಾಡಿಯ ಬಾಲಕೃಷ್ಣ ಚೌಟ ಎಂಬವರ ಮನೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲೇ ಪಕ್ಕದಲ್ಲಿರುವ ಹಂಝ ಎಂಬವರ ಜಾಗಕ್ಕೂ ಮಳೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ನಿನ್ನಿಕಲ್ಲಿನ ಬಳಿ ಮರಿಕೆ ಎಂಬಲ್ಲಿ ಧರೆ ಕುಸಿದು ಬಿದ್ದಿದ್ದು, ಇನ್ನಷ್ಟು ಧರೆ ಕುಸಿದರೆ ಅಲ್ಲಿರುವ ಮನೆಗೆ ಅಪಾಯವಾಗುವ ಸಂಭವವಿದೆ. ನಿನ್ನಿಕಲ್ಲ್‍ನ ಸುರೇಶ್ ಮಡಿವಾಳ ಎಂಬವರ ಮನೆಯ ಹಿಂಬದಿಯ ಧರೆ ಕುಸಿದಿದ್ದು, ಇನ್ನಷ್ಟು ಧರೆ ಕುಸಿದರೆ ಅವರ ಶೌಚಾಲಯ ಹಾಗೂ ಸ್ನಾನಗೃಹಕ್ಕೆ ಹಾನಿಯಾ ಗುವ ಸಂಭವವಿದೆ. ನಟ್ಟಿಬೈಲ್‍ನ ಸತ್ಯನಾರಾಯಣ ಭಟ್ ಎಂಬವರ ಮನೆಯ ಬಳಿ ಧರೆ ಕುಸಿದು ಶೌಚಾಲಯಕ್ಕೆ ಹಾನಿಯಾಗಿದೆ. ಅದೇ ಪರಿಸರದ ಚೀಂಕ್ರ ಮುಗೇರ ಎಂಬವರ ಮನೆಯ ಹಿಂಬದಿಯ ಧರೆ ಕುಸಿತವಾಗಿದೆ. ಕಜೆಕ್ಕಾರಿನಲ್ಲಿಯೂ ಧರೆಯೊಂದು ಕುಸಿದು ಬಿದ್ದಿದೆ. 34 ನೆಕ್ಕಿಲಾಡಿಯಲ್ಲಿ ಎತ್ತರದ ಪ್ರದೇಶದಲ್ಲಿರುವ ಉಬೈದ್ ಅವರ ಮನೆಯ ಅಂಗಳ ಕುಸಿದಿದ್ದು, ಇನ್ನಷ್ಟು ಅಂಗಳ ಕುಸಿದರೆ ಮನೆಯೇ ಕುಸಿದು ಬೀಳುವ ಭೀತಿಯಿದೆ.

ದೇವಾಲಯದ ಬಳಿ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಶಿವಶಂಕರ್, ಉಪ್ಪಿನಂಗಡಿ ಗ್ರಾಮ ಕರಣಿಕ ರಮೇಶ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಗ್ರಾಮ ಸಹಾಯಕ ಯತೀಶ್ ಅವರು ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಂ ಗಾರ್ಡ್ ಜಿಲ್ಲಾ ಕಮಾಂಡರ್ ಡಾ. ಮುರಲೀ ಮೋಹನ್ ಚೂಂತಾರು ಉಪ್ಪಿನಂಗಡಿಯ ದೇವಸ್ಥಾನದ ಬಳಿ ಭೇಟಿ ನೀಡಿ ನದಿಗಳ ವೀಕ್ಷಣೆ ನಡೆಸಿದರು. ಮುಂಜಾಗೃತವಾಗಿ ಉಪ್ಪಿನಂಗಡಿಯ ದೇವಾಲಯದ ಬಳಿ ಹೋಂ ಗಾರ್ಡ್‍ಗಳ ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದು, ಕಂದಾಯ ಇಲಾಖೆಯ ತಂಡ ದಿನದ 24 ಗಂಟೆಯೂ ಕೇಂದ್ರ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News