ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ ಸುಸಜ್ಜಿತ ಉಚಿತ ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭ: ಸ್ಪೀಕರ್ ಯು.ಟಿ.ಖಾದರ್
ಮಂಗಳೂರು, ಅ.2: ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತವಾದ ಡಯಾಲಿಸಿಸ್ ಕೇಂದ್ರ ನಿರ್ಮಾಣ ಗೊಂಡಿದ್ದು, ಶೀಘ್ರದಲ್ಲೇ ಉಚಿತ ಡಯಾಲಿಸಿಸ್ ಚಿಕಿತ್ಸೆ ಪ್ರಾರಂಭಗೊಳ್ಳಲಿದೆ.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿರುವ ಡಯಾಲಿಸಿಸ್ ಕೇಂದ್ರದಲ್ಲಿ ಚಿಕಿತ್ಸಾ ಸೌಲಭ್ಯ ಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೂರು ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಹರ ಆಯ್ಕೆಗೆ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಹಾಗೂ ಮಂಗಳೂರು ಶಾಸಕ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ.
ಈ ಡಯಾಲಿಸಿಸ್ ಕೇಂದ್ರದಲ್ಲಿ ಉಳ್ಳಾಲದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸ್ಪತ್ರೆಯ ಹತ್ತಿರದ ನಿವಾಸಿ ಗಳಿಗೆ, ಹಿರಿಯರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.
ಯು.ಟಿ.ಖಾದರ್ ರಾಜ್ಯ ಆರೋಗ್ಯ ಸಚಿವರಾಗಿದ್ದ ವೇಳೆ ಆರಂಭಗೊಂಡಿದ್ದ ಈ ಆಸ್ಪತ್ರೆಯ ಕಟ್ಟಡದಲ್ಲಿ ಅಲೋಪತಿ, ಆಯುರ್ವೇದ ಹೋಮಿಯೋಪತಿ, ಯುನಾನಿ, ಯೋಗ, ಪಂಚಕರ್ಮ ಥೆರಪಿ ಚಿಕಿತ್ಸೆಗಳು ಲಭ್ಯವಿವೆ. ಉಳ್ಳಾಲದ ಐ ಆಸ್ಪತ್ರೆಯನ್ನು ಹೊರತುಪಡಿಸಿ ರಾಜ್ಯದ ಯಾವುದೇ ಸಮುದಾಯ ಆಸ್ಪತ್ರೆಯಲ್ಲಿ ಒಂದೇ ಕಡೆ ಇಂತಹ ಸೌಲಭ್ಯಗಳು ಲಭ್ಯವಿಲ್ಲ. ದಿನನಿತ್ಯ 500 ರಿಂದ 700 ರೋಗಿಗಳು ಉಳ್ಳಾಲ ಸಮದಾಯ ಆರೋಗ್ಯ ಕೇಂದ್ರದ ಪ್ರಯೋಜನ ಪಡೆಯುತ್ತಿದ್ದಾರೆ.
ಮುಂದೆ ಫಿಸಿಯೊಥೆರಪಿ , ಸ್ಪೀಚ್ ಆ್ಯಂಡ್ ಹಿಯರಿಂಗ್ ಚಿಕಿತ್ಸಾ ಸೌಲಭ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿದೆ. ಇದರ ಕಟ್ಟಡಕ್ಕೆ ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದೆ ಯು.ಟಿ.ಖಾದರ್ ತಿಳಿಸಿದ್ದಾರೆ.